ಬೆಂಗಳೂರು: “ಲ್ಯಾಂಡ್ ಲಾರ್ಡ್ ಶೀರ್ಷಿಕೆಯ ಕನ್ನಡ ಚಲನಚಿತ್ರ ಮೇಲಿನ ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಮೊತ್ತವನ್ನು ಪ್ರದರ್ಶಕರಿಗೆ ಹಿಂಪಾವತಿ ಮಾಡುವ ಮೂಲಕ ಸದರಿ ಚಲನಚಿತ್ರ ವೀಕ್ಷಕರಿಗೆ ವಿನಾಯಿತಿ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಕುರಿತು ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದ್ದು, ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಅಂಬೇಡ್ಕರ್ ವಾದ), ರಾಜ್ಯ ಸಮಿತಿ, ಪ್ರಧಾನ ಕಛೇರಿ, #72, ಕಾರ್ಪೋರೇಷನ್ ಕಟ್ಟಡ, ಕ್ವಿನ್ಸ್ ರಸ್ತೆ, ಬೆಂಗಳೂರು- 560001, ಇವರು ದಿನಾಂಕ: 02-02-2026 ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಕರ್ನಾಟಕ ರಾಜ್ಯದಲ್ಲಿ ಪ್ರದರ್ಶನಗೊಳ್ಳಲಿರುವ “ಲ್ಯಾಂಡ್ ಲಾರ್ಡ್” ಕನ್ನಡ ಚಲನಚಿತ್ರಕ್ಕೆ ಶೇಕಡ 100ರಷ್ಟು ತೆರಿಗೆ ವಿನಾಯಿತಿ ಕಲ್ಪಿಸುವಂತೆ ಮನವಿ ಮಾಡಿರುತ್ತಾರೆ ಎಂದಿದೆ.
ಸದರಿ ಮನವಿ ಪತ್ರದಲ್ಲಿ ಜಮೀನ್ದಾರಿ ವ್ಯವಸ್ಥೆಯ ಅವಶೇಷಗಳು, ಭೂಮಿಯಿಲ್ಲದ ಕಾರ್ಮಿಕರ ದೀರ್ಘಕಾಲದ ಹೋರಾಟ, ದಲಿತ-ಅಂಚಿನ ಸಮುದಾಯಗಳ ಬದುಕಿನ ಸಂಕಷ್ಟಗಳು ಮತ್ತು ಸಂವಿಧಾನವು ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವ ಪ್ರಯತ್ನ ಈ ಚಿತ್ರದ ಕಥಾ ಹಂದರದಲ್ಲಿ ಒಳಗೊಂಡಿದ್ದು, ಇದರ ಜೊತೆಗೆ ಈ ಚಿತ್ರವು ಸಮಾಜದಲ್ಲಿ ಸಂವಿಧಾನಾತ್ಮಕ ಜಾಗೃತಿ ಮೂಡಿಸಲು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಲು ಅತ್ಯಂತ ಅಗತ್ಯವಾಗಿವೆ ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳು, ವಿದ್ಯಾರ್ಥಿಗಳು, ಕಾರ್ಮಿಕ ವರ್ಗ ಹಾಗೂ ಯುವಜನತೆಗೆ ಸಂದೇಶ ತಲುಪಲು ಸಂಪೂರ್ಣ ಮನರಂಜನಾ ತೆರಿಗೆ ವಿನಾಯಿತಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ. ಕರ್ನಾಟಕ ರಾಜ್ಯದಾದ್ಯಂತ ಚಲನಚಿತ್ರ ಮಂದಿರಗಳೂ / ಮಲ್ಟಿಪ್ಲೆಕ್ಸ್ ಗಳಲ್ಲಿ ಪ್ರದರ್ಶನಗೊಳ್ಳುವ “ಲ್ಯಾಂಡ್ ಲಾರ್ಡ್” ಎಂಬ ಶೀರ್ಷಿಕೆಯುಳ್ಳ ಕನ್ನಡ ಚಲನಚಿತ್ರ ಪ್ರದರ್ಶನಗಳಿಗೆ ದಿನಾಂಕ:05/02/2026 ರಿಂದ ಆರು ತಿಂಗಳ ಅವಧಿಗೆ ಸರ್ಕಾರವು ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ) ಹಿಂಪಾವತಿ ಸೌಲಭ್ಯವನ್ನು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ನೀಡಿರುತ್ತದೆ.
(ಎ) ಪ್ರದರ್ಶಕರು ಸಿನೆಮಾ ಟಿಕೆಟ್ ಮೇಲೆ ಎಸ್‌ಜಿಎಸ್‌ಟಿ ವಿಧಿಸತಕ್ಕದ್ದಲ್ಲ ಮತ್ತು ಸಂಗ್ರಹಿಸತಕ್ಕದ್ದಲ್ಲ ಹಾಗೂ ಎಸ್‌ಜಿಎಸ್‌ಟಿ ಮೊತ್ತವನ್ನು ಕಡಿತಗೊಳಿಸಿದ ದರದಲ್ಲಿಯೇ ಟಿಕೆಟ್ ಗಳನ್ನು ಮಾರಾಟ ಮಾಡತಕ್ಕದ್ದು.
(ಬಿ) ಸರ್ಕಾರದ ಆದೇಶವು ಜಾರಿಯಲ್ಲಿರುವ ಅವಧಿಯಲ್ಲಿ “ಲ್ಯಾಂಡ್ ಲಾರ್ಡ್” ಸಿನೆಮಾ ಪ್ರದರ್ಶನದ ಪ್ರವೇಶಕ್ಕೆ ಮಾರಾಟ ಮಾಡುವ ಟಿಕೆಟ್ ಗಳ ಮೇಲೆ “ಕರ್ನಾಟಕ ಸರ್ಕಾರದ ಆದೇಶದನ್ವಯ ರಾಜ್ಯ ಜಿಎಸ್‌ಟಿಯನ್ನು ಸಂಗ್ರಹಿಸಿರುವುದಿಲ್ಲ” ಎಂಬ ಪದಗಳು ಪ್ರಮುಖವಾಗಿ ಎದ್ದು ಕಾಣುವಂತೆ ಇರತಕ್ಕದ್ದು.
