ಬೆಂಗಳೂರು: ವಿಬಿ ಜಿ ರಾಮ್ ಜಿಯಲ್ಲಿ ರಾಮನ ಉದ್ಭವವನ್ನು ಕಾಂಗ್ರೆಸ್ಸಿಗೆ ಸಹಿಸಲು ಸಾಧ್ಯವಾಗಿಲ್ಲ. ಹಿಂದುತ್ವ, ರಾಮನ ವಿರೋಧ ಕಾಂಗ್ರೆಸ್ಸಿಗೆ ಸಹಜವಾದುದು. ಇದನ್ನು ವಿರೋಧಿಸಲೇಬೇಕೆಂದೇ ವಿಶೇಷ ಅಧಿವೇಶನ ಕರೆದಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಜೋಡಿಸಿದ್ದಲ್ಲ; ವಿಕಸಿತ ಭಾರತ ಗ್ಯಾರಂಟಿ ರೋಜ್‍ಗಾರ್ ಅಜೀವಿಕಾ ಮಿಷನ್ ಎಂಬುದು ರಾಮ್ ಎಂದು ಬಂದಿದೆ. ಯೋಜನೆಯಲ್ಲಿ ಇದೊಂದು ರೀತಿಯ ರಾಮೋದ್ಭವ ಆಗಿದೆ ಎಂದು ತಿಳಿಸಿದರು.
ಸದ್ಯಕ್ಕೆ ಸದನ ಕರೆಯುವ ಅವಶ್ಯಕತೆ ಇರಲಿಲ್ಲ ಎಂದ ಅವರು, ನರೇಗಾ ಯೋಜನೆಯನ್ನು ಇನ್ನಷ್ಟು ಗಟ್ಟಿಗೊಳಿಸಿ ಕಾಯ್ದೆಯನ್ನಾಗಿ ಮಾಡಿ ಕೇಂದ್ರ ಸರಕಾರ ಜಾರಿಗೊಳಿಸಿದ ‘ವಿಬಿ ಜಿ ರಾಮ್ ಜಿ’ ಅಡಿಯಲ್ಲಿ 100 ದಿನಗಳ ಬದಲು 125 ದಿನ ಕೆಲಸ ನೀಡಲಾಗುತ್ತಿದೆ. ಜನರೇ ಕೆಲಸ ಮಾಡಬೇಕು. ಬಯೋಮೆಟ್ರಿಕ್‍ನಲ್ಲಿ ಹೆಸರು ಬಂದು ಅವರಿಗೆ 370 ರೂ. ಕೂಲಿಯನ್ನು ನೇರವಾಗಿ ಖಾತೆಗೇ ನೀಡುವ ಯೋಜನೆ ಇದಾಗಿದೆ. ಯಂತ್ರಗಳಿಂದ ಕೆಲಸ ಮಾಡಬಾರದು; ಜನರೇ ಕೆಲಸ ಮಾಡಿ, ಗ್ರಾಮೀಣ ಜನರ ಬದುಕು ಕಟ್ಟಿಕೊಡುವ ಯೋಜನೆ ಇದೆಂದು ವಿಶ್ಲೇಷಿಸಿದರು.
ಇದರ ಮೂಲಕ ಆಸ್ತಿ ನಿರ್ಮಾಣದ ಉದ್ದೇಶ ಇದೆ. ಆದರೆ, ಕಾಂಗ್ರೆಸ್ಸಿಗೆ ಅದು ಬೇಕಾಗಿರಲಿಲ್ಲ. ‘ವಿಬಿ ಜಿ ರಾಮ್ ಜಿ’ ಎಂದರೆ ರಾಮನ ಹೆಸರನ್ನು ಇದಕ್ಕೆ ಇಟ್ಟಿದ್ದಾರೆಂದು ಕಾಂಗ್ರೆಸ್ಸಿನವರು ಅಂದುಕೊಂಡಿದ್ದಾರೆ. ನರೇಗಾಗೆ ಮೊದಲು ನೆಹರೂ ಅವರ ಹೆಸರು ಇಡಲಾಗಿತ್ತು. ರೋಜ್‍ಗಾರ್ ಯೋಜನೆ ಎಂದಷ್ಟೇ ಕರೆಯಲಾಗಿತ್ತು. ಇವೆಲ್ಲ ಬಿಟ್ಟು ಕೊನೆಯಲ್ಲಿ ಮಹಾತ್ಮ ಗಾಂಧಿ ಎಂದು ಹೆಸರು ಜೋಡಿಸಿದ್ದರು ಎಂದು ವಿವರಿಸಿದರು.
