ಶಿವಮೊಗ್ಗ: ದಶಕಗಳಿಂದ ಮಲೆನಾಡಿನ ರೈತರನ್ನು ಕಾಡುತ್ತಿರುವ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಹಾಗೂ ಬಗರ್ ಹುಕುಂ ಸಾಗುವಳಿದಾರರ ಭೂ ಹಕ್ಕಿನ ವಿಚಾರದಲ್ಲಿ ಸರ್ಕಾರ ತೋರುತ್ತಿರುವ ವಿಳಂಬ ಧೋರಣೆಯನ್ನು ಖಂಡಿಸಿ, ‘ಮಲೆನಾಡು ರೈತ ಹೋರಾಟ ಸಮಿತಿ’ಯು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಶೀಘ್ರ ಕ್ರಮಕ್ಕೆ ಆಗ್ರಹಿಸಿದೆ. ಈ ಕುರಿತು ಸಮಿತಿಯ ಸಂಚಾಲಕರಾದ ಟಿ.ಎನ್. ಶ್ರೀನಿವಾಸ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದು ಕೂಡಲೇ ಸಮಸ್ಯೆ ಪರಿಹಾರಕ್ಕೆ ಚರ್ಚಿಸಲು ಸಭೆ ಕರೆಯುವಂತೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಭರವಸೆ ನೀಡಿ ಈಡೇರಿಸುವುದನ್ನೇ ಮರೆತ ಕಾಂಗ್ರೆಸ್ ಸರ್ಕಾರ
ಕಳೆದ 2022ರ ನವೆಂಬರ್ 22ರಂದು ಶಿವಮೊಗ್ಗದಲ್ಲಿ ನಡೆದ ‘ಮಲೆನಾಡಿನ ಜನಾಕ್ರೋಶ’ ಬೃಹತ್ ಸಮಾವೇಶದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿದ್ದರು. ಅಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಲೆನಾಡಿನ ರೈತರ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಸರ್ಕಾರ ಅಸ್ತಿತ್ವಕ್ಕೆ ಬಂದು 1000 ದಿನಗಳಾಗಿದ್ದರೂ, ಸಮಸ್ಯೆಗಳು ಬಗೆಹರಿಯುವ ಬದಲಿಗೆ ಮತ್ತಷ್ಟು ಬಿಗಡಾಯಿಸಿವೆ ಎಂದು ಸಮಿತಿ ದೂರಿದೆ.
ಇಲಾಖೆಗಳ ನಡುವಿನ ಸಂಘರ್ಷ: ರೈತರಿಗೆ ತಪ್ಪದ ಸಂಕಷ್ಟ
- ಕಂದಾಯ ಮತ್ತು ಅರಣ್ಯ ಇಲಾಖೆ: ಕಂದಾಯ ಇಲಾಖೆ ನೀಡಿದ ಹಕ್ಕುಪತ್ರಗಳನ್ನು ಅರಣ್ಯ ಇಲಾಖೆಯು ಮಾನ್ಯ ಮಾಡುತ್ತಿಲ್ಲ. “ಈ ಭೂಮಿ ನಮ್ಮದು” ಎಂದು ಅರಣ್ಯ ಇಲಾಖೆಯವರು ಹೇಳುತ್ತಿರುವುದರಿಂದ ರೈತರು ಅತಂತ್ರರಾಗಿದ್ದಾರೆ.
- ನ್ಯಾಯಾಲಯದ ಆದೇಶ: ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಚರ್ಚಿಸಿ ಬಗೆಹರಿಸಲು ಸುಪ್ರೀಂ ಕೋರ್ಟ್ 2024ರ ಡಿಸೆಂಬರ್ 5ರಂದು ನಿರ್ದೇಶನ ನೀಡಿದೆ. ಆದರೆ ಈ ಪ್ರಕ್ರಿಯೆ ಇನ್ನೂ ಕುಂಟುತ್ತಾ ಸಾಗಿದೆ.
- ಅರ್ಜಿಗಳ ವಜಾ: ರಾಜ್ಯಾದ್ಯಂತ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಸುಮಾರು 3 ಲಕ್ಷ ಅರ್ಜಿಗಳನ್ನು ವಜಾ ಮಾಡಲಾಗಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲೆಯೊಂದರಲ್ಲೇ 80 ಸಾವಿರ ಅರ್ಜಿಗಳಿವೆ.
ರೈತ ಹೋರಾಟ ಸಮಿತಿಯ ಪ್ರಮುಖ ಆಗ್ರಹಗಳು:
- ತುರ್ತು ಸಭೆ: ಮಲೆನಾಡಿನ 65 ವಿಧಾನಸಭಾ ಕ್ಷೇತ್ರಗಳ ಸಮಸ್ಯೆಗಳನ್ನು ಚರ್ಚಿಸಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ಕರೆಯಬೇಕು.
- ಜಂಟಿ ಸರ್ವೆ ವರದಿ: ಶಿವಮೊಗ್ಗ ಜಿಲ್ಲಾ ಅಧಿಕಾರಿಗಳಿಂದ ಬರಬೇಕಾದ ಜಂಟಿ ಸರ್ವೆ ವರದಿಯ ವಿಳಂಬವನ್ನು ತಪ್ಪಿಸಿ, ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು.
- ಅರ್ಜಿಗಳ ಮರುಪರಿಶೀಲನೆ: ವಜಾ ಮಾಡಲಾದ ಬಗರ್ ಹುಕುಂ ಮತ್ತು ಅರಣ್ಯ ಹಕ್ಕು ಅರ್ಜಿಗಳನ್ನು ದಾಖಲೆಗಳ ಸಹಿತ ಮರುಪರಿಶೀಲಿಸಬೇಕು.
- ಕ್ರಿಮಿನಲ್ ಕೇಸುಗಳ ರದ್ದು: ಭೂ ಹಕ್ಕಿಗಾಗಿ ಹೋರಾಡುತ್ತಿರುವ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆ ಹೂಡಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು.
ಹೋರಾಟದ ಹಾದಿ
ಮಾರ್ಚ್ 2, 2026 ರಂದು ಸಾಗರ ತಾಲ್ಲೂಕಿನ ಸಿಗಂದೂರು ಸೇತುವೆ ಬಳಿ ನಡೆದ ಬೃಹತ್ ರೈತ ಸಭೆ ಹಾಗೂ ರಸ್ತೆ ತಡೆ ಚಳುವಳಿಯ ಮೂಲಕ ರೈತರು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ.ಶ್ರೀನಿವಾಸ್ ಎಚ್ಚರಿಸಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…








