ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಈ ಬಾರಿಯ ಬಜೆಟ್ ಯಥಾಪ್ರಕಾರ ನಿರಾಶದಾಯಕವಾಗಿದ್ದು, ಕರ್ನಾಟಕದ ದೃಷ್ಟಿಕೋನದಿಂದ ಕೇಂದ್ರ ಬಜೆಟ್‌ನಿಂದ ಯಾವುದೇ ಲಾಭವಾಗಿಲ್ಲ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೇಳಿದ್ದಾರೆ.
ಕೇಂದ್ರ ಬಜೆಟ್ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ಹೈಸ್ಪೀಡ್ ರೈಲು ಕಾರಿಡಾರ್‌ನಿಂದ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಬಡವರಿಗೆ ಯಾವುದೇ ಕಲ್ಯಾಣ ಯೋಜನೆಗಳನ್ನು ಪ್ರಕಟಿಸಿಲ್ಲ. ಇದು ಪ್ರತಿ ವರ್ಷದಂತೆ ನಿರಾಶದಾಯಕವಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿನ ದಮನಿತರು, ರೈತರು ಮತ್ತು ಯುವಜನರ ಅಗತ್ಯಗಳನ್ನು ಈಡೇರಿಸಲು ಈ ಬಜೆಟ್ ವಿಫಲವಾಗಿದೆ. ಬದಲಾಗಿ ಶ್ರೀಮಂತರು ಮತ್ತು ಸಾಮಾನ್ಯ ಜನರ ನಡುವಿನ ಆರ್ಥಿಕ ಅಂತರವನ್ನು ಮತ್ತಷ್ಟು ಹೆಚ್ಚಿಸುವ ಅಪಾಯವನ್ನು ಸೃಷ್ಟಿಸಿದೆ ಎಂದು ಪ್ರತಿಕ್ರಿಯಸಿದ್ದಾರೆ.
ಕರ್ನಾಟಕ ಸರ್ಕಾರವು, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸಬೇಕು ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಘೋಷಿಸಲಾಗಿರುವ ₹5,600 ಕೋಟಿ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿತ್ತು. ಆದರೆ ಕೇಂದ್ರ ಬಜೆಟ್ ನಲ್ಲಿ ಈ ಎರಡೂ ಯೋಜನೆಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ರೈತರ ಜೀವನಮಟ್ಟ ಸುಧಾರಣೆಗೆ ಅಗತ್ಯವಾದ ನೀರಾವರಿ ಕ್ಷೇತ್ರವನ್ನು ಈ ಬಜೆಟ್‌ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಯೋಜನವಿಲ್ಲದ ಹೈಸ್ಪೀಡ್ ರೈಲು ಕಾರಿಡಾರ್
ಬೆಂಗಳೂರನ್ನು ಸಂಪರ್ಕಿಸುವ ಎರಡು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಈ ಬಾರಿಯ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಅವು ಕರ್ನಾಟಕದಲ್ಲಿ ಕೆಲವೇ ಕಿಲೋಮೀಟರ್ ಹಾದು ಹೋಗುತ್ತವೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ, ಬೆಂಗಳೂರು ಮತ್ತು ಪುಣೆ ನಡುವಿನ ಹೈಸ್ಪೀಡ್ ರೈಲು ಕಾರಿಡಾರ್‌ಗೆ ಆದ್ಯತೆ ನೀಡಬೇಕಾಗಿತ್ತು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಎರಡು ರಕ್ಷಣಾ ಕಾರಿಡಾರ್‌ಗಳನ್ನು ಮಂಜೂರು ಮಾಡಬೇಕೆಂಬ ಕರ್ನಾಟಕದ ಬೇಡಿಕೆಗೆ ಮನ್ನಣೆ ದೊರೆತಿಲ್ಲ ಎಂದು ತಿಳಿಸಿದ್ದಾರೆ.
ಗಿಗ್ ಕಾರ್ಮಿಕರ ನಿರ್ಲಕ್ಷ್ಯ
ಇತ್ತೀಚಿನ ವರ್ಷಗಳಲ್ಲಿ ಗಿಗ್ ಆರ್ಥಿಕತೆ ಹೆಚ್ಚು ಬೇಡಿಕೆ ಸೃಷ್ಟಿಸಿದೆ. ಕಾರ್ಮಿಕರ ಸಂಖ್ಯೆಯಲ್ಲಿ ತೀವ್ರ ಏರಿಕೆಯ ಆಗಿದೆ. ಆದರೆ ಬಜೆಟ್ ನಲ್ಲಿ ಅವರ ಕಲ್ಯಾಣಕ್ಕಾಗಿ ಯಾವುದೇ ಕ್ರಮಗಳನ್ನು ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದ್ದಾರೆ.
ಬಯೋಫಾರ್ಮಾ ವಲಯಕ್ಕೆ ಆದ್ಯತೆ, ಕೈಗಾರಿಕಾ ಕ್ಲಸ್ಟರ್‌ಗಳ ಬಳಿ ವಿಶ್ವವಿದ್ಯಾಲಯ ಟೌನ್ ಶಿಫ್ ಸ್ಥಾಪನೆ, ಐದು ಪ್ರಾದೇಶಿಕ ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು, ದತ್ತಾಂಶ ಕೇಂದ್ರಗಳನ್ನು ಉತ್ತೇಜಿಸುವುದು ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿಯನ್ನು ಬಲಪಡಿಸುವುದು ಮುಂತಾದ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದ ಸರ್ಕಾರವನ್ನು ಅನುಕರಣೆ ಮಾಡಿದೆ ಎಂದು ಹೇಳಿದ್ದಾರೆ.








