ಬೆಂಗಳೂರು: ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಅವರ 2012-13ನೇ ಸಾಲಿನ ಕಾರ್ಯಪಾಲನ ವರದಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮಾಹಿತಿ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚನೆ ಮಾಡಿದೆ.
ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಕೆ.ಎಂ. ಬಾಲಸುಬ್ರಮಣ್ಯ ಪ್ರಸಾದ್ ಅವರು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಅವಧಿಯ ತನ್ನ ಕಾರ್ಯಪಾಲನ ವರದಿ ನೀಡುವಂತೆ ಪ್ರವಾಸೋದ್ಯಮ ಸಚಿವಾಲಯಕ್ಕೆ ಮಾಹಿತಿ ಹಕ್ಕು ಅಧಿನಿಯಮ-2005 ರಡಿಯಲ್ಲಿ ಅರ್ಜಿ ಹಾಕಿದ್ದರು.
ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ನಿಂದ ಅಧಿಕಾರಿ ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಿರುವ ಪತ್ರ ಬಾಲಸುಬ್ರಮಣ್ಯ ಪ್ರಸಾದ್ ಅವರ ಬಳಿಯಲ್ಲಿ ಇದೆ. ಮಾಹಿತಿ ಹಕ್ಕು ಅಧಿನಿಯಮದಡಿ ಸಲ್ಲಿಸಿದ ಅರ್ಜಿಗೆ ಪ್ರವಾಸೋದ್ಯಮ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ ಕಾರ್ಯಪಾಲನ ವರದಿ ಲಭ್ಯವಿಲ್ಲವೆಂಬ ಉತ್ತರ ನೀಡಿದ್ದರು.
ಬಾಲಸುಬ್ರಮಣ್ಯ ಪ್ರಸಾದ್ ಕರ್ನಾಟಕ ಮಾಹಿತಿ ಆಯೋಗದಲ್ಲಿ ದ್ವಿತೀಯ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪೀಠ ಸಂಖ್ಯೆ -4 ರ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್ ಹಾಗೂ ಅರಣ್ಯ ಇಲಾಖೆಯಲ್ಲಿ ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದರು. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಎರಡು ಕಡೆ ಪತ್ರ ಬರೆದು ಕೋರಿದಾಗ ಅಲ್ಲಿಯೂ ಕಾರ್ಯಪಾಲನ ವರದಿ ಲಭ್ಯವಿಲ್ಲವೆಂಬ ಉತ್ತರ ಸಿಕ್ಕಿತ್ತು. ಪ್ರವಾಸೋದ್ಯಮ ಇಲಾಖೆಯ ಅಧೀನ ಕಾರ್ಯದರ್ಶಿ ಮೊಹಮ್ಮದ್ ಇಬ್ರಾಹಿಂ ಅವರಿಗೆ 25 ಸಾವಿರ ರೂ. ದಂಡ ವಿಧಿಸಿ ಹಾಗೂ ಅರ್ಜಿದಾರರಿಗೆ 3 ಸಾವಿರ ರೂ. ಪರಿಹಾರಕ್ಕೂ ಆದೇಶ ನೀಡಲಾಗಿತ್ತು.
ನಿವೃತ್ತ ನೌಕರರೊಬ್ಬರ ಕಾರ್ಯಪಾಲನ ವರದಿಯೇ ಲಭ್ಯವಿಲ್ಲವೆಂಬ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಪ್ರವಾಸೋಮ್ಯಮ ಇಲಾಖೆ ಕಾರ್ಯದರ್ಶಿ ತ್ರಿಲೋಕ ಚಂದ್ರ ಅವರಿಗೆ ಈ ಬಗ್ಗೆ ತನಿಖೆ ಮಾಡಿ ಅನುಪಾಲನ ವರದಿ ಸಲ್ಲಿಸಲು ಉನ್ನತ ಅಧಿಕಾರಿಗಳ ನೇತೃತ್ವದ ಸಮಿತಿ ರಚನೆ ಮಾಡುವಂತೆ ನಿರ್ದೇಶನ ನೀಡಿದ್ದರು.
