ಧಾರವಾಡ : ಮಾಹಿತಿ ಹಕ್ಕು ಅಧಿನಿಯಮ 2005 ರ ಅನುಷ್ಠಾನದಿಂದ ಆಡಳಿತದಲ್ಲಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಆಡಳಿತದಲ್ಲಿ ಪಾರದರ್ಶಕತೆ ಕಾಪಾಡುವಲ್ಲಿ ಮತ್ತು ಜನಸ್ನೇಹಿ ಆಡಳಿತ ನೀಡುವಲ್ಲಿ ಆರ್.ಟಿ.ಐ ಕಾಯ್ದೆ ಪರಿಣಾಮಕಾರಿಯಾಗಿದೆ. ಕಾಯ್ದೆಯ ಸದುಪಯೋಗ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅರ್ಜಿಗಳ ವಿಲೇವಾರಿಗೆ ಆಧ್ಯತೆ ನೀಡಿ, ನಿರ್ಲಕ್ಷ್ಯ ಬೇಡ. ಇದೊಂದು ಜನರಿಗೆ ಸರ್ಕಾರ ಕೊಟ್ಟಿರುವ ಪ್ರಮುಖ ಹಾಗೂ ಪ್ರಬಲ ಕಾಯ್ದೆಯಾಗಿದೆ. ಬ್ಲಾಕ್ ಮೇಲರ್‍ಗಳ ಸೃಷ್ಟಿಗೆ ಅವಕಾಶ ಕೊಡದೇ ಮಾಹಿತಿ ನೀಡಿ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ರಾಜಶೇಖರ ಎಸ್., ಪ್ರಕಾಶ ನಾರಾಯಣ ಚನ್ನಾಳ್ ಅವರು ಅಭಿಪ್ರಾಯಪಟ್ಟರು.
ಅವರು ಇಂದು (ಜ.31) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾಹಿತಿ ಆಯೋಗವು ಧಾರವಾಡ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ ಸಹಯೋಗದಲ್ಲಿ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಹಾಗೂ ಪ್ರಥಮ ಮೇಲ್ಮನವಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಅಧಿನಿಯಮ-2005 ರ ಕಾರ್ಯಾಗಾರ ಮತ್ತು ಅಧಿಕಾರಿಗಳೊಂದಿಗೆ ಸಂವಾದ ಕಾರ್ಯಕ್ರಮಲ್ಲಿ ಭಾಗವಹಿಸಿ, ಮಾತನಾಡಿದರು.
ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಅವರು ಮಾತನಾಡಿ, ರಾಜ್ಯ ಮಾಹಿತಿ ಆಯೋಗವು 2005 ರಿಂದ ಇಲ್ಲಿಯವರೆಗೆ ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಕಾರ್ಯನಿರ್ವಹಿಸದ ರಾಜ್ಯದ 10,769 ಅಧಿಕಾರಿಗಳಿಗೆ ಒಟ್ಟು ರೂ. 10,25,66,450 ಗಳ ದಂಡ ವಿಧಿಸಿದೆ. ಈ ಪೈಕಿ 3,084 ಅಧಿಕಾರಿಗಳು ರೂ. 2,70,08,450 ಗಳನ್ನು ಪಾವತಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ 95 ಜನ ಅಧಿಕಾರಿಗಳಿಗೆ ರೂ. 9,09,500 ಗಳ ದಂಡ ವಿಧಿಸಲಾಗಿದ್ದು, ಇದರಲ್ಲಿ 14 ಜನ ಅಧಿಕಾರಿಗಳು 1,15,000 ಗಳನ್ನು ಪಾವತಿಸಿದ್ದಾರೆ. ದಂಡಕ್ಕೆ ಒಳಗಾಗಿರುವ ಅಧಿಕಾರಿಗಳು ದಂಡ ಪಾವತಿಸದೇ ಇದ್ದಲ್ಲಿ ನಿವೃತ್ತಿ ಸೌಲಭ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಆಯೋಗ ಎಚ್ಚರಿಕೆ ನೀಡಿದೆ ಎಂದು ಅವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರ ಕೆಡಿಪಿ ಸಭೆಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಆರ್.ಟಿ.ಐ ಅರ್ಜಿಗಳ ವಿಲೇವಾರಿ ಕುರಿತು ಚರ್ಚಿಸಬೇಕು. ಮತ್ತು ಪ್ರತಿ ಸರ್ಕಾರಿ ಇಲಾಖೆ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಮಾಹಿತಿ ಕುರಿತು ಫಲಕ ಅಳವಡಿಸಬೇಕು ಎಂದು ಸೂಚಿಸಿದರು.
