ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ರಾಜ್ಯದ ಡೈರಿಗಳಿಗೆ ಪೂರೈಕೆಯಾದ ಹಾಲಿನ ಪೈಕಿ ಒಟ್ಟು 3,049 ಮಾದರಿಗಳಲ್ಲಿ ಕಲಬೆರಕೆ ಕಂಡುಬಂದಿದೆ ಎಂದು ಸಭಾನಾಯಕ ಎನ್.ಎಸ್. ಬೋಸರಾಜು ಅವರು ವಿಧಾನಪರಿಷತ್ತಿನಲ್ಲಿ ತಿಳಿಸಿದ್ದಾರೆ.
ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ಮಧು ಮಾದೇಗೌಡ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಉತ್ತರಿಸಿದ ಸಚಿವರು, ಹಾಲಿನ ಗುಣಮಟ್ಟದ ಕುರಿತು ಆತಂಕಕಾರಿ ಮಾಹಿತಿ ಬಿಚ್ಚಿಟ್ಟರು.ರಾಜ್ಯದ 19 ಹಾಲು ಒಕ್ಕೂಟಗಳ ಘಟಕಗಳಿಂದ ಒಟ್ಟು 15.15 ಲಕ್ಷ ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು.ಹಾಲಿನಲ್ಲಿ ಪ್ರಮುಖವಾಗಿ ಉಪ್ಪು ಮತ್ತು ಸಕ್ಕರೆ ಅಂಶಗಳನ್ನು ಸೇರಿಸಿ ಕಲಬೆರಕೆ ಮಾಡಿರುವುದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾವಾರು ವಿವರ: ಕಲಬೆರಕೆ ಪ್ರಕರಣಗಳಲ್ಲಿ ಹಾಸನ ಜಿಲ್ಲೆ ಮೊದಲ ಸ್ಥಾನದಲ್ಲಿದೆ.
ಹಾಸನ: 788 ಮಾದರಿಗಳು
ಬಳ್ಳಾರಿ: 588 ಮಾದರಿಗಳು
ಶಿವಮೊಗ್ಗ: 434 ಮಾದರಿಗಳು
ಮಂಡ್ಯ: 418 ಮಾದರಿಗಳು
ಕಲಬುರಗಿ: 315 ಮಾದರಿಗಳು
ದೊಡ್ಲಾ ಡೈರಿ: ಸರ್ಕಾರಿ ಒಕ್ಕೂಟಗಳಲ್ಲದೆ, ‘ದೊಡ್ಲಾ’ ಎಂಬ ಖಾಸಗಿ ಸಂಸ್ಥೆಯ ಹಾಲಿನಲ್ಲೂ ಕಲಬೆರಕೆ ಅಂಶಗಳು ಕಂಡುಬಂದಿವೆ ಎಂದು ಸಚಿವರು ವಿವರಿಸಿದರು.
ಕಠಿಣ ಶಿಕ್ಷೆಯ ಎಚ್ಚರಿಕೆ: ಹಾಲಿನ ಕಲಬೆರಕೆ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕನಿಷ್ಠ 3 ತಿಂಗಳು ಜೈಲು ಶಿಕ್ಷೆಯಿಂದ ಹಿಡಿದು ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಸಚಿವರು ಎಚ್ಚರಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮಗಳು: ಕಲಬೆರಕೆ ತಡೆಯಲು ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪರೀಕ್ಷಾ ಕಿಟ್ಗಳನ್ನು ನೀಡಲಾಗಿದೆ. ಉತ್ಪಾದಕರಿಂದ ಹಾಲು ಸ್ವೀಕರಿಸುವಾಗ ಮತ್ತು ಡೈರಿ ಹಂತದಲ್ಲೂ ಕಟ್ಟುನಿಟ್ಟಿನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.