ಇದೆಲ್ಲಕ್ಕೂ ಬಿ.ಕೆ.ಹರಿಪ್ರಸಾದ್ ಕಾರಣರು..
ಜಂಟಿ ಸದನವನ್ನುದ್ದೇಶಿಸಿ ಮಾನ್ಯ ರಾಜ್ಯಪಾಲರು ಭಾಷಣ ಮಾಡುವುದು ನಡೆಯುತ್ತದೆ. ಸಂವಿಧಾನದ ಮುಖ್ಯಸ್ಥರು, ಗೌರವಾನ್ವಿತ ರಾಷ್ಟ್ರಪತಿಗಳ ಪ್ರತಿನಿಧಿಯಾದ ಮಾನ್ಯ ರಾಜ್ಯಪಾಲರು ರಾಷ್ಟ್ರಪತಿಗಳ ಅಂಕಿತ ಅಥವಾ ತೀರ್ಮಾನವನ್ನು ವಿರೋಧಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ತಿಳಿಸಿದರು. ಮಾನ್ಯ ರಾಜ್ಯಪಾಲರು ಭಾಷಣ ಮಾಡಿ ತೆರಳುವಾಗ ಕೆಲವರು ಧಿಕ್ಕಾರ ಕೂಗಿದ್ದಾರೆ. ಅವರ ಮೇಲೆ ಹಲ್ಲೆ ಮಾಡಲು ಹೋಗಿದ್ದನ್ನು ವಿರೋಧಿಸಿದ್ದೇವೆ ಎಂದು ತಿಳಿಸಿದರು. ಇದೆಲ್ಲಕ್ಕೂ ಬಿ.ಕೆ.ಹರಿಪ್ರಸಾದ್ ಕಾರಣರು ಎಂದು ಟೀಕಿಸಿದರು. ಬಿ.ಕೆ.ಹರಿಪ್ರಸಾದ್ ವಿಚಾರ ಸದನದಲ್ಲಿ ಮಾತನಾಡಿದಾಗ ಆರೆಸ್ಸೆಸ್ ಬಗ್ಗೆ ಮಾತನಾಡಿದರು; ಅದು ಅವರಿಗೆ ಚಪಲ ಎಂದು ಆಕ್ಷೇಪಿಸಿದರು.
ಹೆಣ್ಮಕ್ಕಳ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಚಡ್ಡಿಗಳೆಂದು ಮಾತನಾಡಿದ್ದಾರೆ. ಪೋಕ್ಸೋದವರು ಎಂದು ಮಾತನಾಡಿದ್ದಾರೆ. ರಾಜ್ಯಪಾಲರಿಗೆ ಕೈ ತೋರಿಸಿದ್ದೀರಲ್ಲ ಎಂದು ಕೇಳಿದರೆ, ಇನ್ನೇನು ಕಾಲು ತೋರಿಸಬೇಕಿತ್ತೇ ಎಂದು ಉದ್ಧಟತನದ ಮಾತನಾಡಿದ್ದಾಗಿ ದೂರಿದರು. ಪ್ರಶ್ನಿಸಿದ ನನ್ನನ್ನೂ ಕೆಟ್ಟ ಪದದಿಂದ ನಿಂದಿಸಿದ್ದಾರೆ. ಇವರ ಉದ್ಧಟತನ, ಗರ್ವ, ಅಹಂಕಾರ ಮೇರೆ ಮೀರಿದೆ ಎಂದು ವಾಗ್ದಾಳಿ ನಡೆಸಿದರು. ನಾನು ಹಿಮಾಲಯ ಪರ್ವತದವರೆಗೆ ಹೋಗಿದ್ದಾಗಿ ಅವರು ತಿಳಿದುಕೊಂಡಿದ್ದಾರೆ ಎಂದು ಆಕ್ಷೇಪಿಸಿದರು.
ಇಂಥ ವ್ಯಕ್ತಿಗಳು ರಾಜಕೀಯಕ್ಕೆ ನಾಚಿಕೆಗೇಡು..
