ಬೆಂಗಳೂರು: ನಾಳೆಯಿಂದ (ಮಾರ್ಚ್ 18) ರಿಂದ ಏಪ್ರಿಲ್ 2ರವರೆಗೆ ರಾಜ್ಯಾದ್ಯಂತ ನಡೆಯಲಿರುವ ಎಸ್ಎಸ್ಎಲ್ಸಿ (SSLC) ವಾರ್ಷಿಕ ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಿಧಾನಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರು, ವಿರೋಧ ಪಕ್ಷದ ನಾಯಕರು ಹಾಗೂ ಸಭಾಪತಿಗಳು ಒಕ್ಕೊರಲಿನಿಂದ ಶುಭ ಹಾರೈಸಿದರು.
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ ಭರವಸೆಯ ನುಡಿಗಳು:
“ನಾಳೆಯಿಂದ ಆರಂಭವಾಗುತ್ತಿರುವ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ಒಟ್ಟು 8,65,988 ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಹಾಗೂ ನನ್ನ ವೈಯಕ್ತಿಕವಾಗಿ ಶುಭ ಹಾರೈಸುತ್ತೇನೆ. ವಿದ್ಯಾರ್ಥಿಗಳು ಯಾವುದೇ ಆತಂಕ, ಭಯವಿಲ್ಲದೆ ಪರೀಕ್ಷೆ ಎದುರಿಸಬೇಕು. ವಿದ್ಯಾರ್ಥಿಗಳಿಗೆ ಮೂರು ಪರೀಕ್ಷೆಗಳ (ಪರೀಕ್ಷೆ 1, 2, 3) ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಕಡಿಮೆ ಅಂಕ ಬಂದರೆ ಅಥವಾ ಅನುತ್ತೀರ್ಣರಾದರೆ ಮತ್ತೆ ಪರೀಕ್ಷೆ ಬರೆಯಲು ಅವಕಾಶವಿರುವುದರಿಂದ ಯಾರೂ ಧೃತಿಗೆಡಬಾರದು ಹಾಗೂ ಆತಂಕಪಡುವ ಅಗತ್ಯವಿಲ್ಲ” ಎಂದು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಮಧು ಬಂಗಾರಪ್ಪ ಅವರ ನುಡಿಗಳು:
ವಿಧಾನ ಪರಿಷತ್ ಹಾಗೂ ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, “ದ್ವಿತೀಯ ಪಿಯುಸಿ ಪರೀಕ್ಷೆಗಳು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ನಾಳೆಯಿಂದ ಏಪ್ರಿಲ್ 2ರವರೆಗೆ ಸುಮಾರು 8.66 ಲಕ್ಷ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಮಕ್ಕಳಿಗೆ ಪರೀಕ್ಷೆಯ ಭಯ ನಿವಾರಿಸಲು ನಮ್ಮ ಸರ್ಕಾರ ವರ್ಷದಲ್ಲಿ 3 ಪರೀಕ್ಷೆಗಳ ಅವಕಾಶ (Exam 1, 2 & 3) ನೀಡಿದೆ. ಬಡ ವಿದ್ಯಾರ್ಥಿಗಳಿಗೆ ಹೊರೆಯಾಗದಿರಲಿ ಹಾಗೂ ಪೋಷಕರ ಬಳಿ ಮತ್ತೆ ಹಣ ಕೇಳಲು ಹಿಂಜರಿಕೆಯಾಗದಿರಲಿ ಎಂಬ ಸದುದ್ದೇಶದಿಂದ, ಅನುತ್ತೀರ್ಣರಾದವರಿಗೆ ಮರುಪರೀಕ್ಷೆ ಬರೆಯಲು ಇದ್ದ ಶುಲ್ಕವನ್ನು ನಮ್ಮ ಸರ್ಕಾರ ರದ್ದುಪಡಿಸಿದೆ. ಅಲ್ಲದೆ, ಖಾಸಗಿ ಶಾಲೆಗಳ ಮಾದರಿಯಲ್ಲಿ ಸರ್ಕಾರಿ ಶಾಲೆಗಳಲ್ಲೂ ಯಶಸ್ವಿಯಾಗಿ ಪೋಷಕರು-ಶಿಕ್ಷಕರ ಸಭೆ (PTM) ನಡೆಸಲಾಗಿದೆ. ಪರೀಕ್ಷಾ ಪ್ರಕ್ರಿಯೆಗೆ ಸಹಕರಿಸುತ್ತಿರುವ ಗೃಹ ಇಲಾಖೆ, ಶಿಕ್ಷಕರು ಹಾಗೂ ಪೋಷಕರಿಗೆ ಧನ್ಯವಾದಗಳು. ಪರೀಕ್ಷೆ ಬರೆಯುವ ಎಲ್ಲರಿಗೂ ಈ ಸದನದ ಮೂಲಕ ಒಳಿತಾಗಲಿ ಎಂದು ಆಶಿಸುತ್ತೇನೆ” ಎಂದರು.
