ಚಿತ್ರದುರ್ಗ: ವಿದ್ಯಾಭ್ಯಾಸ ಮುಗಿಸಿ, ವಿದ್ಯಾರ್ಹತೆಗೆ ತಕ್ಕಂತೆ ಕೆಲಸ ಹುಡುಕಿ ದುಡಿಮೆಯ ಜೀವನ ಪ್ರಾರಂಭಿಸುವ ನಿರೀಕ್ಷೆಯಲ್ಲಿರುವ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಇದೇ ಫೆಬ್ರವರಿ 01 ರಂದು ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ವೇದಿಕೆ ಸಜ್ಜುಗೊಂಡಿದೆ.
ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಬೃಹತ್ ಉದ್ಯೋಗ ಮೇಳವು ಯುವ ಜನತೆಗೆ ಸುವರ್ಣಾವಕಾಶವಾಗಿದೆ.
ನಗರದ ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳವನ್ನು ಅಚ್ಚುಕಟ್ಟಾಗಿ ಆಯೋಜಿಸಲು ಸಕಲ ಸಿದ್ಧತೆಗಳು ಅಂತಿಮ ಹಂತ ತಲುಪಿದ್ದು, ವಿವಿಧ ಕಂಪನಿಗಳು ಅಭ್ಯರ್ಥಿಗಳ ಸಂದರ್ಶನ ಇತ್ಯಾದಿ ನಡೆಸಲು ಅನುಕೂಲವಾಗುವಂತೆ ಕೊಠಡಿಗಳನ್ನು ಸಜ್ಜುಗೊಳಿಸಲಾಗಿದೆ. ಅಭ್ಯರ್ಥಿಗಳಿಗೆ ಗೊಂದಲವಾಗದಂತೆ ಮಾಹಿತಿ ನೀಡುವ ಸಲುವಾಗಿ ಕೌಂಟರ್‍ಗಳನ್ನು ಸ್ಥಾಪಿಸಲಾಗಿದೆ.
100ಕ್ಕೂ ಹೆಚ್ಚು ಕಂಪನಿಗಳು ಭಾಗಿ: ಐಟಿ, ಬಿಟಿ, ಮೆಕ್ಯಾನಿಕಲ್, ಆಟೋಮೊಬೈಲ್ ಸೇರಿದಂತೆ ವಿವಿಧ ಕ್ಷೇತ್ರಗಳ ಸುಮಾರು 100ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಗಡಿ ಭಾಗದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯ ವತಿಯಿಂದ ಚಿತ್ರದುರ್ಗ ಮಾತ್ರವಲ್ಲದೆ ಬೆಂಗಳೂರು, ತುಮಕೂರು, ಶಿವಮೊಗ್ಗ, ಬಳ್ಳಾರಿ ಮತ್ತು ದಾವಣಗೆರೆ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳ ಪ್ರಮುಖ ಕಂಪನಿಗಳನ್ನು ಆಹ್ವಾನಿಸಲಾಗಿದೆ. ಬಿ.ಇ ಪದವೀಧರರಿಗಾಗಿ ಪ್ರತಿಷ್ಠಿತ ಐಟಿ ಕಂಪನಿಗಳು ಸಹ ಈ ಬಾರಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಇ ಹಾಗೂ ಇತರೆ ಯಾವುದೇ ವಿದ್ಯಾರ್ಹತೆ ಹೊಂದಿರುವ 18 ರಿಂದ 35 ವರ್ಷ ವಯೋಮಿತಿಯ ನಿರುದ್ಯೋಗ ಯುವಕ ಯುವತಿಯರು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರತಿ ಅಭ್ಯರ್ಥಿ ಕನಿಷ್ಟ 05 ರಿಂದ 06 ರೆಸ್ಯೂಮ್ ಪ್ರತಿ ಹಾಗೂ ಪೂರಕ ದಾಖಲೆಗಳೊಂದಿಗೆ ಹಾಜರಾಗಬೇಕು.
6,250 ಕ್ಕೂ ಹೆಚ್ಚು ಅಭ್ಯರ್ಥಿಗಳ ನೊಂದಣಿ: ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿರುವ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಗೂಗಲ್ ಫಾರಂ ಬಳಸಿ ಈಗಾಗಲೆ 6,250ಕ್ಕೂ ಅಧಿಕ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೊಂದಣಿ ಮಾಡಿಕೊಂಡಿದ್ದಾರೆ.