ಮಾಹಿತಿ ಆಯೋಗದಲ್ಲಿ ಧಾರವಾಡ ಜಿಲ್ಲೆಯ 1,485 ಅರ್ಜಿಗಳು ಮೇಲ್ಮನವಿಯಾಗಿ ಸಲ್ಲಿಕೆಯಾಗಿದ್ದು, ವಿಚಾರಣೆಗೆ ಬರಲಿವೆ. ರಾಜ್ಯದಲ್ಲಿ ಆಯೋಗಕ್ಕೆ ಸಲ್ಲಿಕೆಯಾಗುವ ಮೇಲ್ಮನವಿಗಳ ಪೈಕಿ ಧಾರವಾಡ ಜಿಲ್ಲೆಯು 7 ನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.
ಮಾಹಿತಿ ಹಕ್ಕು ಕಾಯ್ದೆಯು ಆಡಳಿತದಲ್ಲಿ ಪಾರದರ್ಶಕತೆ, ಜನರ ವಿಶ್ವಾಸಾರ್ಹತೆ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಅರ್ಜಿದಾರರು ಸಲ್ಲಿಸುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಮಾಹಿತಿ ಹಕ್ಕು ಅಧಿನಿಯಮದಲ್ಲಿ ನೀಡಿರುವ ಸೆಕ್ಷನ್‍ಗಳ ಅನುಸಾರ ವಿಲೇವಾರಿ ಮಾಡಬೇಕು. ಕೇಳಿರುವ ಮಾಹಿತಿಯು ಲಭ್ಯವಿದ್ದಲ್ಲಿ, ವಿಳಂಬ ಮಾಡದೇ ನೀಡಬೇಕು. ಮತ್ತು ಬಿಡಿ ಬಿಡಿಯಾಗಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಬೇಕು. ಮತ್ತು ನಿರ್ಧಿಷ್ಟವಾದ ಮಾಹಿತಿಯನ್ನು ಕೇಳಿದಲ್ಲಿ ಪೂರೈಸಬೇಕು. ಇದರಿಂದ ಮಾಹಿತಿ ಕೇಳುವವರ ಉದ್ದೇಶವು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆ ಎಂದು ತಿಳಿಯಬಹುದು ಎಂದು ಅವರು ಹೇಳಿದರು.
