ಇಂದಿನ ಡಿಜಿಟಲ್ ಯುಗದಲ್ಲಿ ಟಿವಿ, ಲ್ಯಾಪ್ಟಾಪ್, ಎಸಿ, ವಾಷಿಂಗ್ ಮೆಷಿನ್ ಹಾಗೂ ವೈಫೈ ರೂಟರ್ಗಳ ಬಳಕೆ ಅನಿವಾರ್ಯವಾಗಿದೆ. ಆದರೆ ಇವುಗಳ ಅತಿಯಾದ ಬಳಕೆಯಿಂದ ತಿಂಗಳ ಕೊನೆಯಲ್ಲಿ ವಿದ್ಯುತ್ ಬಿಲ್ ಶಾಕ್ ನೀಡುತ್ತಿರುತ್ತದೆ. ಸಾವಿರಾರು ರೂಪಾಯಿ ಬರುವ ಬಿಲ್ ಅನ್ನು ನೂರಕ್ಕೆ ಇಳಿಸುವುದು ಅಸಾಧ್ಯವೇನಲ್ಲ. ಈ ಕೆಳಗಿನ ಕೆಲವು ಸರಳ ಮತ್ತು ಸ್ಮಾರ್ಟ್ ಹಂತಗಳನ್ನು ಅನುಸರಿಸುವ ಮೂಲಕ ನೀವು ಭಾರಿ ಮೊತ್ತದ ಹಣವನ್ನು ಉಳಿಸಬಹುದು.
ವಿದ್ಯುತ್ ಉಳಿತಾಯಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್:
ಚಾರ್ಜರ್ಗಳ ಬಗ್ಗೆ ಎಚ್ಚರ: ಅನೇಕರು ಮೊಬೈಲ್ ಚಾರ್ಜ್ ಆದ ನಂತರವೂ ಸ್ವಿಚ್ ಆಫ್ ಮಾಡದೆ ಪ್ಲಗ್ನಲ್ಲಿಯೇ ಬಿಡುತ್ತಾರೆ. ಹೀಗೆ ಮಾಡುವುದರಿಂದ ವರ್ಷಕ್ಕೆ ಸುಮಾರು 10% ರಷ್ಟು ಹೆಚ್ಚುವರಿ ಬಿಲ್ ಬರುತ್ತದೆ. ಕೆಲಸ ಮುಗಿದ ತಕ್ಷಣ ಚಾರ್ಜರ್ ಅನ್ನು ಸಾಕೆಟ್ನಿಂದ ತೆಗೆಯುವುದು ಉತ್ತಮ.
ಎಲ್ಇಡಿ (LED) ಬಲ್ಬ್ ಬಳಸಿ: ಹಳೆಯ ಸಿಎಫ್ಎಲ್ ಬಲ್ಬ್ಗಳ ಬದಲಿಗೆ ಎಲ್ಇಡಿ ಬಲ್ಬ್ಗಳನ್ನು ಬಳಸಿ. ಇದರಿಂದ ಸುಮಾರು 90% ರಷ್ಟು ವಿದ್ಯುತ್ ಉಳಿತಾಯವಾಗುತ್ತದೆ. ಇಡೀ ಕೋಣೆಗೆ ದೊಡ್ಡ ಲೈಟ್ ಹಾಕುವ ಬದಲು, ಓದಲು ಟಾಸ್ಕ್ ಲೈಟ್ ಬಳಸುವುದು ಜಾಣತನ.
ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್: ಕೆಲಸವಿಲ್ಲದಿದ್ದಾಗ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ಗಳನ್ನು ಸ್ಲೀಪ್ ಮೋಡ್ನಲ್ಲಿ ಇಡುವ ಬದಲು ಶಟ್ಡೌನ್ ಮಾಡಿ. ಸುಮ್ಮನೆ ಆನ್ ಮಾಡಿಟ್ಟರೆ ತಿಂಗಳಿಗೆ ಕನಿಷ್ಠ 5 ಯೂನಿಟ್ ವ್ಯರ್ಥವಾಗುತ್ತದೆ.
ನೈಸರ್ಗಿಕ ಗಾಳಿ-ಬೆಳಕು: ಹಗಲಿನಲ್ಲಿ ಮನೆಯ ಕಿಟಕಿಗಳನ್ನು ತೆರೆದಿಡಿ. ಇದರಿಂದ ನೈಸರ್ಗಿಕ ಬೆಳಕು ಮತ್ತು ಗಾಳಿ ಸಿಗುವುದರಿಂದ ಲೈಟ್ ಹಾಗೂ ಫ್ಯಾನ್ಗಳ ಅಗತ್ಯವಿರುವುದಿಲ್ಲ. ಇದು ಆರೋಗ್ಯಕ್ಕೂ ಒಳ್ಳೆಯದು.
