ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸಾರ್ವಜನಿಕರಿಗೆ ತಿಳಿಸುವುದೇನೆಂದರೆ, ಹಸಿರು ಮಾರ್ಗದ ಆರ್.ವಿ. ರಸ್ತೆ ಮತ್ತು ಜಯನಗರ ಮೆಟ್ರೋ ನಿಲ್ದಾಣಗಳ ನಡುವಿನ ಒಂದು ಭಾಗದಲ್ಲಿ ಮೆಟ್ರೋ ರೈಲು ಸಂಚಾರದ ವೇಗದ ಮೇಲೆ ತಾತ್ಕಾಲಿಕ ನಿರ್ಬಂಧವನ್ನು ವಿಧಿಸಲಾಗಿದೆ.
ಮೆಟ್ರೋ ಮಾರ್ಗದ ದೀರ್ಘಕಾಲೀನ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳುವುವ ಉದ್ದೇಶದಿಂದ ಸಪೋರ್ಟ್ ಬೇರಿಂಗ್ ಗಳನ್ನು ಬದಲಾಯಿಸುವ ನಿರ್ವಹಣಾ ಕಾಮಗಾರಿಗಳನ್ನು ನಡೆಸುವ ನಿಟ್ಟಿನಲ್ಲಿ ಈ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ.
ನಮ್ಮ ಮೆಟ್ರೋದ ಮಾನದಂಡದ ಸುರಕ್ಷತಾ ನಿಯಮಾವಳಿಗಳ ಪ್ರಕಾರ, ಯಾವುದೇ ತಾಂತ್ರಿಕ ಅಂಶಗಳನ್ನು ಗಮನೀಯವಾಗಿ ಪರಿಶೀಲಿಸುವ ಸಂದರ್ಭಗಳಲ್ಲಿ ಕಾರ್ಯಚರಣೆಯ ಸುರಕ್ಷತಾ ದೃಷ್ಟಿಯಿಂದ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ನಿಯಂತ್ರಿಸಲಾಗುತ್ತದೆ. ಹಸಿರು ಮಾರ್ಗದ ರೈಲು ಸೇವೆಗಳು ವೇಳಾಪಟ್ಟಿಯಂತೆ ಮುಂದುವರಿಯುತ್ತಿದ್ದು, ಅರ್.ವಿ ರಸ್ತೆ ಮತ್ತು ಜಯನಗರ ನಿಲ್ದಾಣಗಳ ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಸ್ವಲ್ಪ ಹೆಚ್ಚುವರಿ ಪ್ರಯಾಣ ಸಮಯ ಅನುಭವವಾಗುವ ಸಾಧ್ಯತೆ ಇದೆ.
ಪ್ರಯಾಣಿಕರ ಸುರಕ್ಷತೆಯೇ ಅತ್ಯುನ್ನತ ಆದ್ಯತೆಯಾಗಿದ್ದು, ಇಂತಹ ಕ್ರಮಗಳನ್ನು ಮೆಟ್ರೋ ರೈಲು ಸುರಕ್ಷತಾ ನಿಯಮಾವಳಿಗಳ ಅನುಸಾರವಾಗಿ ಕೈಗೊಳ್ಳಲಾಗುತ್ತದೆ ಎಂಬುದನ್ನು ಬಿ.ಎಂ.ಅರ್.ಸಿ.ಎಲ್ ಖಚಿತಪಡಿಸುತ್ತದೆ.
ತಾಂತ್ರಿಕ ತಂಡಗಳು ಸಂಬಂಧಿತ ಈ ಭಾಗವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಅಗತ್ಯ ಪರಿಶೀಲನೆಗಳು ಮತ್ತು ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳುತ್ತಿವೆ. ಸುರಕ್ಷತೆ ಮತ್ತು ಕಾರ್ಯಾಚರಣಾ ವಿಶ್ವಾಸಾರ್ಹತೆಯ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಂಡು ಈ ನಿರ್ವಹಣಾ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ.








