ಶನಿವಾರ (ಫೆಬ್ರವರಿ 28) ಇಸ್ರೇಲ್ ಇರಾನ್ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಿದ್ದು, ಇರಾನ್‌ನ ವಿವಿಧ ಭಾಗಗಳಲ್ಲಿ ಹಲವಾರು ಸ್ಫೋಟದ ಶಬ್ದಗಳು ಕೇಳಿಬಂದಿವೆ. ಈ ದಾಳಿಯ ಬೆನ್ನಲ್ಲೇ ತೆಲ್ ಅವೀವ್ (ಇಸ್ರೇಲ್) ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಇಸ್ರೇಲ್ ನಡೆಸಿದ ದಾಳಿಗಳು ಟೆಹ್ರಾನ್‌ನಲ್ಲಿರುವ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯವರ ಪ್ರಧಾನ ಕಛೇರಿಯನ್ನೂ ಗುರಿಯಾಗಿಸಿಕೊಂಡಿವೆ. ಖಮೇನಿ ಅವರು ಪ್ರಸ್ತುತ ಎಲ್ಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ದಾಳಿಯ ಸಮಯದಲ್ಲಿ ಅವರು ಕಛೇರಿಯಲ್ಲಿದ್ದರೇ ಅಥವಾ ಅವರಿಗೆ ಗಾಯಗಳಾಗಿವೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಇಸ್ರೇಲ್ ದಾಳಿ ನಡೆಸಿದ ಗುರಿಗಳು ಯಾವುವು?
ರಾಯಿಟರ್ಸ್ ಸಂಸ್ಥೆಯ ವರದಿಯ ಪ್ರಕಾರ, ಇರಾನ್‌ನ ಅಧ್ಯಕ್ಷೀಯ ಭವನ ಮತ್ತು ಪರಮೋಚ್ಚ ನಾಯಕ ಖಮೇನಿಯವರ ಸಂಕೀರ್ಣದ ಮೇಲೆ ಏಳು ಕ್ಷಿಪಣಿಗಳು ಅಪ್ಪಳಿಸಿವೆ.
ಇರಾನ್‌ನ ಅರೆ-ಅಧಿಕೃತ ವಾರ್ತಾ ಸಂಸ್ಥೆ ‘ಫಾರ್ಸ್’ ವರದಿ ಮಾಡಿರುವಂತೆ, ಟೆಹ್ರಾನ್‌ನ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಹಾಗೂ ಇಸ್ಫಹಾನ್, ಕರಾಜ್ ಮತ್ತು ಕೆರ್ಮನ್ಶಾ ನಗರಗಳಲ್ಲಿಯೂ ಸ್ಫೋಟದ ಶಬ್ದಗಳು ಕೇಳಿಬಂದಿವೆ.
ಇಸ್ರೇಲಿ ಮಾಧ್ಯಮಗಳ ಪ್ರಕಾರ, ಇರಾನ್ ಅಧ್ಯಕ್ಷರ ನಿವಾಸ ಮತ್ತು ಗುಪ್ತಚರ ಇಲಾಖೆಯ ಪ್ರಧಾನ ಕಛೇರಿ ಸೇರಿದಂತೆ ಇರಾನ್‌ನಾದ್ಯಂತ ಇದುವರೆಗೆ ಸುಮಾರು 30 ಗುರಿಗಳ ಮೇಲೆ ದಾಳಿ ನಡೆಸಲಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ
ಈ ನಡುವೆ, ದಾಳಿಯ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, “ಸ್ವಲ್ಪ ಸಮಯದ ಹಿಂದೆ ಅಮೆರಿಕ ಸೇನೆಯು ಇರಾನ್‌ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ,” ಎಂದು ತಿಳಿಸಿದ್ದಾರೆ.
ಇರಾನ್ ಪಡೆಗಳಿಗೆ ಎಚ್ಚರಿಕೆ ನೀಡಿದ ಅವರು, ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಡುವಂತೆ ಮತ್ತು ಹಾಗೆ ಮಾಡಿದರೆ ಅವರನ್ನು “ಗೌರವಯುತವಾಗಿ ನಡೆಸಿಕೊಳ್ಳಲಾಗುವುದು” ಎಂದು ಹೇಳಿದರು.








