ನವದೆಹಲಿ: ಡಿಜಿಟಲ್ ಪಾವತಿ ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ, ಆತುರದಲ್ಲಿ ಅಥವಾ ಅಜಾಗರೂಕತೆಯಿಂದ ತಪ್ಪಾದ ಫೋನ್ ನಂಬರ್ ಅಥವಾ ಯುಪಿಐ ಐಡಿಗೆ ಹಣ ವರ್ಗಾಯಿಸುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಗಾಬರಿಯಾಗುವ ಅಗತ್ಯವಿಲ್ಲ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಹಣವನ್ನು ಮರಳಿ ಪಡೆಯಲು ಸುಲಭವಾದ ಮಾರ್ಗ ಮತ್ತು ಮೀಸಲಾದ ಸಹಾಯವಾಣಿ ಸಂಖ್ಯೆಯನ್ನು ಒದಗಿಸಿದೆ.
ತಪ್ಪು ವರ್ಗಾವಣೆ ನಡೆದ ತಕ್ಷಣ ಎನ್ಪಿಸಿಐನ ಅಧಿಕೃತ ಟೋಲ್-ಫ್ರೀ ಸಂಖ್ಯೆ 1800-120-1740 ಗೆ ಕರೆ ಮಾಡಿ ದೂರನ್ನು ದಾಖಲಿಸಿ.ನಿಮ್ಮ ಬ್ಯಾಂಕ್ನ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ ‘ಟ್ರಾನ್ಸಾಕ್ಷನ್ ಐಡಿ’ (Transaction ID) ನೀಡಿ ದೂರು ನೀಡಿ. ಹಣ ವರ್ಗಾವಣೆಯಾದ 24 ರಿಂದ 48 ಗಂಟೆಗಳ ಒಳಗಾಗಿ ದೂರು ನೀಡುವುದು ಅತ್ಯಗತ್ಯ.ಒಂದು ವೇಳೆ ಬ್ಯಾಂಕ್ನಿಂದ ಸ್ಪಂದನೆ ಸಿಗದಿದ್ದರೆ, NPCI ಅಧಿಕೃತ ವೆಬ್ಸೈಟ್ನ (npci.org.in) ‘Get in Touch’ ವಿಭಾಗಕ್ಕೆ ಹೋಗಿ ‘UPI Dispute Redressal Mechanism’ ಅಡಿಯಲ್ಲಿ ದೂರು ಸಲ್ಲಿಸಬಹುದು.
30 ದಿನಗಳ ಒಳಗಾಗಿ ಸಮಸ್ಯೆ ಬಗೆಹರಿಯದಿದ್ದರೆ, ನೀವು ಆರ್ಬಿಐ (RBI) ಡಿಜಿಟಲ್ ಪಾವತಿ ಲೋಕಪಾಲರಿಗೆ ದೂರು ನೀಡಬಹುದು.
ಹಣ ವರ್ಗಾವಣೆಯಾದ ತಕ್ಷಣ ಬರುವ ಎಸ್ಎಮ್ಎಸ್ (SMS) ಅನ್ನು ಡಿಲೀಟ್ ಮಾಡಬೇಡಿ, ಅದರಲ್ಲಿರುವ ರೆಫರೆನ್ಸ್ ಸಂಖ್ಯೆ ದೂರು ನೀಡಲು ಬಹಳ ಮುಖ್ಯ.
ಯಾವುದೇ ಕಾರಣಕ್ಕೂ ಅಪರಿಚಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ನಿಮ್ಮ ಒಟಿಪಿ (OTP) ಹಂಚಿಕೊಳ್ಳಬೇಡಿ.







