ಬೆಂಗಳೂರು : ರಾಜ್ಯದಲ್ಲಿ ಗ್ರಾಮಪಂಚಾತಿ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ನಲ್ಲೇ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ಮತಯಂತ್ರಗಳ ಬದಲಿಗೆ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ. ಕರ್ನಾಟಕ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮ ರದ್ದು ಮಾಡಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿನ ಸಾಲ ವಸೂಲಾತಿಗೆ ಸಂಬಂಧಿಸಿದೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ 2013-14 ರಿಂದ 2018- 19 ನೇ ಸಾಲಿಗೆ ವಿವಿಧ ಯೋಜನೆ ನೀಡಲಾಗಿರುವ ಸಾಲವನ್ನು ಒನ್ ಟೈಮ್ ಸೆಟ್ಲ್ಮೆಂಟ್ ಮೂಲಕ ವಸೂಲಾತಿ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.
ನಿಗಮದಲ್ಲಿ 981 ಕೋಟಿ ರೂಪಾಯಿ ವಸೂಲಾತಿ ಬಾಕಿ ಇದೆ. ರಿಕವರಿ ಮಾಡಲು ಅವಕಾಶ ಇರುವುದು 740 ಕೋಟಿ ರೂ. ಆಗಿದ್ದು, ಇದಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.
ಇನ್ನು ಐತಿಹಾಸಿಕವಾಗಿ ಅತ್ಯಂತ ಶ್ರೀಮಂತ ಪ್ರದೇಶವಾಗಿರುವ ನಮ್ಮ ಲಕ್ಕುಂಡಿಯಲ್ಲಿ ಸ್ಮಾರಕಗಳ ರಕ್ಷಣಾ ಕಾರ್ಯವನ್ನು ಮುಂದುವರಿಸಿದ್ದೇವೆ. ಈಗಾಗಲೇ ಲಕ್ಕುಂಡಿಯಲ್ಲಿರುವ ಪುರಾತನ ದೇವಸ್ಥಾನಗಳು ಸೇರಿದಂತೆ ವಿವಿಧ ಐತಿಹ್ಯಗಳ ಅಭಿವೃದ್ಧಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಇದೀಗ ಈ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಲಕ್ಕುಂಡಿಯ ಪ್ರಾಚೀನ 5 ದೇವಸ್ಥಾನಗಳು ಹಾಗೂ 1 ಪ್ರಾಚೀನ ಬಾವಿಯ ಸಮಗ್ರ ಅಭಿವೃದ್ಧಿಗಾಗಿ 10 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದ್ದೇವೆ ಎಂದು ಹೇಳಿದ್ದಾರೆ.








