ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (PTCL) ಕಾಯ್ದೆಯಡಿ ಮಂಜೂರಾದ ಜಮೀನಿನ ಮೊದಲ ಮಾರಾಟ ಪ್ರಕ್ರಿಯೆ ಕಾನೂನುಬಾಹಿರ ಎಂದು ಘೋಷಣೆಯಾದರೆ, ಅದರ ನಂತರ ನಡೆದ ಎಲ್ಲಾ ಸುತ್ತಿನ ಮಾರಾಟ ಪ್ರಕ್ರಿಯೆಗಳೂ ತಾನಾಗಿಯೇ ರದ್ದಾಗಲಿವೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿವೆ.
“ತಮ್ಮಲ್ಲಿ ಇಲ್ಲದ್ದನ್ನು ಬೇರೆಯವರಿಗೆ ಕೊಡಲಾಗುವುದಿಲ್ಲ” ಎಂಬ ಪ್ರಸಿದ್ಧ ಕಾನೂನು ತತ್ವವನ್ನು ಉಲ್ಲೇಖಿಸಿರುವ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠವು, ಹಲವು ದಶಕಗಳ ಕಾಲ ನಡೆದ ಭೂ ವಿವಾದದ ಅರ್ಜಿಯನ್ನು ವಜಾಗೊಳಿಸಿ ಈ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ:
-
ಬೆಂಗಳೂರು ಪೂರ್ವ ತಾಲೂಕಿನ ಖಾಜಿ ಸೋನ್ನೆನಹಳ್ಳಿ ಗ್ರಾಮದಲ್ಲಿ 1947ರಲ್ಲಿ ಟಿ. ಪೂಜಪ್ಪ ಎಂಬುವರಿಗೆ ಸರ್ಕಾರ 3 ಎಕರೆ 26 ಗುಂಟೆ ಜಮೀನು ಮಂಜೂರು ಮಾಡಿತ್ತು.
-
ಪೂಜಪ್ಪ ಅವರ ನಿಧನದ ನಂತರ 1956ರಲ್ಲಿ ಅವರ ಕುಟುಂಬಸ್ಥರು ಈ ಜಮೀನನ್ನು ಬಸಮ್ಮ ಎಂಬುವರಿಗೆ ಮಾರಾಟ ಮಾಡಿದ್ದರು.
-
ನಂತರ ಈ ಜಮೀನು ಹಲವು ಕೈ ಬದಲಾಗಿ, ಅಂತಿಮವಾಗಿ 1988ರಲ್ಲಿ ಎಸ್.ಕೆ. ಜಯರಾಮ್ ಎಂಬುವರು ಪದ್ಮಾವತಿ ಎಂಬುವವರಿಂದ ಖರೀದಿಸಿದ್ದರು.
ನ್ಯಾಯಾಲಯದ ಪ್ರಮುಖ ಅವಲೋಕನಗಳು:
-
ಮೂಲ ಮಾರಾಟವೇ ಅಮಾನ್ಯ: 1956ರಲ್ಲಿ ಬಸಮ್ಮ ಅವರಿಗೆ ಮಾಡಿದ್ದ ಮೊದಲ ಮಾರಾಟವೇ ಸರ್ಕಾರದ ಷರತ್ತುಗಳ ಉಲ್ಲಂಘನೆಯಾಗಿರುವುದರಿಂದ ಅದು ಅಸಿಂಧು. ಮೂಲ ಮಾರಾಟಗಾರನಿಗೇ ಹಕ್ಕು ಇಲ್ಲದಿದ್ದಾಗ, ಅವರಿಂದ ಜಮೀನು ಕೊಂಡವರು ಮುಂದೆ ಅದನ್ನು ಯಾರಿಗೂ ಕಾನೂನುಬದ್ಧವಾಗಿ ವರ್ಗಾಯಿಸಲು ಸಾಧ್ಯವಿಲ್ಲ.
-
ಸರಣಿ ಮಾರಾಟಗಳಿಗೆ ಬೆಲೆಯಿಲ್ಲ: ಮೊದಲ ವ್ಯವಹಾರವೇ ‘ಶೂನ್ಯ’ (Void) ಎಂದಾದ ಮೇಲೆ, ನಂತರ ನಡೆದ ಎಲ್ಲಾ ಮಾರಾಟಗಳು ಕಾನೂನಿನ ದೃಷ್ಟಿಯಲ್ಲಿ ಅಸ್ತಿತ್ವದಲ್ಲಿರುವುದಿಲ್ಲ. ಆದ್ದರಿಂದ 1988ರಲ್ಲಿ ಜಯರಾಮ್ ಅವರು ಮಾಡಿಕೊಂಡ ಖರೀದಿಯೂ ರದ್ದಾಗುತ್ತದೆ.
-
ಪಿಟಿಸಿಎಲ್ ಕಾಯ್ದೆ ಸೆಕ್ಷನ್ 4(1): ಈ ಕಾಯ್ದೆಯ ಪ್ರಕಾರ ಮಂಜೂರಾದ ಜಮೀನನ್ನು ಷರತ್ತು ಉಲ್ಲಂಘಿಸಿ ಮಾರಾಟ ಮಾಡಿದರೆ, ಅದು ಸ್ವಯಂ ಅಮಾನ್ಯವಾಗುತ್ತದೆ. ಆ ವ್ಯವಹಾರದಿಂದ ಯಾವುದೇ ಕಾನೂನುಬದ್ಧ ಮಾಲೀಕತ್ವ ಸೃಷ್ಟಿಯಾಗುವುದಿಲ್ಲ.
ತೀರ್ಪಿನ ಪರಿಣಾಮ:
ಜಮೀನು ಮಾರಾಟವನ್ನು ರದ್ದುಪಡಿಸಿ ಉಪ ವಿಭಾಗಾಧಿಕಾರಿಗಳು ಈ ಹಿಂದೆ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದರೊಂದಿಗೆ, 1947ರಲ್ಲಿ ಜಮೀನು ಮಂಜೂರು ಪಡೆದಿದ್ದ ಪೂಜಪ್ಪ ಅವರ ಕುಟುಂಬಕ್ಕೆ ಜಮೀನು ಮರಳುವ ಹಾದಿ ಸುಗಮವಾಗಿದೆ. ಅರ್ಜಿದಾರ ಜಯರಾಮ್ ಅವರ ವಾದವನ್ನು ತಳ್ಳಿಹಾಕಿರುವ ಪೀಠವು, ಉಪ ವಿಭಾಗಾಧಿಕಾರಿಗಳ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ತಿಳಿಸಿದೆ.
ಈ ತೀರ್ಪು ಪಿಟಿಸಿಎಲ್ ಜಮೀನುಗಳನ್ನು ಖರೀದಿಸಿ ಹಕ್ಕು ಸಾಧಿಸಲು ಹವಣಿಸುವವರಿಗೆ ದೊಡ್ಡ ಎಚ್ಚರಿಕೆಯ ಸಂದೇಶ ನೀಡಿದೆ.
ರೈಲ್ವೆ ಪರೀಕ್ಷೆಯಲ್ಲಿ ಕನ್ನಡಕ್ಕೆ ಕಡೆಗಣನೆ: ಕರವೇಯಿಂದ ತೀವ್ರ ಹೋರಾಟದ ಎಚ್ಚರಿಕೆ
ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕೃಷಿ ಇಲಾಖೆ ಗುತ್ತಿಗೆ ನೌಕರ ಆತ್ಮಹತ್ಯೆ