ಒಂದೇ ರೀತಿಯ ಮಾಹಿತಿಯನ್ನು ಪದೇ ಪದೇ ಕೇಳುವುದು ಅಥವಾ ಒಬ್ಬನೇ ವ್ಯಕ್ತಿ ಹೆಚ್ಚಿನ ಅರ್ಜಿಗಳನ್ನು ಸಲ್ಲಿಸಿ ಮಾಹಿತಿ ಕೇಳುವುದು ಅಥವಾ ವ್ಯಕ್ತಿ ಮತ್ತು ವ್ಯಕ್ತಿಯ ಕುಟುಂಬ ಸದಸ್ಯರ ಹೆಸರಿನಲ್ಲಿ ಪದೇ ಪದೇ ಮಾಹಿತಿ ಕೇಳುವುದು, ಮಾಹಿತಿ ನೀಡುವಲ್ಲಿ ಕಿರಿ ಕಿರಿ ಎನ್ನಿಸಬಹುದು. ವೈಯಕ್ತಿಕ ಹಿತಾಸಕ್ತಿಯಿಂದ ಮಾಹಿತಿಯನ್ನು ಕೇಳಬಹುದು. ಆದ್ದರಿಂದ ಅಧಿಕಾರಿಗಳು ಮಾಹಿತಿ ಹಕ್ಕು ಅಧಿನಿಯಮದ ಪುಸ್ತಕವನ್ನು ಅಧ್ಯಯನ ಮಾಡಿ, ಅರ್ಥೈಸಿಕೊಂಡು ಸಮರ್ಪಕ ಮಾಹಿತಿಯನ್ನು ಪೂರೈಸಬೇಕು. ಮಾಹಿತಿಯನ್ನು ಕ್ರೂಢೀಕರಿಸಿ ನೀಡಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಪ್ರತಿ ವಿಷಯಕ್ಕೆ ಪ್ರತ್ಯೇಕವಾಗಿ ನಿರ್ಧಿಷ್ಟ ಮಾಹಿತಿ ಕೇಳಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕಾಲಮಿತಿಯಲ್ಲಿ ವಿಲೇವಾರಿಗೊಳಿಸಬೇಕು ಎಂದು ಅವರು ಹೇಳಿದರು.
ಆರ್.ಟಿ.ಐ ಕಾಯ್ದೆಯಡಿ ಮಾಹಿತಿ ಹಕ್ಕು ಅರ್ಜಿಯ ಹೆಸರಿನಲ್ಲಿ ಪದೇ ಪದೇ ಅರ್ಜಿಗಳನ್ನು ಸಲ್ಲಿಸಿ, ಅಧಿಕಾರಿಗಳನ್ನು ಬೆದರಿಸುವ ರೀತಿಯಲ್ಲಿ ವರ್ತಿಸುವ ವ್ಯಕ್ತಿಗಳನ್ನು ವಿವಿಧ ರಾಜ್ಯಗಳಲ್ಲಿ ಮಾಹಿತಿ ಆಯೋಗಗಳು ಕಪ್ಪು ಪಟ್ಟಿಗೆ ಸೇರಿಸಿವೆ. ರಾಜ್ಯದಲ್ಲಿಯೂ ಈ ರೀತಿಯ ಕ್ರಮ ವಹಿಸಲಾಗಿದೆ. ಆದರೆ ಆಯೋಗವು ಇಂತಹ ಪ್ರಕರಣಗಳನ್ನು ತಡೆಗಟ್ಟಲು ಮತ್ತು ಆರ್.ಟಿ.ಐ ಕಾಯ್ದೆಯ ದುರುಪಯೋಗ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಹೇಳಿದರು.
ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ರಾಜಶೇಖರ ಎಸ್. ಅವರು ಮಾತನಾಡಿ, ಮಾಹಿತಿ ಹಕ್ಕು ಕಾಯ್ದೆಯಂತೆ ನಿಗದಿತ ಅವಧಿಯೊಳಗೆ ಮಾಹಿತಿ ನೀಡದೇ ಇದ್ದರೆ, ತಪ್ಪು ಮಾಹಿತಿ ನೀಡಿದರೆ ಅಥವಾ ದಾಖಲೆಗಳನ್ನು ನಾಶಪಡಿಸಿದರೆ ದಂಡ ವಿಧಿಸಲಾಗುತ್ತದೆ. ಅರ್ಜಿದಾರರು ಕೇಳಿದ ಮಾದರಿಯಲ್ಲಿ ಅಲ್ಲದೆ, ಲಭ್ಯವಿರುವ ರೂಪದಲ್ಲೇ ಮಾಹಿತಿ ನೀಡಬೇಕು ಎಂದು ಹೇಳಿದರು.