ಉದ್ಯೋಗ ಮೇಳದಲ್ಲಿ ಪುರುಷ ಅಭ್ಯರ್ಥಿಗಳಷ್ಟೇ ಮಹಿಳಾ ಅಭ್ಯರ್ಥಿ ಪಾಲ್ಗೊಳ್ಳಲು ಅಸಕ್ತಿ ತೋರಿದ್ದಾರೆ. ಸದ್ಯ ನೊಂದಣಿಯಾದವರಲ್ಲಿ 3,110ಕ್ಕೂ ಹೆಚ್ಚು ಪುರುಷ ಹಾಗೂ 3,100ಕ್ಕೂ ಹೆಚ್ಚು ಮಹಿಳಾ ಅಭ್ಯರ್ಥಿಗಳು ಇದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಸಂಖ್ಯೆ ಶೇ.45ಕ್ಕೂ ಹೆಚ್ವಿದೆ. ಉದ್ಯೋಗ ಮೇಳವು ಅವಕಾಶ ವಂಚತ ಸಮುದಾಯಗಳ ಪಾಲಿಗೆ ವರದಾನವಾಗಿದೆ. 1739ಕ್ಕೂ ಹೆಚ್ಚು ಪರಿಶಿಷ್ಟ ಜಾತಿ, 1042ಕ್ಕೂ ಹೆಚ್ಚು ಪರಿಶಿಷ್ಟ ಪಂಗಡ, 2326ಕ್ಕೂ ಹೆಚ್ಚು ಹಿಂದುಳಿದ ವರ್ಗ, 129 ಅಲ್ಪ ಸಂಖ್ಯಾತ, 977 ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ನೊಂದಣಿಯಾಗಿದ್ದಾರೆ.
6,250 ಅಭ್ಯರ್ಥಿಗಳಲ್ಲಿ ಬಿ.ಎ.ಎಮ್.ಎಸ್., ಬಿ.ಇ.,ಕೃಷಿ ಹಾಗೂ ತೋಟಗಾರಿಕೆ ಸ್ನಾತಕೋತ್ತರ ಪದವಿ, ಎಮ್.ಎಸ್ಸಿ., ಎಂ.ಎ.,ಬಿ.ಎಡ್, ಪದವಿ, ಬಿ.ಪಾರ್ಮಸಿ, ನಸಿರ್ಂಗ್, ಡಿಪ್ಲೊಮೋ, ಐ.ಟಿ.ಐ., ಪಿಯುಸಿ, ಎಸ್.ಎಸ್.ಎಲ್.ಸಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವವರು ಇದ್ದಾರೆ.
ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಬಿ.ಇ ಹಾಗೂ ಇತರೆ ಯಾವುದೇ ವಿದ್ಯಾರ್ಹತೆ ಹೊಂದಿರುವ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಪ್ರತಿ ಅಭ್ಯರ್ಥಿ ಕನಿಷ್ಟ 05 ರಿಂದ 06 ರೆಸ್ಯೂಮ್ ಪ್ರತಿ ಹಾಗೂ ಪೂರಕ ದಾಖಲೆಗಳೊಂದಿಗೆ ಹಾಜರಾಗಬೇಕು. ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಪಾಲ್ಗೊಂಡು ಉದ್ಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆಕಾಶ್ ಮನವಿ ಮಾಡಿದ್ದಾರೆ.
ಉದ್ಯೋಗ ಮೇಳ ಯುವ ಜನತೆಗೆ ಸುವರ್ಣಾವಕಾಶ:
ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಈ ಉದ್ಯೋಗ ಮೇಳವು ಯುವ ಜನತೆಗೆ ಸುವರ್ಣಾವಕಾಶವಾಗಿದೆ. ಸರ್ಕಾರ ಯುವನಿಧಿ ಗ್ಯಾರಂಟಿ ಯೋಜನೆ ಮೂಲಕ ನಿರುದ್ಯೋಗಿಗಳಿಗೆ ಭತ್ಯೆ ನೀಡುತ್ತಿದ್ದು, ಈ ಯೋಜನೆಯ ಎಲ್ಲ ಫಲಾನುಭವಿಗಳು ತಪ್ಪದೆ ಉದ್ಯೋಗಮೇಳದಲ್ಲಿ ಪಾಲ್ಗೊಂಡು, ಕೆಲಸ ಪಡೆದುಕೊಳ್ಳುವ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಅವರು ಮನವಿ ಮಾಡಿದ್ದಾರೆ.








