ಬೆಂಗಳೂರು: ಮಧ್ಯಪ್ರಾಚ್ಯದಲ್ಲಿನ ಯುದ್ಧದ ಭೀತಿಯ ನಡುವೆ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಮತ್ತೊಂದು ಬಿಸಿ ತಟ್ಟಿದೆ. ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಬೆಲೆ ಏರಿಕೆಯ ಬೆನ್ನಲ್ಲೇ, ಕಳೆದ ಕೇವಲ ಹತ್ತು ದಿನಗಳಲ್ಲಿ ರಾಜ್ಯದಲ್ಲಿ ಅಡುಗೆ ಎಣ್ಣೆಯ ದರ ಪ್ರತಿ ಲೀಟರ್ಗೆ ₹7 ರಿಂದ ₹11 ರವರೆಗೆ ಏರಿಕೆಯಾಗಿದೆ.
ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಯುದ್ಧಕ್ಕೆ ಮುಂದಾಗಿರುವುದು ಅಡುಗೆ ಎಣ್ಣೆ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಬೆಲೆ ವ್ಯತ್ಯಾಸದ ವಿವರ:
ಸನ್ಫ್ಲವರ್ ಆಯಿಲ್: ಮಾರ್ಚ್ ಮೊದಲ ವಾರದಲ್ಲಿ ₹165 ಇದ್ದ ಬೆಲೆ, ಮಾರ್ಚ್ 12ರ ವೇಳೆಗೆ ₹172ಕ್ಕೆ ಏರಿಕೆಯಾಗಿದೆ.
ಗೋಲ್ಡ್ ವಿನ್ನರ್: ಹೋಲ್ಸೇಲ್ ಮಾರುಕಟ್ಟೆಯಲ್ಲಿ ₹159 ರಿಂದ ₹166ಕ್ಕೆ ಏರಿದೆ.
ಫ್ರೀಡಂ ಆಯಿಲ್: ₹158 ರಿಂದ ₹166ಕ್ಕೆ ತಲುಪಿದೆ.
ಆನ್ಲೈನ್ ಆಪ್ಗಳಲ್ಲಿ ದುಬಾರಿ:
ಹೋಲ್ಸೇಲ್ ದರಕ್ಕಿಂತ ಆನ್ಲೈನ್ ಶಾಪಿಂಗ್ ಆಪ್ಗಳಲ್ಲಿ ಬೆಲೆ ಇನ್ನು ಹೆಚ್ಚಿದೆ. ಇಲ್ಲಿ ಸನ್ಫ್ಲವರ್ ಆಯಿಲ್ ಬೆಲೆ ಪ್ರತಿ ಲೀಟರ್ಗೆ ₹160 ರಿಂದ ₹171ರವರೆಗೆ ಏರಿಕೆಯಾಗಿದ್ದು, ಜನರಿಗೆ ಹೆಚ್ಚಿನ ಹೊರೆಯಾಗುತ್ತಿದೆ.
ಪೂರೈಕೆಯಲ್ಲಿ ವ್ಯತ್ಯಯ:
ಚಿಲ್ಲರೆ ವ್ಯಾಪಾರಿಗಳ ಪ್ರಕಾರ, ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ವ್ಯಾಪಾರಿಗಳು 100 ರಿಂದ 200 ಬಾಕ್ಸ್ಗಳಿಗೆ ಆರ್ಡರ್ ಮಾಡಿದರೆ, ಪೂರೈಕೆದಾರರು ಕೇವಲ 20 ರಿಂದ 50 ಬಾಕ್ಸ್ಗಳನ್ನು ಮಾತ್ರ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗುವ ಭೀತಿಯೂ ಎದುರಾಗಿದೆ.