(ಸಿ) ರಾಜ್ಯ ಸರಕು ಮತ್ತು ಸೇವಾ ತೆರಿಗೆ (ಎಸ್‌ಜಿಎಸ್‌ಟಿ)ನ್ನು ಪ್ರವೇಶ ಶುಲ್ಕದ ಮೇಲೆ ವಿಧಿಸದೆ ಮತ್ತು ಗ್ರಾಹಕರಿಂದ ಸಂಗ್ರಹಿಸದಿದ್ದರೂ, ಸಿನೆಮಾ ಮಂದಿರ / ಮಲ್ಟಿಪ್ಲೆಕ್ಸ್ ಪ್ರದರ್ಶಕರು ತೆರಿಗೆ ನಮೂನೆಯನ್ನು ಸಲ್ಲಿಸಿ ಇತರೆ ಸಿನೆಮಾಗಳಿಗೆ ಜಮೆ ಮಾಡುವ ರೀತಿಯಲ್ಲೇ ತಮ್ಮ ಸಂಪನ್ಮೂಲದಿಂದಲೇ ರಾಜ್ಯ ಜಿಎಸ್‌ಟಿ ಮೊತ್ತವನ್ನು ಜಮೆ ಮಾಡತಕ್ಕದ್ದು.
(ಡಿ) ಕಂಡಿಕೆ (ಸಿ) ಅನ್ವಯ ಪಾವತಿಸಿದ ಎಸ್‌ಜಿಎಸ್‌ಟಿ ಮೊತ್ತವನ್ನು ವಾಣಿಜ್ಯ ತೆರಿಗೆ ಆಯುಕ್ತರು (ಕರ್ನಾಟಕ) ನಿಗದಿಪಡಿಸಿದ ನಮೂನೆಯಲ್ಲಿ ವ್ಯಾಪ್ತಿ ಹೊಂದಿದ ಸ್ಥಳೀಯ ಜಿಎಸ್‌ಟಿ ಕಛೇರಿ / ಉಪ ಜಿಎಸ್‌ಟಿ ಕಛೇರಿಗೆ ಅರ್ಜಿ ಸಲ್ಲಿಸಿ ಹಿಂಪಾವತಿಗೆ ಕ್ಷೇಮು ಮಾಡತಕ್ಕದ್ದು.
(ಇ) ಯುಕ್ತ ಅಧಿಕಾರಿಯು (ವ್ಯಾಪ್ತಿ ಹೊಂದಿದ ಸ್ಥಳೀಯ ಜಿಎಸ್‌ಟಿ ಅಧಿಕಾರಿ / ಉಪ ಜಿಎಸ್‌ಟಿ ಅಧಿಕಾರಿ) ತಮ್ಮ ವಿಭಾಗೀಯ ಸರಕು ಮತ್ತು ಸೇವಾ ತೆರಿಗೆ ಜಂಟಿ ಆಯುಕ್ತರ ಮೂಲಕ ಹಿಂಪಾವತಿಗೆ ಅರ್ಹವಾದ ಮೊತ್ತದ ದೃಢೀಕರಣಕ್ಕಾಗಿ ವಾಣಿಜ್ಯ ತೆರಿಗೆ ಆಯುಕ್ತರು (ಕರ್ನಾಟಕ) ಇವರಿಗೆ ಶಿಫಾರಸ್ಸು ಮಾಡತಕ್ಕದ್ದು.
(ಎಫ್) ಪ್ರತಿ ಪ್ರದರ್ಶಕರಿಗೆ ಸಂಬಂಧಿಸಿದಂತೆ, ವಾಣಿಜ್ಯ ತೆರಿಗೆ ಆಯುಕ್ತರು, ಬೆಂಗಳೂರು ಇವರಿಂದ ಹಿಂಪಾವತಿಗೆ ದೃಢೀಕರಣಗೊಂಡ ಮೊತ್ತದ ವರದಿಯನ್ನು ಸ್ವೀಕರಿಸಿದ ನಂತರ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು ಇವರು ಬಟವಾಡೆಗೆ ವ್ಯವಸ್ಥೆ ಮಾಡತಕ್ಕದ್ದು.
(ಜಿ) ಈ ರೀತಿಯಾಗಿ ಹಿಂಪಾವತಿ ಮಾಡಲಾಗುವ ಮೊತ್ತವನ್ನು ಲೆಕ್ಕಶೀರ್ಷಿಕೆ 2220-01-105-0-01-ಚಲನಚಿತ್ರ ನಿರ್ಮಾಣ 106 (ಸಹಾಯಧನ)ಗೆ ಖರ್ಚು ಹಾಕತಕ್ಕದ್ದು.
(ಹೆಚ್) ಪ್ರದರ್ಶಕರು ಹಿಂಪಾವತಿ ಕ್ಷೇಮು ಮಾಡಲು ಅಗತ್ಯವಿರುವ ಕಾರ್ಯ ವಿಧಾನ ಕುರಿತು ವಾಣಿಜ್ಯ ತೆರಿಗೆ ಆಯುಕ್ತರು (ಕ), ಬೆಂಗಳೂರು, ಇವರು ಸುತ್ತೋಲೆ ಮೂಲಕ ಸೂಚನೆಗಳನ್ನು ನೀಡತಕ್ಕದ್ದು ಎಂದಿದೆ.











