ಬೆಂಗಳೂರು: ನಗರದಲ್ಲಿ ಅನಧಿಕೃತ ಪ್ರತಿ ಫ್ಲೆಕ್ಸ್ ಗೆ 50 ಸಾವಿರದಿಂದ 1 ಲಕ್ಷ ದಂಡ ಹಾಕೋದಕ್ಕೆ ಚಿಂತನೆ ನಡೆಸಿರುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಅವರು, ವಿಧಾನಸೌಧದಲ್ಲಿ ಜಿಬಿಎ ಪಾಲಿಕೆಗಳ ಬಜೆಟ್ ಸಿದ್ಧತೆ ಹಾಗೂ ಜಿಬಿಎ ಕಾರ್ಯಕಾರಿ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
“ಇನ್ನು ನಾವು ಎಷ್ಟೇ ಹೇಳಿದರೂ ಫ್ಲೆಕ್ಸ್ ಹಾಕುವುದು ಹೆಚ್ಚುತ್ತಿದೆ. ನಮ್ಮ ಪಕ್ಷವೂ ಸೇರಿದಂತೆ ಎಲ್ಲಾ ಪಕ್ಷದವರು ಫ್ಲೆಕ್ಸ್ ಹಾಕುತ್ತಿದ್ದಾರೆ. ಇನ್ನು ಮುಂದೆ ಯಾರು ಅನಧಿಕೃತ ಫ್ಲೆಕ್ಸ್ ಹಾಕುತ್ತಾರೋ ಅವರಿಗೆ ಪ್ರತಿ ಫ್ಲೆಕ್ಸ್ ಗೆ ಅದನ್ನು ಹಾಕಿದವರಿಗೆ 50 ಸಾವಿರದಿಂದ ಒಂದು ಲಕ್ಷ ರೂ. ವರೆಗೆ ದಂಡ ವಿಧಿಸಲು ಸೂಚಿಸಿದ್ದೇವೆ. ಹುಟ್ಟುಹಬ್ಬ, ಶುಭಾಶಯ ಸೇರಿದಂತೆ ಫ್ಲೆಕ್ಸ್ ಹಾವಳಿ ಹೆಚ್ಚಾಗಿದೆ. ಸರ್ಕಾರದಿಂದ ಜಾಹೀರಾತು ಪ್ರಕಟಿಸಲು ಕೆಲವು ಜಾಗ ನಿಗದಿ ಮಾಡಿದ್ದು, ಅಲ್ಲಿ ಅನುಮತಿ ಪಡೆದು ಹಾಕಿಕೊಳ್ಳಲಿ. ಇದರ ಹೊರತಾಗಿ ಫ್ಲೆಕ್ಸ್ ಹಾಕಿದರೆ ನಂತರದ ಪರಿಣಾಮವನ್ನು ನೀವು ಅನುಭವಿಸಬೇಕಾಗುತ್ತದೆ. ಈ ವಿಚಾರವಾಗಿ ಪೊಲೀಸ್ ಹಾಗೂ ಪಾಲಿಕೆಗಳ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ” ಎಂದು ಹೇಳಿದರು.
“ಇನ್ನು ಪಾಲಿಕೆ ವ್ಯಾಪ್ತಿಯ ಪಾರ್ಕ್ ಗಳನ್ನು ಸ್ಥಳೀಯ ಶಾಸಕರ ಜೊತೆ ಚರ್ಚೆ ಮಾಡಿ ಯಾವ ಸಮಯದಲ್ಲಿ ತೆಗೆಯಬೇಕು, ಯಾವ ಸಮಯದಲ್ಲಿ ತೆಗೆಯಬಾರದು ಎಂದು ತೀರ್ಮಾನ ಮಾಡಬೇಕು” ಎಂದರು.








