ವಾಷಿಂಗ್ಟನ್/ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷವು ಕೇವಲ ಜೀವಹಾನಿಯನ್ನಲ್ಲದೆ, ಬೃಹತ್ ಪ್ರಮಾಣದ ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತಿದೆ. ಕಳೆದ ಎರಡು ವಾರಗಳಲ್ಲಿ ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದಾಗಿ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳಿಗೆ ಸುಮಾರು 800 ಮಿಲಿಯನ್ ಡಾಲರ್ (ಅಂದಾಜು 6,700 ಕೋಟಿ ರೂಪಾಯಿ) ನಷ್ಟ ಸಂಭವಿಸಿದೆ ಎಂದು ಬಿಬಿಸಿ (BBC) ವರದಿ ಮಾಡಿದೆ.
ಇರಾನ್‌ನ ಸುಧಾರಿತ ಕ್ಷಿಪಣಿಗಳು ಅಮೆರಿಕದ ಅತ್ಯಾಧುನಿಕ ‘ಏರ್ ಡಿಫೆನ್ಸ್’ (ವಾಯು ರಕ್ಷಣಾ) ಮತ್ತು ಉಪಗ್ರಹ ಸಂವಹನ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡಿವೆ. ವಿಶೇಷವಾಗಿ ಜೋರ್ಡಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಲ್ಲಿರುವ ಅಮೆರಿಕದ ನೆಲೆಗಳಿಗೆ ಹೆಚ್ಚಿನ ಹಾನಿಯಾಗಿದೆ.
ಜೋರ್ಡಾನ್‌ನಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ನಡೆದ ದಾಳಿಯಲ್ಲಿ ಸುಮಾರು 4,000 ಕೋಟಿ ರೂಪಾಯಿ ($485 ಮಿಲಿಯನ್) ಮೌಲ್ಯದ ಅತ್ಯಾಧುನಿಕ ‘ಥಾಡ್’ (THAAD) ಕ್ಷಿಪಣಿ ನಿರೋಧಕ ರಾಡಾರ್ ವ್ಯವಸ್ಥೆಯು ಧ್ವಂಸಗೊಂಡಿದೆ ಎಂದು ವರದಿ ತಿಳಿಸಿದೆ.
ಉಳಿದ 2,700 ಕೋಟಿ ರೂಪಾಯಿಗಳಷ್ಟು ನಷ್ಟವು ಅಮೆರಿಕದ ವಿವಿಧ ಮಿಲಿಟರಿ ಕಟ್ಟಡಗಳು, ವಿಮಾನ ನಿಲ್ದಾಣದ ರನ್‌ವೇಗಳು ಮತ್ತು ಇತರ ತಾಂತ್ರಿಕ ಉಪಕರಣಗಳ ನಾಶದಿಂದ ಉಂಟಾಗಿದೆ ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಅಂಡ್ ಇಂಟರ್ನ್ಯಾಷನಲ್ ಸ್ಟಡೀಸ್ (CSIS) ವಿಶ್ಲೇಷಿಸಿದೆ.ಯುದ್ಧದ ಮೊದಲ 12 ದಿನಗಳಲ್ಲಿ ಅಮೆರಿಕವು ತನ್ನ ಶಸ್ತ್ರಾಸ್ತ್ರ ಮತ್ತು ಕಾರ್ಯಾಚರಣೆಗಾಗಿ ಈಗಾಗಲೇ ಸುಮಾರು 1.35 ಲಕ್ಷ ಕೋಟಿ ರೂಪಾಯಿ ($16.5 ಬಿಲಿಯನ್) ಖರ್ಚು ಮಾಡಿದೆ ಎಂದು ಅಂದಾಜಿಸಲಾಗಿದೆ.








