ಟೆಹ್ರಾನ್/ದುಬೈ: ಜಗತ್ತಿನ ಅತಿ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಇರಾನ್ ಈಗ ತನ್ನ ಆದಾಯದ ಮೂಲವನ್ನಾಗಿ ಮಾಡಿಕೊಂಡಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆ, ಈ ಮಾರ್ಗದ ಮೂಲಕ ಸಂಚರಿಸುವ ಹಡಗುಗಳಿಗೆ ಇರಾನ್ ಭಾರಿ ಮೊತ್ತದ ‘ಸುರಕ್ಷತಾ ಶುಲ್ಕ’ ವಿಧಿಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಕೇವಲ ಒಂದು ತೈಲ ಟ್ಯಾಂಕರ್ ಹಡಗು ಸುರಕ್ಷಿತವಾಗಿ ಸಾಗಲು ಇರಾನ್‌ಗೆ 2 ಮಿಲಿಯನ್ ಡಾಲರ್ (ಸುಮಾರು 16.6 ಕೋಟಿ ರೂಪಾಯಿ) ಪಾವತಿಸಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಈ ಮಾರ್ಗವನ್ನು ನಿಯಂತ್ರಿಸುತ್ತಿದ್ದು, ತನ್ನ ಕರಾವಳಿಯ ಸಮೀಪದಿಂದ ಹಾದುಹೋಗುವ ಹಡಗುಗಳಿಂದ ಈ ಮೊತ್ತವನ್ನು ವಸೂಲಿ ಮಾಡುತ್ತಿದೆ ಎನ್ನಲಾಗಿದೆ.
ಇರಾನ್‌ನೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವ ಭಾರತ, ಚೀನಾ ಮತ್ತು ಪಾಕಿಸ್ತಾನದಂತಹ ದೇಶಗಳ ಹಡಗುಗಳು ನೇರ ಮಾತುಕತೆಯ ಮೂಲಕ ಸಂಚರಿಸುತ್ತಿವೆ. ಆದರೆ, ಇತರೆ ವಾಣಿಜ್ಯ ಹಡಗುಗಳಿಗೆ ಈ ‘ಟೋಲ್’ ಅನಿವಾರ್ಯವಾಗಿದೆ.
ಇರಾನ್ ಸಂಸತ್ತು ಈಗ ಒಂದು ಹೆಜ್ಜೆ ಮುಂದೆ ಹೋಗಿದ್ದು, ಹಾರ್ಮುಜ್ ಜಲಸಂಧಿಯನ್ನು ಬಳಸುವ ಪ್ರತಿ ಹಡಗಿನ ಮೇಲೆ ಅಧಿಕೃತವಾಗಿ ‘ಸಾರಿಗೆ ತೆರಿಗೆ’ (Transit Tax) ವಿಧಿಸುವ ಕಾನೂನನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.
ಒಂದು ಹಡಗಿಗೆ 16 ಕೋಟಿ ರೂಪಾಯಿ ಹೆಚ್ಚುವರಿ ಶುಲ್ಕ ಮತ್ತು ವಿಮಾ ವೆಚ್ಚ ಏರಿಕೆಯಾಗಿರುವುದರಿಂದ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 120 ಡಾಲರ್ ದಾಟುವ ಭೀತಿ ಎದುರಾಗಿದೆ.








