ಬೆಂಗಳೂರು: ಧ್ರುವ ಸರ್ಜಾ ನಟನೆಯ ಮತ್ತು ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡಿನ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಹಾಡನ್ನು ಅಧಿಕೃತವಾಗಿ ನಿಷೇಧಿಸಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಈ ನಡುವೆ ಕಾನೂನಿನ ಆದೇಶಕ್ಕೂ ಡೋಂಟ್ ಕೇರ್ ಅನ್ನೋ ಹಾಗೇ ಚಿತ್ರ ತಂಡ ನಡೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಇನ್ನೂ ಕೂಡ ಸರ್ಸೆ ನಿನ್ನ ಸೆರಗ ಸರ್ಸೆ’ ಕೂಡ ಯೂಟ್ಯೂಬ್ನಲ್ಲಿ ಲಭ್ಯವಾಗುತ್ತಿದ್ದು, ಹಲವರಲ್ಲಿ ಆತಂಕ ಮನೆ ಮಾಡಿದೆ ಎನ್ನಲಾಗುತ್ತಿದೆ. ಈ ನೆಲದ ಕಾನೂನಿಗೆ ಸಿನಿಮಾ ತಂಡದವರು ಬೆಲೆ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ಆನಂದ್ ಬಡೋರಿಯಾ ಅವರು ಕೇಳಿದ ಪ್ರಶ್ನೆಗೆ ಸಚಿವ ಅಶ್ವಿನಿ ವೈಷ್ಣವ್ ಉತ್ತರಿಸಿದ್ದಾರೆ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ಸಂಪೂರ್ಣವಾಗಿ ಪ್ರಶ್ನಾತೀತವಲ್ಲ ಎಂದು ಅವರು ತಿಳಿಸಿದ್ದಾರೆ. ಸಂವಿಧಾನದ ವಿಧಿ 19(2) ಅಡಿಯಲ್ಲಿ ಸಾರ್ವಜನಿಕ ಸುವ್ಯವಸ್ಥೆ, ಸಭ್ಯತೆ ಮತ್ತು ನೈತಿಕತೆಗೆ ಧಕ್ಕೆ ಬಂದಾಗ ಇಂತಹ ಕಠಿಣ ನಿರ್ಬಂಧಗಳನ್ನು ಹೇರಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿವಾದಕ್ಕೆ ಕಾರಣವಾದ ಅಂಶಗಳು
ಜೋಗಿ ಪ್ರೇಮ್ ನಿರ್ದೇಶನದ ಈ ಹಾಡು ಬಿಡುಗಡೆಯಾದ ದಿನದಿಂದಲೇ ತೀವ್ರ ಟೀಕೆಗೆ ಗುರಿಯಾಗಿತ್ತು. ಹಾಡಿನ ಸಾಹಿತ್ಯ ಮತ್ತು ದೃಶ್ಯಗಳು ಅಶ್ಲೀಲತೆಯಿಂದ ಕೂಡಿದ್ದು, ಮಹಿಳೆಯರನ್ನು ಕೀಳಾಗಿ ಚಿತ್ರಿಸುತ್ತಿವೆ ಎಂಬ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಹರಿಯಾಣದ ಮಹಿಳಾ ಆಯೋಗಗಳು ಹಾಡಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದವು.
ಡಿಜಿಟಲ್ ಮಾಧ್ಯಮಗಳಲ್ಲಿ ಇಂತಹ ವಿಷಯಗಳು ವೇಗವಾಗಿ ಹರಡುವುದರಿಂದ ಸಮಾಜದ ಹಿತದೃಷ್ಟಿಯಿಂದ ನಿಷೇಧ ಅನಿವಾರ್ಯವಾಗಿದೆ ಎಂದು ಸರ್ಕಾರ ಹೇಳಿದೆ. ಮಹಿಳೆಯರು ಮತ್ತು ಮಕ್ಕಳ ಗೌರವ ಕಾಪಾಡುವ ನಿಟ್ಟಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಚಿವರು ಸದನದಲ್ಲಿ ಭರವಸೆ ನೀಡಿದ್ದಾರೆ.
ಸೆಲೆಬ್ರಿಟಿಗಳ ಆಕ್ರೋಶ ಮತ್ತು ಚಿತ್ರತಂಡದ ಮೇಲೆ ಪರಿಣಾಮ
ಈ ಹಾಡಿನ ಕುರಿತು ಚಿತ್ರರಂಗದ ಪ್ರಮುಖರಾದ ರವಿ ಕಿಶನ್, ಕಂಗನಾ ರಣಾವತ್ ಮತ್ತು ಗಾಯಕ ಅರ್ಮಾನ್ ಮಲಿಕ್ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾಡಿನಲ್ಲಿ ಕಾಣಿಸಿಕೊಂಡಿದ್ದ ನಟಿ ನೋರಾ ಫತೇಹಿ ಕೂಡ ಈ ವಿವಾದಕ್ಕೆ ಚಿತ್ರತಂಡವೇ ಹೊಣೆ ಎಂದು ಹೇಳಿಕೆ ನೀಡಿದ್ದಾರೆ. ಈ ಸರಣಿ ಬೆಳವಣಿಗೆಗಳು ಕೆಡಿ ಸಿನಿಮಾ ತಂಡಕ್ಕೆ ಮತ್ತು ಕನ್ನಡ ಚಿತ್ರರಂಗಕ್ಕೆ ಮುಜುಗರ ಉಂಟುಮಾಡಿವೆ.








