ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಹೋಟೆಲ್ ಉದ್ಯಮ, ಇಂದಿರಾ ಕ್ಯಾಂಟೀನ್, ಶಾಲೆಗಳ ಬಿಸಿಯೂಟ ಹಾಗೂ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಿಲಿಂಡರ್ ಕೊರತೆಯಿಂದಾಗಿ ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸುಮಾರು ಶೇ. 35 ರಷ್ಟು ಸಣ್ಣಪುಟ್ಟ ಹೋಟೆಲ್‌ಗಳು ಈಗಾಗಲೇ ಬಾಗಿಲು ಹಾಕಿವೆ. ಪೂರೈಕೆ ಸಹಜ ಸ್ಥಿತಿಗೆ ಬರದಿದ್ದರೆ ಹೆಚ್ಚಿನ ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆ ಇದೆ.
ಇಂದಿರಾ ಕ್ಯಾಂಟೀನ್ ಮತ್ತು ಶಾಲೆಗಳಲ್ಲಿ ಬಿಸಿಯೂಟಕ್ಕೆ ಅಡ್ಡಿ: ಬೆಂಗಳೂರಿನ ಸುಮಾರು 33 ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೂ ಸಂಚಕಾರ ಎದುರಾಗುವ ಆತಂಕವಿದೆ.
ಪಿಜಿಗಳಲ್ಲಿ ಊಟದ ಕಡಿತ: ಬೆಂಗಳೂರಿನ ಬಹುತೇಕ ಪಿಜಿಗಳಲ್ಲಿ ದಿನಕ್ಕೆ ಕೇವಲ ಎರಡು ಬಾರಿ ಮಾತ್ರ ಆಹಾರ ನೀಡಲು ನಿರ್ಧರಿಸಲಾಗಿದ್ದು, ವಾರದಲ್ಲಿ ಕೇವಲ 5 ದಿನ ಮಾತ್ರ ಊಟ ನೀಡುವ ನಿರ್ಧಾರಕ್ಕೆ ಮಾಲೀಕರು ಬಂದಿದ್ದಾರೆ. ದೋಸೆ, ಪೂರಿಗಳಂತಹ ತಿಂಡಿಗಳನ್ನು ಸದ್ಯಕ್ಕೆ ಕೈಬಿಡಲಾಗಿದೆ.
ಆಟೋ ಚಾಲಕರ ಸಂಕಷ್ಟ: ಆಟೋ ಗ್ಯಾಸ್ ದರದಲ್ಲಿ ದಿಢೀರ್ ಏರಿಕೆಯಾಗಿದೆ. ಹಾವೇರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಗ್ಯಾಸ್‌ಗಾಗಿ ಕಿಲೋಮೀಟರ್‌ಗಟ್ಟಲೆ ಸಾಲು ಕಂಡುಬರುತ್ತಿದೆ. ಕೊಪ್ಪಳದಲ್ಲಿ ಕಳೆದ 5 ದಿನಗಳಿಂದ ಒಂದೇ ಒಂದು ವಾಣಿಜ್ಯ ಸಿಲಿಂಡರ್ ಸರಬರಾಜಾಗಿಲ್ಲ. ಇದರಿಂದ ಬೇಸತ್ತ ಹೋಟೆಲ್ ಮಾಲೀಕರು ವಿದ್ಯುತ್ ಒಲೆ ಹಾಗೂ ಹಳೆಯ ಪದ್ಧತಿಯ ಕಟ್ಟಿಗೆ ಒಲೆಗಳ ಮೊರೆ ಹೋಗುತ್ತಿದ್ದಾರೆ.








