ತುಮಕೂರು: ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರೊಬ್ಬರು ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ. ಮೂಲತಃ ಪಾವಗಡದ ಗುಂಡಾರ್ಲಹಳ್ಳಿಯವರಾದ ಮಲ್ಲಿಕಾರ್ಜುನ್ (59) ಮೃತಪಟ್ಟ ಅಧಿಕಾರಿಯಾಗಿದ್ದು, ಇವರು ತಮ್ಮ ಸೇವೆಯಿಂದ ನಿವೃತ್ತಿ ಹೊಂದಲು ಕೇವಲ 10 ದಿನಗಳಷ್ಟೇ ಬಾಕಿ ಇತ್ತು.
ಸಾವಿಗೂ ಮುನ್ನ ಸೆಲ್ಫಿ ವಿಡಿಯೋ:
ಮಲ್ಲಿಕಾರ್ಜುನ್ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸೆಲ್ಫಿ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ತಮ್ಮ ಸಾವಿಗೆ ಮೇಲಧಿಕಾರಿಗಳ ಕಿರುಕುಳವೇ ಕಾರಣ ಎಂದು ನೇರವಾಗಿ ಆರೋಪಿಸಿದ್ದಾರೆ.
“ನನ್ನ ಕುಟುಂಬದವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಅವರಿಗಾಗಿ ನಾನು ಏನಾದರೂ ಮಾಡಬೇಕಿತ್ತು, ಆದರೆ ಮಾಡಲು ಸಾಧ್ಯವಾಗುತ್ತಿಲ್ಲ. ಮೇಲಧಿಕಾರಿ ನೀಡಿದ ಕಿರುಕುಳದಿಂದ ನಾನು ಈ ನಿರ್ಧಾರಕ್ಕೆ ಬಂದಿದ್ದೇನೆ. ನನ್ನ ಕುಟುಂಬದವರು ಯಾರ ಮೇಲೂ ಸೇಡು ತೀರಿಸಿಕೊಳ್ಳುವುದು ಬೇಡ, ಅವರಿಗೆ ದೇವರು ಮತ್ತು ಕಾನೂನೇ ಶಿಕ್ಷೆ ನೀಡಲಿ,” ಎಂದು ವಿಡಿಯೋದಲ್ಲಿ ನೋವು ತೋಡಿಕೊಂಡಿದ್ದಾರೆ.
ಘಟನೆಯ ಹಿನ್ನೆಲೆ:
ಮಲ್ಲಿಕಾರ್ಜುನ್ ಅವರು ಪಾವಗಡದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಅವರ ವಿರುದ್ಧ ಕೆಲವು ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ಜಂಟಿ ನಿರ್ದೇಶಕರು ತನಿಖೆಗೆ ಆದೇಶಿಸಿದ್ದರು ಎನ್ನಲಾಗಿದೆ. ಈ ತನಿಖೆ ಮತ್ತು ಕೆಲಸದ ಒತ್ತಡದ ನಡುವೆ ಉಂಟಾದ ಕಿರುಕುಳವೇ ಅವರನ್ನು ಈ ಹಂತಕ್ಕೆ ತಳ್ಳಿದೆ ಎಂದು ಹೇಳಲಾಗುತ್ತಿದೆ.
ಕುಟುಂಬಸ್ಥರ ಆಕ್ರಂದನ:
ಮಗನ ಸಾವಿನಿಂದ ತಾಯಿ ಕೆಂಚಮ್ಮ ಅವರು ಕಂಗಾಲಾಗಿದ್ದಾರೆ. “ಊಟಕ್ಕೆ ಬರುವಂತೆ ಎಷ್ಟು ಬಾರಿ ಫೋನ್ ಮಾಡಿದರೂ ಮಗ ಕರೆ ಸ್ವೀಕರಿಸಲಿಲ್ಲ. ಅನುಮಾನಗೊಂಡು ಕಚೇರಿಗೆ ಹೋಗಿ ನೋಡಿದಾಗ ಬಾಗಿಲು ಒಳಗಿನಿಂದ ಹಾಕಿಕೊಂಡಿತ್ತು,” ಎಂದು ಅವರು ಕಣ್ಣೀರಿಟ್ಟಿದ್ದಾರೆ. ಮಲ್ಲಿಕಾರ್ಜುನ್ ಅವರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
ಪೊಲೀಸ್ ತನಿಖೆ:
ಮಲ್ಲಿಕಾರ್ಜುನ್ ಅವರ ಕುಟುಂಬಸ್ಥರು ನೀಡಿದ ದೂರು ಮತ್ತು ಸೆಲ್ಫಿ ವಿಡಿಯೋ ಆಧಾರದ ಮೇಲೆ, ಜಂಟಿ ನಿರ್ದೇಶಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108ರ ಅಡಿಯಲ್ಲಿ (ಆತ್ಮಹತ್ಯೆಗೆ ಪ್ರಚೋದನೆ) ಪ್ರಕರಣ ದಾಖಲಿಸಲಾಗಿದೆ. “ಮೃತರ ವಿರುದ್ಧ ಇತ್ತೀಚೆಗೆ ತನಿಖೆ ಆರಂಭಿಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ,” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
7 ಜನ ವಿದ್ಯಾರ್ಥಿಗಳಿಗೆ ಮನಸೋಇಚ್ಛೆ ಥಳಿಸಿದ ಆರೋಪ: ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ
SHOCKING : ಒಂದೇ ದೇಹಕ್ಕೆ ಅಂಟಿಕೊಂಡಂತೆ ಜನಿಸಿದ ಅವಳಿ ಮಕ್ಕಳು, ಆಘಾತದಿಂದ ತಾಯಿ ಸಾವು







