ಮಂಡ್ಯ : ಭಾರತೀಯರು ಜಗತ್ತಿಗೆ ಸಂಸ್ಕೃತಿ, ನಾಗರಿಕತೆ ಹಾಗೂ ಬದುಕುವ ಕಲೆಯನ್ನು ಹೇಳಿಕೊಟ್ಟವರು. ನಮ್ಮ ದೇಶ ಉಳಿಯಬೇಕೆಂದರೆ ನಮ್ಮ ಹಿಂದೂ ಧರ್ಮ ಉಳಿಯಬೇಕು. ಆ ನಿಟ್ಟಿನಲ್ಲಿ ಹಿಂದೂಗಳು ಒಗ್ಗೂಡುವ ಜೊತೆಗೆ ಇಂತಹ ಸಮಾಜೋತ್ಸವಗಳು ದೇಶದೆಲ್ಲೆಡೆ ನಡೆಯಬೇಕೆಂದು ಎಸ್.ಐ.ಹೊನ್ನಲಗೆರೆಯ ಶ್ರೀ ಶಿವಕ್ಷೇತ್ರ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಮದ್ದೂರು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹಿಂದೂ ಸಮಾಜೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಸನಾತನ ಧರ್ಮವನ್ನು ನಾವು ಉಳಿಸುವ ಕೆಲಸ ಮಾಡಬೇಕು. ಈ ಧರ್ಮದ ಉಳಿವು ಜಗತ್ತಿನಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ. ಆದ್ದರಿಂದ ಧರ್ಮವನ್ನು ಗಟ್ಟಿಯಾಗಿ ನೆಲೆಗೊಳಿಸಬೇಕು. ಈ ನೆಲದ ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ತಲುಪಿಸಬೇಕು ಆದ್ದರಿಂದ ಹಿಂದೂಗಳೆಲ್ಲರೂ ಸ್ವಯಂ ಜಾಗೃತರಾಗಬೇಕು.
ಹಿಂದೂ ಧರ್ಮ ಸಂಸ್ಕೃತಿಯ ಪ್ರತೀಕವಾಗಿದೆ. ನಮ್ಮ ದೇಶದ ಹಿಂದೂಗಳೆಲ್ಲರೂ ಧರ್ಮದ ಆಚಾರ ವಿಚಾರ ತಿಳಿದುಕೊಳ್ಳಬೇಕು. ಈ ದೇಶ, ಸಂಸ್ಕೃತಿ, ಭೂಮಿ ನನ್ನದು ಎಂಬ ಭಾವನೆ ಮೂಡಬೇಕು. ದೇಶದ ಸಂಸ್ಕೃತಿ ಬಗ್ಗೆ ಜಾಗೃತರಾಗದಿದ್ದರೆ ಧರ್ಮ ಉಳಿಸಲು ಕಷ್ಟವಾಗಲಿದೆ ಎಂದು ಎಚ್ಚರಿಸಿದರು.
ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ್ಯ ಕಾರ್ಯಕಾರಿಣಿ ಸದಸ್ಯ ಉಲ್ಲಾಸ್ ಮಾತನಾಡಿ, ಪ್ರಪಂಚದ 180ಕ್ಕೂ ಹೆಚ್ಚಿನ ದೇಶಗಳಲ್ಲಿ ಯೋಗ, ಆರ್ಯುವೇದ ಸಂಸ್ಕೃತವನ್ನು ಅನುಸರಿಸುತ್ತಿದ್ದಾರೆ. ಭಾರತ ಮಾತೆಯನ್ನು ಪ್ರತಿಯೊಬ್ಬರು ಪೂಜಿಸುವ, ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು.

ದೇಶದಲ್ಲಿರುವ ಹೆಚ್ಚಿನ ಕಾನೂನು ಹಿಂದುಗಳಿಗೆ ಮಾತ್ರ ಅನ್ವಯವಾಗುತ್ತದೆ. ಇತರರಿಗೆ ಕಾನೂನು ಯಾವ ಲೆಕ್ಕಕ್ಕೂ ಇಲ್ಲ. ಜಗತ್ತಿನಲ್ಲಿರುವ ಕ್ರಿಮಿ ಕೀಟಗಳಿಗೂ ಒಳ್ಳೆಯದಾಗಲಿ ಎಂದು ಯೋಚನೆ ಮಾಡುವ ಸಮಾಜವೊಂದಿದ್ದರೆ ಅದು ಹಿಂದೂ ಸಮಾಜ ಮಾತ್ರ. ಯಾವುದೇ ಧರ್ಮದ ಧರ್ಮಗ್ರಂಥವನ್ನು ಸುಟ್ಟು ಹಾಕಿದ ಉದಾಹರಣೆ ನಮ್ಮಲ್ಲಿ ಇಲ್ಲ. ನಾವೆಲ್ಲರು ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ. ಆದರೆ, ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ನಾಶಪಡಿಸಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಹಿಂದೂಗಳು ಅವಕಾಶ ನೀಡಬಾರದು. ಒಗ್ಗಟ್ಟಿನ ಮೂಲಕ ಇಂತಹ ದುಷ್ಟರನ್ನು ಮಟ್ಟ ಹಾಕುವ ಶಕ್ತಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಪ್ರವಾಸಿ ಮಂದಿರದ ವೃತ್ತದಿಂದ ಹಳೇ ಬಸ್ ನಿಲ್ದಾಣದವರೆಗೆ ಭಾರತ ಮಾತೆಯ ಭಾವಚಿತ್ರದೊಂದಿಗೆ ವಿವಿಧ ಜಾನಪದ ಕಲಾ ತಂಡಗಳು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಸಾಗಿ ವೇದಿಕೆ ತಲುಪಿದ ಬಳಿಕ ಸಭಾ ಕಾರ್ಯಕ್ರಮ ಆರಂಭವಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಹಾಗೂ ಮನ್ ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಕೆ.ಸತೀಶ್, ಆರ್.ಎಸ್ ಎಸ್ ತಾ. ಸಂಘ ಸಂಚಾಲಕ ಪಂಚಮಿ ಗುರುಸ್ವಾಮಿ, ಅವಿನಾಶ್, ಗೋಪಾಲ್, ಎಂ.ಸಿ.ಸಿದ್ದು, ಕೆ.ಟಿ.ನವೀನ್ ಕುಮಾರ್, ಮನುಕುಮಾರ್, ವೀರಭದ್ರಸ್ವಾಮಿ, ಯೋಗಾನಂದ, ಗುರುಮಲ್ಲೇಶ್, ಸುನೀಲ್ ಕುಮಾರ್, ನೈದಿಲೆ ಚಂದ್ರು, ಮಧುಕುಮಾರ್, ಮಹೇಶ್, ಕುಮಾರ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