ಡಿ ಗ್ರೇಡೆಡ್ ನಾಯಕರಾದ ಅವರ ಗರ್ವಭಂಗ ಮಾಡುವಲ್ಲಿ ಸದನದಲ್ಲಿ ಬಿಜೆಪಿಯ ಎಲ್ಲ ಸದಸ್ಯರು ಒಕ್ಕೊರಲಿನಿಂದ ಮಾತನಾಡಿದ್ದಾರೆ. ಇಂಥ ಗರ್ವಿಷ್ಠ ನಾಯಕನನ್ನು ನಾನು ರಾಜಕಾರಣದಲ್ಲಿ ಯಾವತ್ತೂ ನೋಡಿಲ್ಲ ಎಂದು ತಿಳಿಸಿದರು. ಇಂಥ ವ್ಯಕ್ತಿಗಳು ರಾಜಕೀಯಕ್ಕೆ ನಾಚಿಕೆಗೇಡು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕ್ಷಮೆ ಕೇಳಿಸಿ ಅವರ ಗರ್ವಭಂಗ ಮಾಡಿದ್ದೇವೆ ಎಂದು ನುಡಿದರು.
ಈ ಸರಕಾರದ ಭ್ರಷ್ಟಾಚಾರ ದಿನಾ ಒಂದೊಂದು ಹೊರ ಬರುತ್ತಿದೆ. ಅಬಕಾರಿ ಸಚಿವರು ನಿನ್ನೆ ಉತ್ತರ ಕೊಟ್ಟಿದ್ದಾರೆ. ಈಗಾಗಲೇ 25 ಲಕ್ಷ ಹಣವನ್ನು ಲೋಕಾಯುಕ್ತದವರು ಹಿಡಿದಿದ್ದು, ಆಡಿಯೋದಲ್ಲಿ ಮಂತ್ರಿ ಹೆಸರು, ಅವರ ಮಗನ ಹೆಸರಿದೆ. ಅಧಿಕಾರಿಗಳೂ ಜೈಲುಪಾಲಾಗಿ ಜಾಮೀನಿನಡಿ ಹೊರಬಂದಿದ್ದಾರೆ. ಇಷ್ಟೆಲ್ಲ ಸಾಕ್ಷಿ ಇದ್ದರೂ ಸಾಕ್ಷಿ ಕೊಡಿ; ರಾಜೀನಾಮೆ ಕೊಡುವೆ ಎನ್ನುತ್ತಾರೆ ಎಂದು ಟೀಕಿಸಿದರು. ಅಧಿಕಾರ ಸ್ಥಾನ, ಭ್ರಷ್ಟಾಚಾರಕ್ಕೆ ಜಾತಿ ಇಲ್ಲ; ಸಚಿವರ ದಲಿತ ಕಾರ್ಡ್ ಬಳಕೆ ಡಾ. ಅಂಬೇಡ್ಕರರು, ಸಂವಿಧಾನಕ್ಕೆ ಅಪಮಾನ ಮಾಡಿದಂತೆ ಎಂದು ನುಡಿದರು.
ದಲಿತರನ್ನು ಕಾಂಗ್ರೆಸ್ಸೇ ಟಾರ್ಗೆಟ್ ಮಾಡುತ್ತಿದೆ. ಜಾರ್ಜ್ ಅವರ ವಿಷಯವೂ ಬಂತು. ತಮ್ಮ ಖಾತೆಯಲ್ಲಿ ಹಸ್ತಕ್ಷೇಪದ ಸಂಬಂಧ ಅವರು ರಾಜೀನಾಮೆ ಕೊಡುವ ಹಂತಕ್ಕೆ ಹೋದ ವಿಷಯ ಚರ್ಚೆಯಲ್ಲಿತ್ತು. ಅಬಕಾರಿ ಖಾತೆಯಲ್ಲೂ ಹಸ್ತಕ್ಷೇಪ ಆಗಿದೆ. ತಿಮ್ಮಾಪುರ ಅವರು ಮುಗ್ಧರಾದರೆ, ಹಸ್ತಕ್ಷೇಪ ಮಾಡುತ್ತಿರುವವರ ಹೆಸರು ಹೇಳಲಿ ಎಂದು ಆಗ್ರಹಿಸಿದರು. ದಲಿತರನ್ನು ಬಿಜೆಪಿಯವರು ಟಾರ್ಗೆಟ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ನುಂಗಿದ್ದು ಹಸ್ತಕ್ಷೇಪ ಅಲ್ಲವೇ?
