ಬೆಂಗಳೂರು: ನಾಳೆಯಿಂದ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಲಿದ್ದಾರೆ. ಬೆಂಗಳೂರು ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಾಳೆ ಸಂಜೆಯಿಂದಲೇ ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. ಆ ಮೂಲಕ ಸಾರ್ವಜನಿಕರಿಗೆ ಬಸ್ ಸಂಚಾರವಿಲ್ಲದ ಬಿಸಿ ಮುಟ್ಟಲಿದೆ ಎಂಬುದಾಗಿ ತಿಳಿದು ಬಂದಿದೆ.
ನಾಳೆ ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರು ಚಲೋಗೆ ಕರೆ ನೀಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಕೂಡ ನಡೆಸಲಿದ್ದಾರೆ. ನಾಲ್ಕು ಸಾರಿಗೆ ನಿಗಮಗಳು ಸೇರಿದಂತೆ ಬಿಎಂಟಿಸಿ ನೌಕರರು ಕೂಡ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಹಿನ್ನಲೆಯಲ್ಲಿ ನಾಳೆ ಸಂಜೆ 4 ಗಂಟೆಯಿಂದ ಸಾರಿಗೆ ಬಸ್ ಸಂಚಾರವು ವ್ಯತ್ಯಯ ಉಂಟಾಗೋ ಸಾಧ್ಯತೆ ಇದೆ. ಕೆ ಎಸ್ ಆರ್ ಟಿ ಸಿ, ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಲಿದ್ದು, ಸಾರ್ವಜನಿಕರಿಗೆ ಬಸ್ ಸಂಚಾರವಿಲ್ಲದ ಬಿಸಿ ಮುಟ್ಟೋ ಸಾಧ್ಯತೆ ಇದೆ.








