ಬೆಂಗಳೂರು: ರಾಜ್ಯದ ಕಂದಾಯ ಇಲಾಖೆಯ ವಿವಿಧ ಶಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಬಾರಿಯ ಯುಗಾದಿ ಹಬ್ಬದ ರಜೆ ಕೈತಪ್ಪಿದೆ. ಮಾರ್ಚ್.19ರ ಇಂದು ಯುಗಾದಿ ಹಬ್ಬವಿದ್ದರೂ, ಅಂದು ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಸರ್ಕಾರ ಆದೇಶ ಹೊರಡಿಸಿದೆ.
ರಜೆ ರದ್ದತಿಗೆ ಕಾರಣವೇನು?
ಕರ್ನಾಟಕ ವಿಧಾನಸಭೆಯ ಅಧಿವೇಶನವು ಪ್ರಸ್ತುತ ನಡೆಯುತ್ತಿದ್ದು, ಮಾರ್ಚ್ 23ರಂದು ಕಂದಾಯ ಇಲಾಖೆಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಉತ್ತರಿಸಲು ಬಾಕಿ ಇವೆ. ಈ ಹಿನ್ನೆಲೆಯಲ್ಲಿ, ವಿಧಾನಸಭೆಯ ಪ್ರಶ್ನೆಗಳಿಗೆ ನಿಖರವಾದ ಉತ್ತರಗಳನ್ನು ಸಿದ್ಧಪಡಿಸಲು ಮತ್ತು ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರ ಈ ಕಠಿಣ ನಿರ್ಧಾರ ತಗೆದುಕೊಂಡಿದೆ.
ಯಾವೆಲ್ಲಾ ಶಾಖೆಗಳ ಸಿಬ್ಬಂದಿ ಹಾಜರಾಗಬೇಕು?
ಕಂದಾಯ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಸೂಚನೆಯಂತೆ ಕೆಳಕಂಡ ಶಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ 19.03.2026ರ ಇಂದು ಕಡ್ಡಾಯವಾಗಿ ಹಾಜರಿರಬೇಕು:
-
ಮುಜರಾಯಿ
-
ಭೂ ಮಂಜೂರಾತಿ-1, 2 ಮತ್ತು 3
-
ಸೇವೆಗಳು-3
-
ಭೂ ಕಂದಾಯ
-
ಭೂ ಮಾಪನ
-
ಭೂಮಿ
-
ಭೂಸುಧಾರಣಾ ಕೋಶ
ಸರ್ಕಾರದ ಆದೇಶದಲ್ಲಿ ಏನಿದೆ?
ಸಚಿವಾಲಯದ ಉಪ ಕಾರ್ಯದರ್ಶಿ (ಸೇವೆಗಳು-2, ಸಮನ್ವಯ) ಕಲಾವತಿ ಎಸ್.ಎನ್. ಅವರು ಈ ಟಿಪ್ಪಣಿಯನ್ನು ಹೊರಡಿಸಿದ್ದು, ಬಾಕಿ ಇರುವ ವಿಧಾನಸಭಾ ಪ್ರಶ್ನೆಗಳಿಗೆ ತಕ್ಷಣವೇ ಉತ್ತರ ಸಿದ್ಧಪಡಿಸುವ ನಿಟ್ಟಿನಲ್ಲಿ ಈ ಕ್ರಮ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.
ವರ್ಷದ ಮೊದಲ ಹಬ್ಬವನ್ನೇ ಕಚೇರಿಯಲ್ಲಿ ಕಳೆಯಬೇಕಾಗಿ ಬಂದಿರುವುದು ಇಲಾಖೆಯ ನೌಕರರಲ್ಲಿ ಅಸಮಾಧಾನ ಮೂಡಿಸಿದೆ. ಆದರೆ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಆದೇಶ ಪಾಲನೆ ಮಾಡುವುದು ಕಡ್ಡಾಯವಾಗಿದೆ.
ವಿಧಾನಸಭಾ ಅಧಿವೇಶನದ ಕಾರ್ಯದೊತ್ತಡದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಪ್ರಮುಖ ಶಾಖೆಗಳ ಸಿಬ್ಬಂದಿಗೆ ಯುಗಾದಿ ಹಬ್ಬದ ರಜೆ ರದ್ದುಪಡಿಸಲಾಗಿದೆ.