ಮಾಹಿತಿ ಆಯೋಗದ ನಿರ್ದೇಶನದಂತೆ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಸಮಿತಿಯಲ್ಲಿ ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರು, ಅರಣ್ಯ ಇಲಾಖೆ ಜಂಟಿ ಕಾರ್ಯದರ್ಶಿ, ಕಾನೂನು ಇಲಾಖೆ ಉಪ ಕಾರ್ಯದರ್ಶಿ, ಡಿಪಿಎಆರ್‌ನ ಉಪ ಕಾರ್ಯದರ್ಶಿ ಸದಸ್ಯರಾಗಿದ್ದು, ಪ್ರವಾಸೋದ್ಯಮ ಇಲಾಖೆಯ ಶಾಖಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಸಮಿತಿಯು 30 ದಿನಗಳ ಕಾಲಾವಕಾಶವನ್ನು ಕೋರಿದೆ.
ತಹಸೀಲ್ದಾರರಿಗೆ ಕಾರಣ ಕೇಳಿ ನೋಟಿಸ್
ಪ್ರತ್ಯೇಕ ಪ್ರಕರಣದಲ್ಲಿ ಕರ್ನಾಟಕ ಮಾಹಿತಿ ಆಯೋಗದ ಸೂಚನೆಯ ಮೇರೆಗೆ ರಾಜ್ಯ ಸರ್ಕಾರ ಹೊಸಕೋಟೆ ತಹಸೀಲ್ದಾರ್ ಸೋಮಶೇಖರ್ ಅವರಿಗೆ ಕೆಸಿಎಸ್‌ಆರ್ ನಿಯಮದಡಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಹೊಸಕೋಟೆಯ ಮುನಿಕೃಷ್ಣಪ್ಪ ಅವರು ತಮ್ಮ ಜಮೀನಿ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಹೊಸಕೋಟೆ ತಾಲೂಕು ಕಚೇರಿಯಲ್ಲಿ ಮಾಹಿತಿ ನೀಡಿರಲಿಲ್ಲ. ಮಾಹಿತಿ ಆಯೋಗದಲ್ಲಿ ದ್ವಿತೀಯ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಕರ್ನಾಟಕ ಮಾಹಿತಿ ಆಯೋಗದ ಪೀಠ ಸಂಖ್ಯೆ 4ರ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆಯವರು ಸಾಕಷ್ಟು ಸೂಚನೆ ನೀಡಿದರೂ ಮಾಹಿತಿ ಒದಗಿಸದೇ ನಿರ್ಲಕ್ಷ್ಯ ತೋರಿಸಲಾಗಿತ್ತು.
ಒಬ್ಬರೇ ಅರ್ಜಿದಾರರ ಐದು ಅರ್ಜಿಗಳಿಗೆ ಸಂಬಂಧಿಸಿದಂತೆ 80 ಸಾವಿರ ರೂ. ದಂಡ ಸಹ ವಿಧಿಸಿ ಅರ್ಜಿದಾರರಿಗೆ ಪರಿಹಾರಕ್ಕೂ ಸೂಚನೆ ನೀಡಲಾಗಿತ್ತು. ಆದರೂ ತಹಸೀಲ್ದಾರರ ನಿರ್ಲಕ್ಷ್ಯ ಭಾವನೆ ಮುಂದುವರೆದಿದ್ದರಿಂದ ಇಲಾಖಾ ತನಿಖೆ ನಡೆಸಿ ಸೂಕ್ತ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅವರಿಗೆ ಆಯೋಗ ನಿರ್ದೇಶನ ನೀಡಿತ್ತು.
ಹೊಸಕೋಟೆ ತಹಸೀಲ್ದಾರ್ ಸೋಮಶೇಖರ್ ಅವರಿಗೆ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತನೆ ಮಾಡಿ ದುರ್ನಡತೆ ತೋರಿದ್ದಿರಿ ಎಂದು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದು, 15 ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ.
BREAKING: ಸ್ಯಾಂಡಲ್ ವುಡ್ ಖ್ಯಾತ ಕಿರುತೆರೆ ನಟಿ ರಶ್ಮಿ ಲೀಲಾ ಇನ್ನಿಲ್ಲ | Actress Rashmi Leela No More
BE Alert: ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡೋರೇ ಹುಷಾರ್: ಯುವಕ ಅರೆಸ್ಟ್, ಯಾಕೆ ಅಂತ ಈ ಸುದ್ದಿ ಓದಿ








