ನವದೆಹಲಿ: 2005 ರ ಭಾರತೀಯ ವಿದೇಶಾಂಗ ಸೇವೆಯ ಬ್ಯಾಚ್ ನ ರಚಿತಾ ಭಂಡಾರಿ ಅವರನ್ನು ಮಾಲ್ಟಾದ ಭಾರತದ ಮುಂದಿನ ಹೈಕಮಿಷನರ್ ಆಗಿ ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ತಿಳಿಸಿದೆ.
ಭಂಡಾರಿ ಶೀಘ್ರದಲ್ಲೇ ಈ ಹುದ್ದೆಯನ್ನು ವಹಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಭಾರತ ಮತ್ತು ಮಾಲ್ಟಾ ಸ್ನೇಹಪರ ಮತ್ತು ಸೌಹಾರ್ದಯುತ ಸಂಬಂಧಗಳನ್ನು ಹೊಂದಿವೆ. 1964ರಲ್ಲಿ ಮಾಲ್ಟಾದ ಸ್ವಾತಂತ್ರ್ಯವನ್ನು ಗುರುತಿಸಿದ ಮೊದಲ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿತ್ತು ಮತ್ತು 1965ರಲ್ಲಿ ಮಾಲ್ಟಾದೊಂದಿಗೆ ರಾಜತಾಂತ್ರಿಕ ಸಂಬಂಧ ಸ್ಥಾಪಿಸಿತು.
ಮಾಲ್ಟಾದಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು 2017ರ ಜನವರಿಯಲ್ಲಿ ಪುನರಾರಂಭಿಸಲಾಯಿತು ಮತ್ತು ಭಾರತದ ರೆಸಿಡೆಂಟ್ ಹೈಕಮಿಷನರ್ 2018ರ ಜನವರಿಯಲ್ಲಿ ಅಧಿಕಾರ ವಹಿಸಿಕೊಂಡರು. ಜುಲೈ ೨೦೦೭ ರಲ್ಲಿ ಮಾಲ್ಟಾ ತನ್ನ ಹೈಕಮಿಷನ್ ಅನ್ನು ನವದೆಹಲಿಯಲ್ಲಿ ತೆರೆಯಿತು ಮತ್ತು ಕೋಲ್ಕತ್ತಾ, ಚೆನ್ನೈ ಮತ್ತು ಮುಂಬೈನಲ್ಲಿ ಗೌರವ ಕಾನ್ಸುಲ್ ಗಳನ್ನು ಹೊಂದಿದೆ.
ಭಾರತ-ಮಾಲ್ಟಾ ದ್ವಿಪಕ್ಷೀಯ ಸಂಬಂಧಗಳು ಸ್ನೇಹಪರವಾಗಿದ್ದು, ಎರಡೂ ಕಡೆಯ ನಡುವೆ ಹಲವಾರು ಭೇಟಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ ಎಂದು ಎಂಇಎ ತಿಳಿಸಿದೆ.
ಭಾರತ ಮತ್ತು ಮಾಲ್ಟಾ ನಡುವೆ 1992ರಲ್ಲಿ ಸಾಂಸ್ಕೃತಿಕ ಒಪ್ಪಂದಕ್ಕೆ ಅಂಕಿತ ಹಾಕಲಾಗಿತ್ತು ಮತ್ತು ಅದು ಜಾರಿಯಲ್ಲಿದೆ. ಚಲನಚಿತ್ರೋತ್ಸವಗಳು, ಆಹಾರ ಉತ್ಸವಗಳು ಮತ್ತು ಭಾರತೀಯ ಸಾಂಸ್ಕೃತಿಕ ತಂಡಗಳ ಪ್ರದರ್ಶನಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೈಕಮಿಷನ್ ಆಯೋಜಿಸಿದೆ. ಮಾಲ್ಟಾದಲ್ಲಿ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಉಡುಗೊರೆಯಾಗಿ ನೀಡಿದ ಮಹಾತ್ಮ ಗಾಂಧಿಯವರ ಪ್ರತಿಮೆ ಇದೆ.








