ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದರೂ, ಈ ವರ್ಷ ಬ್ರಿಕ್ಸ್ (BRICS+) ಅಧ್ಯಕ್ಷತೆ ವಹಿಸಿರುವ ಭಾರತವು ಯಾಕೆ ಇನ್ನೂ ಶೃಂಗಸಭೆಯನ್ನು ಮುಂಚಿತವಾಗಿ ಆಯೋಜಿಸಿ ರಾಜತಾಂತ್ರಿಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಈ ಕುರಿತು ಎಕ್ಸ್ (X) ಖಾತೆಯಲ್ಲಿ ಕಿಡಿಕಾರಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪ್ರಧಾನಿ ಮೋದಿಯವರ ‘ವಿಶ್ವಗುರು’ ಹಣೆಪಟ್ಟಿಯನ್ನು ಲೇವಡಿ ಮಾಡಿದ್ದಾರಲ್ಲದೆ, ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರನ್ನು ಎದುರಿಸಲು ಮೋದಿ ಹೆದರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
18ನೇ ಬ್ರಿಕ್ಸ್ ಶೃಂಗಸಭೆಯು ಈ ವರ್ಷ ಭಾರತದ ಅಧ್ಯಕ್ಷತೆಯಲ್ಲಿ ದೆಹಲಿಯಲ್ಲಿ ನಡೆಯಬೇಕಿದೆ. ಯುದ್ಧದಿಂದಾಗಿ ಜಾಗತಿಕ ಇಂಧನ ಮತ್ತು ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ, ಈ ಸಭೆಯನ್ನು ಕೂಡಲೇ (ಮುಂಚಿತವಾಗಿ) ನಡೆಸಿ ಶಾಂತಿ ಸ್ಥಾಪನೆಗೆ ಭಾರತ ಮುಂದಾಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
2025ರಲ್ಲಿ ಬ್ರೆಜಿಲ್ ಅಧ್ಯಕ್ಷತೆಯಲ್ಲಿ ನಡೆದ ಬ್ರಿಕ್ಸ್ ಸಭೆಯು ಇರಾನ್ ಮೇಲಿನ ದಾಳಿಯನ್ನು ಖಂಡಿಸಿ ಜಂಟಿ ಹೇಳಿಕೆ ನೀಡಿತ್ತು. ಆದರೆ ಭಾರತವು ಇಲ್ಲಿಯವರೆಗೆ ಅಂತಹ ಯಾವುದೇ ಧೈರ್ಯ ತೋರಿಲ್ಲ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
“ಪ್ರಧಾನಿಯವರು ಕೇವಲ ಫೋನ್ ಕರೆಗಳ ಮೂಲಕ ವಿದೇಶಿ ನಾಯಕರೊಂದಿಗೆ ಮಾತನಾಡುತ್ತಿದ್ದಾರೆ. ಆದರೆ ಇಂತಹ ಗಂಭೀರ ಸಂಘರ್ಷದ ಸಮಯದಲ್ಲಿ ಫೋನ್ ಸಂಭಾಷಣೆಗಿಂತ ಶೃಂಗಸಭೆಯೇ ಹೆಚ್ಚು ಪರಿಣಾಮಕಾರಿ” ಎಂದು ಕಾಂಗ್ರೆಸ್ ಹೇಳಿದೆ.
ಅಮೆರಿಕ ಮತ್ತು ಇಸ್ರೇಲ್ ನಾಯಕರನ್ನು ಅಸಮಾಧಾನಗೊಳಿಸಲು ಇಷ್ಟವಿಲ್ಲದ ಕಾರಣ ಪ್ರಧಾನಿಯವರು ಈ ವಿಷಯದಲ್ಲಿ ಮೌನ ವಹಿಸುತ್ತಿದ್ದಾರೆ ಮತ್ತು ಭಾರತದ ರಾಜತಾಂತ್ರಿಕ ಪ್ರತಿಷ್ಠೆಯನ್ನು ಕುಗ್ಗಿಸುತ್ತಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.