ದ್ವಿತೀಯ ಮೇಲ್ಮನವಿ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ, ಆಯೋಗದಿಂದ ನೋಟಿಸ್ ಬಂದ ಕೂಡಲೇ ಸಂಬಂಧಿಸಿದ ದಾಖಲೆಗಳನ್ನು ಆಯೋಗಕ್ಕೆ ಕಳುಹಿಸಬೇಕು. ಆನ್‍ಲೈನ್ ಅರ್ಜಿಗಳ ಮಾಹಿತಿ ಅಧಿಕಾರಿಗಳ ಗಮನಕ್ಕೆ ಬಾರದೇ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಎಚ್ಚರ ವಹಿಸಬೇಕು ಎಂದು ಅವರು ಸೂಚಿಸಿದರು.
ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 100 ಪುಟಗಳವರೆಗೆ ಉಚಿತ ಮಾಹಿತಿ ನೀಡಬೇಕು. ಈ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಜೊತೆಗೆ ಆದಾಯ ಪ್ರಮಾಣ ಪತ್ರ ಲಗತ್ತಿಸುವುದು ಕಡ್ಡಾಯವಾಗಿದೆ. ಆದಾಯ ಪ್ರಮಾಣ ಪತ್ರದ ಬಗ್ಗೆ ಅನುಮಾನ ಇದ್ದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದರು.
ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಾಗ, ವಿಚಾರಣೆಗೆ ಸಂಬಂಧಿಸಿದ ಭಾಗ ಮಾತ್ರ ನೀಡಬೇಕು. ಇತರ ಭಾಗಗಳನ್ನು ಮುಸುಕು ಮಾಡಬೇಕು. ಮಹಿಳಾ ಸಿಬ್ಬಂದಿ ಅಥವಾ ಸಾರ್ವಜನಿಕರ ಗೌಪ್ಯತೆ ಕಾಪಾಡಬೇಕು. ಸಿಸಿಟಿವಿ ದೃಶ್ಯಾವಳಿ ಕಾಯ್ದಿರಿಸುವ ಅವಧಿ ಪಾಲಿಸಬೇಕು.
ಮಾಹಿತಿದಾರರು ಅರ್ಜಿ ಸಲ್ಲಿಸಿದ 30 ದಿನಗಳೊಳಗೆ ಅವರಿಗೆ ತಲುಪಬೇಕಾದ ಮಾಹಿತಿಯನ್ನು ಸರಿಯಾಗಿ ನೀಡಬೇಕು. ಆದರೆ, ಮಾಹಿತಿಯು ಹೆಚ್ಚು ವಿವರವಾದ್ದಾದರೆ ಅದರ ಬಗ್ಗೆ ಮಾಹಿತಿದಾರರಿಗೆ ಅದರ ಖರ್ಚನ್ನು ಅರ್ಜಿದಾರರಿಗೆ ತಿಳಿಸಬೇಕು. ಹಾಗೂ ಅವರಿಗೆ ಮಾಹಿತಿ ಪರಿಶೀಲನೆಗಾಗಿ ಅವಕಾಶವನ್ನು ಕೊಡಬೇಕು ಎಂದು ಹೇಳಿದರು.
ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬಾರದ ಮಾಹಿತಿಯನ್ನು ಐದು ದಿನಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ವರ್ಗಾವಣೆ ಮಾಡಬೇಕು. ವೈಯಕ್ತಿಕ ಮಾಹಿತಿಯನ್ನು ಯಾವುದು ಕೊಡಬೇಕು ಮತ್ತು ಯಾವುದು ಕೊಡಬಾರದು ಎಂಬುದನ್ನು ಗಮನದಿಂದ ತಿಳಿದುಕೊಳ್ಳಬೇಕು. ಈ ವಿಷಯದಲ್ಲಿ, ಅಧಿಕಾರಿಗಳು ಕಾಯ್ದೆಯ ಬಗ್ಗೆ ಸರಿಯಾಗಿ ತಿಳಿದು ಕೊಳ್ಳುವುದು ಅತಿ ಅವಶ್ಯಕ ಎಂದು ಅವರು ಹೇಳಿದರು.
