ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಹಲವಾರು ಗಲ್ಫ್ ರಾಷ್ಟ್ರಗಳ ಸಚಿವರೊಂದಿಗೆ ಮಾತನಾಡಿದರು, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು.
ಗಲ್ಫ್ ರಾಷ್ಟ್ರಗಳಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಪ್ರಾದೇಶಿಕ ಶಾಂತಿ ಮತ್ತು ಅಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದ ಸುರಕ್ಷತೆಯ ಬಗ್ಗೆ ದೇಶಕ್ಕಿರುವ ಹೆಚ್ಚಿನ ಆಸಕ್ತಿಯನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಒತ್ತಿಹೇಳಿದ್ದಾರೆ.
ಎಕ್ಸ್ (X) ಪೋಸ್ಟ್‌ನಲ್ಲಿ ಮಾಹಿತಿ ಹಂಚಿಕೊಂಡ ಜೈಶಂಕರ್, “ಸೌದಿ ಅರೇಬಿಯಾದ ವಿದೇಶಾಂಗ ಸಚಿವ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್ ಅಲ್ ಸೌದ್ ಅವರೊಂದಿಗೆ ಮಾತನಾಡಿದ್ದೇನೆ. ಗಲ್ಫ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಂಡಿದ್ದೇವೆ. ಪ್ರಾದೇಶಿಕ ಶಾಂತಿ, ಸ್ಥಿರತೆ ಮತ್ತು ಭಾರತೀಯ ಸಮುದಾಯದ ಕಲ್ಯಾಣದಲ್ಲಿ ಭಾರತಕ್ಕಿರುವ ಹಿತಾಸಕ್ತಿಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ,” ಎಂದು ತಿಳಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, ಕುವೈತ್ ವಿದೇಶಾಂಗ ಸಚಿವ ಶೇಖ್ ಜರ್ರಾ ಜಾಬರ್ ಅಲ್-ಅಹ್ಮದ್ ಅಲ್-ಸಬಾಹ್ ಅವರೊಂದಿಗೆ ಮಾತನಾಡಿದ್ದು, ಅವರು ಕುವೈತ್‌ನ ತಾಜಾ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ ಎಂದು ಹೇಳಿದ್ದಾರೆ. “ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಭಾರತದ ಕಳವಳವನ್ನು ವ್ಯಕ್ತಪಡಿಸಿದ್ದೇನೆ. ಅಲ್ಲಿನ ಭಾರತೀಯ ಸಮುದಾಯದ ಕ್ಷೇಮದ ಬಗ್ಗೆ ಅವರು ನೀಡಿದ ಭರವಸೆಯನ್ನು ನಾನು ಗೌರವಿಸುತ್ತೇನೆ,” ಎಂದಿದ್ದಾರೆ.
ಜೈಶಂಕರ್ ಅವರು ಬಹ್ರೇನ್, ಕತಾರ್ ಮತ್ತು ಯುಎಇ (UAE) ಉನ್ನತ ನಾಯಕರೊಂದಿಗೂ ಗಲ್ಫ್ ಬಿಕ್ಕಟ್ಟಿನ ಬಗ್ಗೆ ಚರ್ಚಿಸಿದರು.
ಬಹ್ರೇನ್ ವಿದೇಶಾಂಗ ಸಚಿವ ಅಬ್ದುಲ್ಲತೀಫ್ ಬಿನ್ ರಶೀದ್ ಅಲ್ ಜಯಾನಿ, ಕತಾರ್ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಬಿನ್ ಜಾಸಿಮ್ ಅಲ್ ಥಾನಿ, ಮತ್ತು ಯುಎಇ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಜಾಯೆದ್ ಅಲ್-ನಹ್ಯಾನ್ ಅವರು ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಕಲ್ಯಾಣವನ್ನು ಕಾಪಾಡುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
”ಬಹ್ರೇನ್ ವಿದೇಶಾಂಗ ಸಚಿವರೊಂದಿಗೆ ಪ್ರಾದೇಶಿಕ ವಿದ್ಯಮಾನಗಳ ಬಗ್ಗೆ ಚರ್ಚಿಸಿದೆ. ಹೆಚ್ಚುತ್ತಿರುವ ಬೆಳವಣಿಗೆಗಳು ಖಂಡಿತವಾಗಿಯೂ ಕಳವಳಕಾರಿ ವಿಷಯವಾಗಿದೆ. ಭಾರತೀಯ ಸಮುದಾಯವನ್ನು ಸುರಕ್ಷಿತವಾಗಿಡಲು ತಮ್ಮ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ,” ಎಂದು ಜೈಶಂಕರ್ ಹೇಳಿದ್ದಾರೆ.
ಕತಾರ್ ಪ್ರಧಾನಿಯವರೊಂದಿಗೆ ಮಾತನಾಡಿದ ಬಗ್ಗೆ ತಿಳಿಸಿದ ಅವರು, “ಕತಾರ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ಭಾರತೀಯರ ಕ್ಷೇಮದ ಬಗ್ಗೆ ಅವರು ನೀಡಿದ ಭರವಸೆ ಅಮೂಲ್ಯವಾದುದು,” ಎಂದಿದ್ದಾರೆ. ಹಾಗೆಯೇ ಯುಎಇ ನಾಯಕರೊಂದಿಗಿನ ಚರ್ಚೆಯ ಬಗ್ಗೆ ಮಾತನಾಡುತ್ತಾ, “ಗಲ್ಫ್‌ನಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಗಿದೆ. ಭಾರತೀಯರ ಕಲ್ಯಾಣದ ಬಗ್ಗೆ ಅವರಿಗಿರುವ ಬದ್ಧತೆಯನ್ನು ಶ್ಲಾಘಿಸುತ್ತೇನೆ,” ಎಂದು ತಿಳಿಸಿದ್ದಾರೆ.
ಹಿನ್ನೆಲೆ:
ಇದಕ್ಕೂ ಮುನ್ನ, ಇಸ್ರೇಲ್ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಹೇಳಿದ ಬೆನ್ನಲ್ಲೇ, ಅಮೆರಿಕ ಕೂಡ ಇರಾನ್‌ನಲ್ಲಿ “ಬೃಹತ್ ಯುದ್ಧ ಕಾರ್ಯಾಚರಣೆ” (Major combat operations) ಆರಂಭಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದರು.
ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ತಿರುಗೇಟು ನೀಡಿದ್ದು, ವಿವಿಧ ಗಲ್ಫ್ ರಾಷ್ಟ್ರಗಳಲ್ಲಿರುವ ಇಸ್ರೇಲ್ ಮತ್ತು ಅಮೆರಿಕದ ಆಸ್ತಿಗಳನ್ನು ಗುರಿಯಾಗಿಸಿಕೊಂಡಿದೆ. ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಭೀಕರ ಸ್ಫೋಟದ ಶಬ್ದಗಳು ಕೇಳಿಬಂದಿವೆ.
ದಾಳಿ-ಪ್ರತಿ ದಾಳಿಯ ಹಿನ್ನೆಲೆಯಲ್ಲಿ ಈ ವಲಯದ ಹಲವು ದೇಶಗಳು ತಮ್ಮ ವಾಯುಪ್ರದೇಶವನ್ನು (Airspace) ಮುಚ್ಚಿವೆ. ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಶನಿವಾರ ಯುಎಇನಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಸೂಚನೆ ನೀಡಿದೆ.








