ವಾಷಿಂಗ್ಟನ್/ತೆಹ್ರಾನ್: ಇರಾನ್‌ನ ಅತ್ಯಂತ ಶಕ್ತಿಶಾಲಿ ಸೇನಾ ಘಟಕವಾದ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ನ ಪ್ರಧಾನ ಕಚೇರಿಯನ್ನು ಸಂಪೂರ್ಣವಾಗಿ ನಾಶಪಡಿಸಿರುವುದಾಗಿ ಅಮೆರಿಕ ಸೋಮವಾರ ಘೋಷಿಸಿದೆ. ಈ ದಾಳಿಯನ್ನು “ಹಾವಿನ ತಲೆ ಕತ್ತರಿಸಿದ ಕಾರ್ಯಾಚರಣೆ” ಎಂದು ಅಮೆರಿಕ ಬಣ್ಣಿಸಿದೆ.
ತೆಹ್ರಾನ್‌ನಲ್ಲಿರುವ IRGC ಯ ಮುಖ್ಯ ಆಡಳಿತ ಕೇಂದ್ರವನ್ನು ಅಮೆರಿಕದ ಮಿಲಿಟರಿ ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಈ ಸರಣಿ ಕಾರ್ಯಾಚರಣೆಗಳಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ಉನ್ನತ ಮಟ್ಟದ ನಾಯಕರು ಈಗಾಗಲೇ ಹತರಾಗಿದ್ದಾರೆ ಎಂದು ವರದಿಯಾಗಿದೆ.
ಸೆಂಟಕಾಮ್ (Centcom) ಹೇಳಿಕೆ
ಕಳೆದ 47 ವರ್ಷಗಳಲ್ಲಿ IRGC ಸಾವಿರಕ್ಕೂ ಹೆಚ್ಚು ಅಮೆರಿಕನ್ನರನ್ನು ಕೊಂದಿದೆ. ನಿನ್ನೆ ನಡೆಸಿದ ಬೃಹತ್ ದಾಳಿಯ ಮೂಲಕ ನಾವು ಹಾವಿನ ತಲೆಯನ್ನು ಕತ್ತರಿಸಿದ್ದೇವೆ” ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.
IRGC ಹಿನ್ನೆಲೆ:
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನ ಇಸ್ಲಾಮಿಕ್ ವ್ಯವಸ್ಥೆಯನ್ನು ರಕ್ಷಿಸಲು ಈ ವಿಶೇಷ ಪಡೆಯನ್ನು ರಚಿಸಲಾಗಿತ್ತು. ಅಲಿ ಖಮೇನಿ ಅವರ ನೇರ ನಿಯಂತ್ರಣದಲ್ಲಿದ್ದ ಈ ಪಡೆಯು ಇರಾನ್‌ನ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ಸಶಸ್ತ್ರ ಪಡೆಯಾಗಿ ಗುರುತಿಸಿಕೊಂಡಿತ್ತು.
ಈ ದಾಳಿಯಿಂದಾಗಿ ಇರಾನ್‌ನ ರಾಜಧಾನಿ ತೆಹ್ರಾನ್‌ನಲ್ಲಿರುವ ಪ್ರಮುಖ ಆಡಳಿತ ಮತ್ತು ಸಚಿವಾಲಯದ ಕಟ್ಟಡಗಳಿಗೂ ಭಾರಿ ಹಾನಿಯಾಗಿದೆ ಎಂದು ತಿಳಿದುಬಂದಿದೆ.