ವಾಲ್ಮೀಕಿ ನಿಗಮದಲ್ಲಿ 187 ಕೋಟಿ ನುಂಗಿದ್ದು ಹಸ್ತಕ್ಷೇಪ ಅಲ್ಲವೇ? ನಿಮ್ಮ ಸಚಿವರಾಗಿದ್ದ ನಾಗೇಂದ್ರರ ಮೇಲೆ ಯಾರು ಟಾರ್ಗೆಟ್ ಮಾಡಿದ್ದರು ಎಂದು ಪ್ರಶ್ನಿಸಿದರು. ನೇರಾನೇರ ಮಾತನಾಡುವ ರಾಜಣ್ಣರನ್ನು ಮಂತ್ರಿಗಿರಿಯಿಂದ ಇಳಿಸಿ ಓಡಿಸಿದ್ದಾರೆ. ಅಪೆಕ್ಸ್ ಬ್ಯಾಂಕಿಗೆ ಅವರು ಅಧ್ಯಕ್ಷರಾಗಬೇಕಿತ್ತು. ಸುರ್ಜೇವಾಲಾರಿಗೆ ಹೇಳಿಸಿ ನಿನ್ನೆ ಚುನಾವಣೆ ನಡೆಯದಂತೆ ಮಾಡಿದ್ದಾರೆ ಎಂದು ಟೀಕಿಸಿದರು. ಇದು ಕಾಂಗ್ರೆಸ್ಸಿನ ಟಾರ್ಗೆಟ್ ಎಂದು ದೂರಿದರು.
ಗೃಹ ಇಲಾಖೆಯಲ್ಲೂ ಹಸ್ತಕ್ಷೇಪ..
ಗೃಹ ಸಚಿವ ಡಾ.ಪರಮೇಶ್ವರ್ ಅವರಿಗೆ ಯಾವುದೇ ವಿಚಾರ ಗೊತ್ತೇ ಇರುವುದಿಲ್ಲವೇ? ಕೇಳಿ ತಿಳಿಸುವೆ ಎನ್ನುತ್ತಾರೆ. 2 ವರ್ಷದಿಂದ ಪೊಲೀಸರಲ್ಲಿ ವರ್ಗಾವಣೆ ನಿಂತು ಹೋಗಿದೆ. ಆದರೆ, ಪಟ್ಟಿ ಸಿದ್ಧವಾಗಿದೆ. ಇವರ ಒಂದು ಹೆಸರೂ ಇಲ್ಲವೆಂಬುದು ನನ್ನ ಗಮನಕ್ಕೆ ಬಂದಿದೆ. ಅಲ್ಲಿ ಬೇರೆಯವರ ಹಸ್ತಕ್ಷೇಪ ಇರುವುದರಿಂದ ಅವರೂ ಏನೂ ಮಾಡಲು ಆಗುತ್ತಿಲ್ಲ ಎಂದು ಆರೋಪಿಸಿದರು. ದಲಿತರ ಧ್ವನಿ ಅಡಗಿಸುವಲ್ಲಿ ಕಾಂಗ್ರೆಸ್ ಸಫಲವಾಗಿದೆ ಎಂದು ವಿಶ್ಲೇಷಿಸಿದರು. ಸರಕಾರದ ಖಜಾನೆ ಖಾಲಿ ಆಗಿದೆ. ಗುತ್ತಿಗೆ ಆಧಾರದವರನ್ನು ಹೊರಹಾಕಿದ್ದಾರೆ. ಶಿಕ್ಷಕರು, ಉಪನ್ಯಾಸಕರದೂ ಇದೇ ಪರಿಸ್ಥಿತಿ ಎಂದು ಟೀಕಿಸಿದರು.
ಮತಬ್ಯಾಂಕ್ ಓಲೈಕೆಯಲ್ಲಿ ಕಾಂಗ್ರೆಸ್‍ನವರು ನಿಪುಣರು ಎಂದು ಆಕ್ಷೇಪಿಸಿದರು. ಬೆಂಗಳೂರಿನಲ್ಲಿ ಬಾಂಗ್ಲಾದೇಶೀಯರು, ರೋಹಿಂಗ್ಯಾಗಳು ತುಂಬಿಕೊಂಡಿದ್ದಾರೆ ಎಂದು ದೂರಿದರು. ಮೈಸೂರಿನಲ್ಲಿ ಡ್ರಗ್ಸ್ ಹಿಡಿದಿದ್ದು ಫಿನಾಯಿಲ್ ಫ್ಯಾಕ್ಟರಿ ಎಂದು ಡಾ.ಪರಮೇಶ್ವರ್ ಅವರು ಹೇಳಿದ್ದಾರೆ. ಸೂರತ್‍ನ ನಾರ್ಕೊಟಿಕ್ಸ್ ಬ್ಯುರೋದವರು ಮಾದಕವಸ್ತು ಎಂದಿದ್ದಾರೆ. ಫಿನಾಯಿಲ್ ಇದ್ದುದು ಎಂಬುದು ಓಪಿಯಂ ಆದುದು ಹೇಗೆ ಎಂದು ಕೇಳಿದರು.
ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಸಪ್ತಗಿರಿ ಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.