ಗೀಸರ್ ಮತ್ತು ವಾಷಿಂಗ್ ಮೆಷಿನ್: ಸಾಧ್ಯವಾದಷ್ಟು ತಣ್ಣೀರಿನ ಸ್ನಾನ ರೂಢಿಸಿಕೊಳ್ಳಿ. ಗೀಸರ್ ಬಳಸುವಾಗ ಟೈಮರ್ ಸೆಟ್ ಮಾಡಿ. ವಾಷಿಂಗ್ ಮೆಷಿನ್ ಬಳಸುವಾಗ ಪೂರ್ಣ ಪ್ರಮಾಣದ ಬಟ್ಟೆಗಳಿದ್ದಾಗ ಮಾತ್ರ ಬಳಸಿ ಮತ್ತು ತಣ್ಣೀರಿನಲ್ಲಿ ತೊಳೆಯುವುದು ವಿದ್ಯುತ್ ಉಳಿಸಲು ಸಹಕಾರಿ.
ಸ್ಲ್ಯಾಬ್ ದರಗಳ ಬಗ್ಗೆ ಇರಲಿ ಗಮನ
ವಿದ್ಯುತ್ ಬಿಲ್ ಹೆಚ್ಚಾಗಲು ಮುಖ್ಯ ಕಾರಣ ಸ್ಲ್ಯಾಬ್ ದರಗಳು. ಉದಾಹರಣೆಗೆ, ಮೊದಲ 50 ಅಥವಾ 100 ಯೂನಿಟ್ಗೆ ಇರುವ ದರಕ್ಕಿಂತ, ಆ ಮಿತಿ ದಾಟಿದ ಕೂಡಲೇ ದರ ದುಪ್ಪಟ್ಟಾಗುತ್ತದೆ. 100 ಯೂನಿಟ್ ದಾಟಿ ಕೇವಲ ಅರ್ಧ ಯೂನಿಟ್ ಹೆಚ್ಚಾದರೂ ನೀವು ಮುಂದಿನ ಸ್ಲ್ಯಾಬ್ಗೆ ಹೋಗುತ್ತೀರಿ, ಆಗ ಬಿಲ್ ಮೊತ್ತ ಗಣನೀಯವಾಗಿ ಏರುತ್ತದೆ.
ಸಲಹೆ: ಪ್ರತಿ ತಿಂಗಳ ಮೊದಲ 20 ದಿನಗಳ ಮೀಟರ್ ರೀಡಿಂಗ್ ಗಮನಿಸಿ. ಬಿಲ್ ಜಾಸ್ತಿ ಆಗುತ್ತಿದೆ ಎನಿಸಿದರೆ ಉಳಿದ 10 ದಿನಗಳ ಕಾಲ ವಿದ್ಯುತ್ ಬಳಕೆಯನ್ನು ನಿಯಂತ್ರಿಸಿ.
ಸ್ಮಾರ್ಟ್ ಖರೀದಿ ನಿಮ್ಮ ಮೊದಲ ಆದ್ಯತೆಯಾಗಿರಲಿ
ಹೊಸ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವಾಗ ಯಾವಾಗಲೂ 5-ಸ್ಟಾರ್ ರೇಟಿಂಗ್ ಇರುವ ಉಪಕರಣಗಳನ್ನೇ ಆಯ್ಕೆ ಮಾಡಿ. ಇವುಗಳ ಬೆಲೆ ಸ್ವಲ್ಪ ಹೆಚ್ಚಿದ್ದರೂ, ದೀರ್ಘಕಾಲದ ಬಳಕೆಯಲ್ಲಿ ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಉಳಿಸುತ್ತವೆ.
ವಿದ್ಯುತ್ ಉಳಿಸುವುದು ಎಂದರೆ ಹಣ ಉಳಿಸುವುದು ಮಾತ್ರವಲ್ಲ, ಪರಿಸರವನ್ನು ರಕ್ಷಿಸುವುದು ಕೂಡ ಆಗಿದೆ. ಇಂದೇ ಈ ಬದಲಾವಣೆಗಳನ್ನು ಮಾಡಿಕೊಳ್ಳಿ, ನಿಮ್ಮ ವಿದ್ಯುತ್ ಬಿಲ್ ಅನ್ನು ನಿಯಂತ್ರಣಕ್ಕೆ ತನ್ನಿ.