ವಿರೋಧ ಪಕ್ಷದ ನಾಯಕ ಶ್ರೀ ಆರ್. ಅಶೋಕ್ ಅವರ ಕಿವಿಮಾತು:
“ಎಸ್ಎಸ್ಎಲ್ಸಿ ಎಂಬುದು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟ. ಪೋಷಕರು ಕೊನೆಯ ಕ್ಷಣದಲ್ಲಿ ಮಕ್ಕಳ ಮೇಲೆ ಅನಗತ್ಯವಾಗಿ ಅಂಕಗಳಿಗಾಗಿ ಒತ್ತಡ ಹೇರಿ ಅವರಿಗೆ ಮಾನಸಿಕ ಹಿಂಸೆ ನೀಡಬಾರದು. ಇದೇ ವೇಳೆ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಪ್ರಶ್ನೆಪತ್ರಿಕೆ ಹರಿಬಿಟ್ಟು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸುವ ಕಿಡಿಗೇಡಿಗಳ ವಿರುದ್ಧ ಸರ್ಕಾರ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಬೇಕು. ನಾಡಿನ ಎಲ್ಲಾ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಸಿಗಲಿ” ಎಂದು ಹಾರೈಸಿದರು.
ವಿಧಾನ ಪರಿಷತ್ ಉಪಸಭಾಪತಿಗಳ ಕಿವಿಮಾತು:
ವಿಧಾನ ಪರಿಷತ್ನಲ್ಲಿ ಮಾತನಾಡಿದ ಉಪಸಭಾಪತಿಗಳು, “ಪರೀಕ್ಷೆ ಎಂದರೆ ಯುದ್ಧವಲ್ಲ, ವಿದ್ಯಾರ್ಥಿಗಳು ತಾವು ಓದಿದ್ದನ್ನು ಬರೆಯುವ ಒಂದು ವೇದಿಕೆ. ಯಾವುದೇ ಭಯವಿಲ್ಲದೆ, ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ” ಎಂದು ಇಡೀ ಸದನದ ಪರವಾಗಿ ಶುಭಕೋರಿದರು.
ಪ್ರಸ್ತುತ ಅಧಿವೇಶನದಲ್ಲೇ 𝗞𝗔𝗢𝗠𝗔 𝟮𝟬𝟮𝟱 ಕಾಯ್ದೆ ಜಾರಿಗೊಳಿಸಿ: ರಾಜ್ಯ ಸರ್ಕಾರಕ್ಕೆ 𝗕𝗔𝗙 ಆಗ್ರಹ
ಮಂಡ್ಯದಲ್ಲಿ ಗೃಹಬಳಕೆ ಅನಿಲ ಸಿಲಿಂಡರ್ ಕೊರತೆ ಇಲ್ಲ: ಡಿಸಿ ಡಾ.ಕುಮಾರ್ ಮಾಹಿತಿ








