ಶಿವಮೊಗ್ಗ: ಮುಂಬರುವ ರಾಜಕೀಯ ಚಟುವಟಿಕೆಗಳು ಹಾಗೂ ಪಕ್ಷದ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಭಾರತೀಯ ಜನತಾ ಪಾರ್ಟಿಯು ಪ್ರಮುಖ ಜಿಲ್ಲಾ ಪ್ರಭಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬೆನ್ನಲ್ಲೇ ದಾವಣಗೆರೆ ಜಿಲ್ಲೆಯ ಪ್ರಭಾರಿಯಾಗಿ ಶಿವಮೊಗ್ಗ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾದ ಟಿ.ಡಿ. ಮೇಘರಾಜ್ ಅವರನ್ನು ನಿಯುಕ್ತಿಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶ ಹೊರಡಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೊರಡಿಸಿರುವ ಆದೇಶದಂತೆ, ದಾವಣಗೆರೆ ಜಿಲ್ಲೆಯ ಪಕ್ಷದ ಕಾರ್ಯಚಟುವಟಿಕೆಗಳ ಉಸ್ತುವಾರಿ ವಹಿಸಿಕೊಳ್ಳಲು ಮೇಘರಾಜ್ ಅವರಿಗೆ ಜವಾಬ್ದಾರಿ ನೀಡಲಾಗಿದೆ. ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾಗೂ ಮಧುಗಿರಿಗಳನ್ನು ಒಳಗೊಂಡ ದಾವಣಗೆರೆ ವಿಭಾಗದ ಪ್ರಭಾರಿಯನ್ನಾಗಿ ಟಿ.ಡಿ ಮೇಘರಾಜ್ ಅವರನ್ನು ನೇಮಕ ಮಾಡಲಾಗಿದೆ. ಇವರೊಂದಿಗೆ ಸಹ-ಪ್ರಭಾರಿಯಾಗಿ ಎ.ಮುರಳಿ ಅವರನ್ನು ನೇಮಕ ಮಾಡಲಾಗಿದ್ದು, ಈ ಇಬ್ಬರು ನಾಯಕರು ಜಿಲ್ಲೆಯಲ್ಲಿ ಪಕ್ಷದ ಸಾಂಘಿಕ ಕಾರ್ಯಗಳನ್ನು ಮುನ್ನಡೆಸಲಿದ್ದಾರೆ.
ಅನುಭವಕ್ಕೆ ಮನ್ನಣೆ:
ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಟಿ.ಡಿ. ಮೇಘರಾಜ್ ಅವರು, ದಾವಣಗೆರೆ ಜಿಲ್ಲೆಯಲ್ಲೂ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ವಿಶ್ವಾಸವನ್ನು ರಾಜ್ಯ ನಾಯಕತ್ವ ವ್ಯಕ್ತಪಡಿಸಿದೆ. ಜಿಲ್ಲಾ ಘಟಕದ ಪದಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದು, ಪಕ್ಷವನ್ನು ರಚನಾತ್ಮಕವಾಗಿ ಸಂಘಟಿಸುವುದು ಹಾಗೂ ಮುಂಬರುವ ಚುನಾವಣೆಗಳಿಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವುದು ಇವರ ಮುಂದಿರುವ ಪ್ರಮುಖ ಗುರಿಯಾಗಿದೆ.
ಕಾರ್ಯಕರ್ತರಲ್ಲಿ ಸಂಭ್ರಮ:
ಈ ನೇಮಕಾತಿಯಿಂದ ಶಿವಮೊಗ್ಗ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಕಂಡುಬಂದಿದೆ. ಅನುಭವೀ ನಾಯಕರ ಮಾರ್ಗದರ್ಶನದಲ್ಲಿ ದಾವಣಗೆರೆ ಜಿಲ್ಲೆಯ ಸಂಘಟನೆ ಮತ್ತಷ್ಟು ಬಲಗೊಳ್ಳಲಿದೆ ಎಂದು ಸ್ಥಳೀಯ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ನೂತನ ಪ್ರಭಾರಿಗಳು ಜಿಲ್ಲೆಗೆ ಭೇಟಿ ನೀಡಿ ಪ್ರಮುಖ ಪದಾಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆಯಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ರಾಜ್ಯದ ನಾನಾ ಕಡೆ ಪೆಟ್ರೋಲ್, ಡೀಸೆಲ್ ಖರೀದಿಗೆ ಮುಗಿಬಿದ್ದ ಜನ: ಬಂಕ್‌ಗಳಲ್ಲಿ ಕೃತಕ ತೈಲ ಅಭಾವದ ಭೀತಿ!
ರಾಜ್ಯದ 10 ವಿಭಾಗಗಳಿಗೆ ಬಿಜೆಪಿಯಿಂದ ಪ್ರಭಾರಿ, ಸಹ-ಪ್ರಭಾರಿಗಳನ್ನು ನಿಯುಕ್ತಿಗೊಳಿಸಿ ಬಿವೈ ವಿಜಯೇಂದ್ರ ಆದೇಶ








