ಬೆಂಗಳೂರು : ರಾಜ್ಯದ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ ನೀಡಿದ್ದು, ಭೂಮಿ ತಂತ್ರಾಂಶದಲ್ಲಿ ಆಕ್ಷೇಪಣೆ ಇಲ್ಲದ ಪ್ರಕರಣಗಳಲ್ಲಿ ಮ್ಯುಟೇಶನ್ ಅನುಮೋದನೆಯನ್ನು ಸ್ವಯಂಚಾಲಿತವಾಗಿ ನಿರ್ವಹಿಸುವ ಕುರಿತು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ಆದೇಶದಲ್ಲಿ ಏನಿದೆ?
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಭೂಕಂದಾಯ ನಿಯಮಗಳು 1966 ರ ನಿಯಮ 66ರ ಅಡಿಯಲ್ಲಿ ಹಕ್ಕುಬದಲಾವಣೆಯ ನಮೂದನ್ನು ಪ್ರಸ್ತಾಪಿಸಿದ್ದು, ಈ ಕುರಿತು ಉಲ್ಲೇಖಿತ ಸರ್ಕಾರದ ಅಧಿಸೂಚನೆಯಲ್ಲಿ ಆಕ್ಷೇಪಣೆ ಇಲ್ಲದ ಪ್ರಕರಣಗಳಲ್ಲಿ ಹಕ್ಕುಬದಲಾವಣೆಯ ನಮೂದುಗಳು ಸ್ವಯಂಚಾಲಿತವಾಗಿ ಜಾರಿಯಾಗತಕ್ಕದ್ದು ಎಂದು ಆದೇಶಿಸಲಾಗಿರುತ್ತದೆ.
ಅದರಂತೆ ನೋಂದಾಯಿತ ಮ್ಯುಟೇಶನ್ಗಳಿಗೆ ಅಂದರೆ ಕ್ರಯ, ವಿಭಾಗ,ದಾನ ಇತ್ಯಾದಿ ಮ್ಯುಟೇಶನ್ ಗಳಿಗೆ ಸಂಬಂಧಿಸಿದಂತೆ 7 ದಿನಗಳ ನೋಟೀಸು ಅವಧಿ ಹಾಗೂ ನೋಂದಾಯಿತವಲ್ಲದ ಮುಟೇಶನ್ಗಳಿಗೆ ಅಂದರೆ ಪೌತಿ ಮ್ಯುಟೇಶನ್ ಗಳಿಗೆ ಸಂಬಂಧಿಸಿದಂತೆ 15 ದಿನಗಳ ನೋಟೀಸು ಅವಧಿ ಇರುತ್ತದೆ.
ಪ್ರಸ್ತುತ ತಂತ್ರಾಂಶದಲ್ಲಿ ಸದರಿ ನೋಟೀಸು ಅವಧಿಯ ನಂತರ ಹೋಬಳಿಯ ರಾಜಸ್ವ ನಿರೀಕ್ಷಕರು ಮುಟೇಶನ್ ಅನುಮೋದನೆ ಮಾಡುತ್ತಿದ್ದಾರೆ. ಆದರೆ ಉಲ್ಲೇಖಿತ ಸರ್ಕಾರದ ಅಧಿಸೂಚನೆಯಂತೆ ಸ್ವಯಂಚಾಲಿತ ಮುಟೇಶನ್ ಅನುಮೋದನೆ ಜಾರಿಗೊಳಿಸಿದ್ದು, ಅದರಂತೆ ನೋಂದಾಯಿತ ಮುಟೇಶನ್ಗಳಿಗೆ ಮತ್ತು ನೋಂದಾಯಿತವಲ್ಲದ ಮುಟೇಶನ್ಗಳಿಗೆ ಕ್ರಮವಾಗಿ 8ನೇ ದಿನದ ಮಧರಾತ್ರಿ ಮತ್ತು 16ನೇ ದಿನದ ಮಧರಾತ್ರಿ ತಂತ್ರಾಂಶದಲ್ಲಿ ಸ್ವಯಂಚಾಲಿತವಾಗಿ ಸರ್ವರ್ ಸಿಗೇಚರ್ ಮೂಲಕ ಅನುಮೋದನೆಯಾಗುತ್ತದೆ. ಅದರಂತೆ ರಾಜಸ್ವ ನಿರೀಕ್ಷಕರ ಅನುಮೋದನೆಯ ಅಗತ್ಯವಿರುವುದಿಲ್ಲ. ಆದರೆ ಸಂಬಂಧಿಸಿದ ರಾಜಸ್ವ ನಿರೀಕ್ಷಕರು ಸದರಿ ನೋಟೀಸು ಅವಧಿಯಲ್ಲಿ ಆಕ್ಷೇಪಣೆಯನ್ನು ಸಲ್ಲಿಸಲು ಅವಕಾಶವಿರುತ್ತದೆ.
ಸದರಿ ಸ್ವಯಂಚಾಲಿತ ಮ್ಯುಟೇಶನ್ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಮಂಡ್ಯ ಜಿಲ್ಲೆಯ ಮಂಡ್ಯ ಮತ್ತು ಮದ್ದೂರು ತಾಲ್ಲೂಕುಗಳಲ್ಲಿ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಅಳವಡಿಸಲು ತೀರ್ಮಾನಿಸಲಾಗಿರುತ್ತದೆ.
ಆದುದರಿಂದ ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಜಮೀನುಗಳು, ಪಿಟಿಸಿಲ್ ಜಮೀನುಗಳು ಮತ್ತು ಸರ್ಕಾರಿ ನಿಬಂಧನೆ ಇರುವೆ ಜಮೀನುಗಳನ್ನು ಕಡ್ಡಾಯವಾಗಿ ಗುರುತಿಸಿ, ಒಂದು ವಾರದ ಒಳಗಾಗಿ ಫ್ಲಾಗ್ ಮಾಡುವಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ತಾಲ್ಲೂಕು ತಹಶೀಲ್ದಾರರಿಗೆ ನಿರ್ದೇಶನ ನೀಡುವಂತೆ ಈ ಮೂಲಕ ತಿಳಿಸಿದೆ.









