ದುಬೈ/ಶಾರ್ಜಾ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ಆಳವಾಗಿದ್ದು, ಶನಿವಾರ ರಾತ್ರಿ ಯುಎಇ (UAE) ಮೇಲೆ ಇರಾನ್ ಭೀಕರ ವೈಮಾನಿಕ ದಾಳಿ ನಡೆಸಿದೆ. ಯುಎಇ ರಕ್ಷಣಾ ಪಡೆಗಳು ಸಮಯಪ್ರಜ್ಞೆ ಮೆರೆದು ಇರಾನ್ ಉಡಾಯಿಸಿದ್ದ 3 ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು 8 ಡ್ರೋನ್‌ಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿವೆ. ಈ ನಡುವೆ ಶಾರ್ಜಾ ಕರಾವಳಿಯಲ್ಲಿ ಅನಾಮಧೇಯ ವಸ್ತುವೊಂದು ಹಡಗಿಗೆ ಅಪ್ಪಳಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಶನಿವಾರ ತಡರಾತ್ರಿ ದುಬೈ ಮತ್ತು ಅಬುಧಾಬಿಯ ಆಕಾಶದಲ್ಲಿ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದವು. ಇವು ಯುಎಇಯ ವಾಯು ರಕ್ಷಣಾ ವ್ಯವಸ್ಥೆಯು ಇರಾನ್ ಕ್ಷಿಪಣಿಗಳನ್ನು ಮಧ್ಯದಲ್ಲೇ ತಡೆದು ನಾಶಪಡಿಸಿದಾಗ ಉಂಟಾದ ಶಬ್ದಗಳೆಂದು ರಕ್ಷಣಾ ಸಚಿವಾಲಯ ಖಚಿತಪಡಿಸಿದೆ.
ಶಾರ್ಜಾದಿಂದ ಸುಮಾರು 15 ನಾಟಿಕಲ್ ಮೈಲಿ ದೂರದಲ್ಲಿ ಚಲಿಸುತ್ತಿದ್ದ ಹಡಗೊಂದಕ್ಕೆ ಅನಾಮಧೇಯ ವಸ್ತುವೊಂದು (Projectile) ಬಡಿದಿದೆ ಎಂದು ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ (UKMTO) ತಿಳಿಸಿದೆ. ಅದೃಷ್ಟವಶಾತ್ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ.
ತನ್ನ ದೇಶದ ಮೇಲಿನ ದಾಳಿಗೆ ಯುಎಇ ನೆಲವನ್ನು ಬಳಸಲು ಅವಕಾಶ ನೀಡಬಾರದು ಎಂದು ಇರಾನ್ ಈ ಹಿಂದೆ ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಈ ದಾಳಿಗಳು ನಡೆದಿವೆ.
ಸಾರ್ವಜನಿಕರಿಗೆ ಸೂಚನೆ: ದಾಳಿಯ ದೃಶ್ಯಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಯುಎಇ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈಗಾಗಲೇ ಈ ನಿಯಮ ಉಲ್ಲಂಘಿಸಿದ 109 ಜನರನ್ನು ಬಂಧಿಸಲಾಗಿದೆ.








