ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕಾರಣಿಗಳ ನಡುವಿನ ಫ್ಲೆಕ್ಸ್ ವಾರ್ ಹೊಸದೇನಲ್ಲ. ಆದರೆ, ಈಗ ಮಂಡ್ಯದ ಬೀದಿಗಳಲ್ಲಿ ಜನಪ್ರತಿನಿಧಿಗಳಿಗಿಂತಲೂ ಹೆಚ್ಚಾಗಿ ಐಪಿಎಸ್ ಅಧಿಕಾರಿಯೊಬ್ಬರ ಭಾವಚಿತ್ರವಿರುವ ಫ್ಲೆಕ್ಸ್ ಫೋಟೋಗಳು ರಾರಾಜಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ವಿ.ಜೆ. ಶೋಭರಾಣಿ ಅವರ ಈ ‘ಫ್ಲೆಕ್ಸ್ ಪ್ರೀತಿ’ ಈಗ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ.
ನಗರದ ತುಂಬೆಲ್ಲ ಎಸ್ಪಿಯವರದ್ದೇ ಪಟ!
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಂಡ್ಯ ನಗರದ ಪ್ರಮುಖ ವೃತ್ತಗಳು, ಹೆದ್ದಾರಿ ಬದಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಎಸ್ಪಿಯವರಿಗೆ ಹಬ್ಬದ ಶುಭಾಶಯ ಕೋರಿ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ವಿಶೇಷವೆಂದರೆ, ಈ ಫ್ಲೆಕ್ಸ್‌ಗಳಲ್ಲಿ ಕೇವಲ ಎಸ್ಪಿಯವರ ಫೋಟೋ ಮಾತ್ರವಲ್ಲದೆ, ಮಂಜುನಾಥ್ ಗೌಡ, ಶಿವಾನಂದ್ ಮತ್ತು ಪಾಪಣ್ಣ ಎಂಬುವವರ ಭಾವಚಿತ್ರಗಳೂ ಕಾಣಿಸಿಕೊಂಡಿವೆ. ಈ ಹಿಂದೆ ಶೋಭರಾಣಿ ಅವರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ಬಂದಾಗಲೂ ಸಹ ಇದೇ ರೀತಿ ನಗರದಾದ್ಯಂತ ಫ್ಲೆಕ್ಸ್ ಹಾಕಿ ಸ್ವಾಗತ ಕೋರಲಾಗಿತ್ತು.
ಅಧಿಕಾರಿಗಳಿಗೆ ಇದು ಶೋಭೆ ತರುತ್ತದೆಯೇ?
ಸಾಮಾನ್ಯವಾಗಿ ರಾಜಕಾರಣಿಗಳು ತಮ್ಮ ಪ್ರಚಾರಕ್ಕಾಗಿ ಇಂತಹ ಫ್ಲೆಕ್ಸ್‌ಗಳನ್ನು ಹಾಕಿಸಿಕೊಳ್ಳುವುದು ರೂಢಿ. ಆದರೆ, ಶಿಸ್ತುಬದ್ಧ ಇಲಾಖೆಯಾದ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ರಾಜಕಾರಣಿಗಳ ಮಾದರಿಯಲ್ಲಿ ಹೀಗೆ ಫ್ಲೆಕ್ಸ್ ಸಂಸ್ಕೃತಿಗೆ ಮೊರೆ ಹೋಗಿರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಐಪಿಎಸ್ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಇಷ್ಟೊಂದು ಹೈಪ್ ಪಡೆದುಕೊಳ್ಳುತ್ತಿರುವುದು ಇಲಾಖೆಯ ಘನತೆಗೆ ಕುಂದು ತರುತ್ತದೆಯೇ ಎಂಬ ಚರ್ಚೆ ಕೂಡ ಶುರುವಾಗಿದೆ.
ಸಾರ್ವಜನಿಕರ ಚರ್ಚೆ ಮತ್ತು ಕುತೂಹಲ
ಮಂಡ್ಯದ ಜನರು ಇಂತಹದ್ದನ್ನು ಈ ಹಿಂದೆ ನೋಡಿಲ್ಲ. ಅಧಿಕಾರಿಗಳು ಜನಸ್ನೇಹಿಯಾಗಿರುವುದು ಸ್ವಾಗತಾರ್ಹ, ಆದರೆ ಫ್ಲೆಕ್ಸ್ ಮೂಲಕ ಅತಿರಂಜಿತವಾಗಿ ಬಿಂಬಿಸಿಕೊಳ್ಳುವುದು ಬೇಕಿತ್ತೇ ಎಂಬುದು ಕೆಲವರ ವಾದ. ಸಾಮಾಜಿಕ ಜಾಲತಾಣಗಳಲ್ಲೂ ಈ ಫೋಟೋಗಳು ವೈರಲ್ ಆಗುತ್ತಿದ್ದು, ಅಧಿಕಾರಿಯೊಬ್ಬರು ಈ ಮಟ್ಟಿಗೆ ಫ್ಲೆಕ್ಸ್‌ಗಳಲ್ಲಿ ಕಾಣಿಸಿಕೊಳ್ಳುವುದು ರಾಜಕೀಯ ಪ್ರಭಾವದ ಮುನ್ಸೂಚನೆಯೇ ಅಥವಾ ಅಭಿಮಾನಿಗಳ ಅತಿರೇಕವೇ ಎಂಬ ಗೊಂದಲ ಸೃಷ್ಟಿಯಾಗಿದೆ.
ಒಟ್ಟಿನಲ್ಲಿ, ಮಂಡ್ಯ ಜಿಲ್ಲೆಯಲ್ಲಿ ಈಗ ರಾಜಕಾರಣಿಗಳ ಫ್ಲೆಕ್ಸ್‌ಗಳಿಗಿಂತ ಎಸ್ಪಿ ಶೋಭರಾಣಿ ಅವರ ಫ್ಲೆಕ್ಸ್‌ಗಳೇ ಸದ್ದು ಮಾಡುತ್ತಿರುವುದು ಮಾತ್ರ ಸುಳ್ಳಲ್ಲ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಈ ನಡವಳಿಕೆಯನ್ನು ಜನರು ಯಾವ ರೀತಿ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ; ಗಿರೀಶ್ ರಾಜ್, ಮಂಡ್ಯ..
ಚಾಮರಾಜನಗರ: ಪ್ಲೆಕ್ಸ್ ಗಳಲ್ಲಿ ಪ್ರಚಾರಕ್ಕಿಳಿದ್ರಾ ಜಿಲ್ಲಾ ಮಟ್ಟದ ಅಧಿಕಾರಿಗಳು.!?
ಸಾಗರದ ಮಣ್ಣಿನ ಸೌಹಾರ್ದದ ಕಂಪನ್ನು ಹೆಚ್ಚಿಸಿದ ರಂಜಾನ್: ಮಾಜಿ ಸದಸ್ಯ ಜಾಕಿರ್ ನಿವಾಸಕ್ಕೆ ಶಾಸಕ ಬೇಳೂರು ಭೇಟಿ