ಮಾಹಿತಿ ಹಕ್ಕು ಕಾಯ್ದೆ ಜನಪರ ಕಾಯ್ದೆಯಾಗಿದ್ದು, ನಿಯಮಾನುಸಾರ ಮಾಹಿತಿ ನೀಡುವ ಮೂಲಕ ದಂಡದಂತಹ ಸಮಸ್ಯೆಗಳಿಂದ ದೂರ ಉಳಿಯಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಮಾಹಿತಿ ಆಯುಕ್ತರಾದ ಪ್ರಕಾಶ ನಾರಾಯಣ ಚನ್ನಾಳ್ ಅವರು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಮಾಹಿತಿ ಹಕ್ಕು ಅರ್ಜಿಗಳ ವಿಲೇವಾರಿ ಕುರಿತು ಸಂವಾದ ಮಾಡಿ, ಉತ್ತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಮಾತನಾಡಿ, ಜಿಲ್ಲೆಯ ಎಲ್ಲ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಹಾಗೂ ಪ್ರಥಮ ಮೇಲ್ಮನವಿ ಅಧಿಕಾರಿಗಳಿಗೆ ನಿರಂತರವಾಗಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಅಗತ್ಯ ತರಬೇತಿ ನೀಡಲಾಗುತ್ತಿದೆ. ಕಳೆದ ಜನವರಿ 2026 ರಿಂದ ಇಲ್ಲಿಯವರೆಗೆ ವಿವಿಧ ಇಲಾಖೆಗಳಲ್ಲಿ ಸಲ್ಲಿಕೆಯಾಗಿದ್ದ ಆರ್.ಟಿ.ಐ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಮತ್ತು 29 ಕ್ಕೂ ಹೆಚ್ಚು ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.
ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು. ಅರ್ಜಿ ವಿಷಯದಲ್ಲಿ ಗೊಂದಲಗಳಿದ್ದರೆ ತಮ್ಮ ಇಲಾಖೆಯ ಮೇಲ್ಮನವಿ ಪ್ರಾಧಿಕಾರಿಗಳ ಗಮನಕ್ಕೆ ತರಬೇಕು. ಸಾರ್ವಜನಿಕರಿಗೆ ಉತ್ತಮವಾದ ಮತ್ತು ವಿಶ್ವಾಸರ್ಹವಾದ ಆಡಳಿತ ನೀಡುವಲ್ಲಿ ಮಾಹಿತಿ ಹಕ್ಕು ಕಾಯ್ದೆ ತುಂಬಾ ಸಹಕಾರಿಯಾಗಿದೆ ಎಂದು ಭುವನೇಶ ಪಾಟೀಲ ಅವರು ತಿಳಿಸಿದರು.
ವೇದಿಕೆಯಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಇದ್ದರು.
ಕಾರ್ಯಾಗಾರದಲ್ಲಿ ಧಾರವಾಡ ತಹಶೀಲ್ದಾರ ಡಾ. ಡಿ.ಎಚ್. ಹೂಗಾರ ಅವರು ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ವಿಭಾಗದ ಸಹಾಯಕ ನಿರ್ದೇಶಕ ರಾಜಶೇಖರ ಕಂಟೆಪ್ಪಗೌಡರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಾರ್ಯಾಗಾರದಲ್ಲಿ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ನಗರಾಭಿವೃದ್ಧಿ ಇಲಾಖೆ, ಇಂಧನ ಇಲಾಖೆ, ಲೋಕೊಪಯೋಗಿ ಇಲಾಖೆ, ಜಲ ಸಂಪನ್ಮೂಲ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಗೃಹ ಇಲಾಖೆ, ಕಾನೂನು ಮತ್ತು ಮಾನವ ಹಕ್ಕುಗಳ ಇಲಾಖೆ, ಕೃಷಿ ಇಲಾಖೆ, ಹಾಗೂ ಇತರ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಹಾಗೂ ಪ್ರಥಮ ಮೇಲ್ಮನವಿ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.








