ಬೀಜಿಂಗ್: ‘ಬಂಗಾರದ ಮೊಟ್ಟೆ ಇಡುವ ಬಾತುಕೋಳಿ’ಯ ಕಥೆಯನ್ನು ನಾವು ಕೇಳಿದ್ದೇವೆ. ಆದರೆ ಚೀನಾದಲ್ಲಿ ನಿಜವಾಗಿಯೂ ಬಾತುಕೋಳಿಯ ಹೊಟ್ಟೆಯಲ್ಲಿ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗಿರುವ ಅಚ್ಚರಿಯ ಘಟನೆಯೊಂದು ನಡೆದಿದೆ.
ಚೀನಾದ ಹುನಾನ್ ಪ್ರಾಂತ್ಯದ ಲಾಂಗ್ವಿ ಕೌಂಟಿಯ ನಿವಾಸಿ ಲಿಯು ಎಂಬುವವರು ಅಡುಗೆಗಾಗಿ ಬಾತುಕೋಳಿಯನ್ನು ಕತ್ತರಿಸಿದಾಗ ಅದರ ಹೊಟ್ಟೆಯಲ್ಲಿ ಚಿನ್ನದ ತುಣುಕುಗಳು ಪತ್ತೆಯಾಗಿವೆ. ಈ ಚಿನ್ನವನ್ನು ಪರೀಕ್ಷಿಸಿದಾಗ ಅದು ಸುಮಾರು 10 ಗ್ರಾಂ ತೂಕವಿದ್ದು, ಅದರ ಮಾರುಕಟ್ಟೆ ಮೌಲ್ಯ ಅಂದಾಜು 1.62 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.
ಹೊಟ್ಟೆಗೆ ಚಿನ್ನ ಸೇರಿದ್ದು ಹೇಗೆ?
ಲಿಯು ಅವರ ತಂದೆಯ ಪ್ರಕಾರ, ಅವರು ವಾಸಿಸುವ ಪ್ರದೇಶದ ಸಮೀಪದಲ್ಲೇ ಹಿಂದೆ ಒಂದು ಚಿನ್ನದ ಗಣಿ ಇತ್ತು. ಬಾತುಕೋಳಿಯು ಅಲ್ಲಿನ ಮಣ್ಣನ್ನು ತಿನ್ನುವಾಗ ಅದರೊಂದಿಗೆ ಚಿನ್ನದ ತುಣುಕುಗಳು ಹೊಟ್ಟೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ. ಚಿನ್ನವು ಜೀರ್ಣವಾಗದ ಕಾರಣ ಅದು ಹೊಟ್ಟೆಯಲ್ಲೇ ಉಳಿದುಕೊಂಡಿತ್ತು.
ವಿಶೇಷತೆ: ಈ ಹಿಂದೆ ಕೂಡ ಈ ಭಾಗದ ಬಾತುಕೋಳಿಗಳಲ್ಲಿ ಚಿನ್ನ ಸಿಕ್ಕ ಉದಾಹರಣೆಗಳಿವೆ, ಆದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿಕ್ಕಿರುವುದು ಇದೇ ಮೊದಲು. ಸದ್ಯ ಅನಿರೀಕ್ಷಿತವಾಗಿ ಸಿಕ್ಕ ಈ ಚಿನ್ನ ಯಾರಿಗೆ ಸೇರಬೇಕು ಎಂಬ ಪ್ರಶ್ನೆ ಮತ್ತು ಕುತೂಹಲ ಸ್ಥಳೀಯರಲ್ಲಿ ಮನೆಮಾಡಿದೆ.








