ಬೆಂಗಳೂರು : ಭಾರತದ ರಾಷ್ಟ್ರ ಧ್ವಜವು ಭಾರತದ ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ ಮತ್ತು ಇದು ನಮ್ಮ ರಾಷ್ಟ್ರದ ಹೆಮ್ಮೆಯ ಸಂಕೇತವಾಗಿದೆ. ರಾಷ್ಟ್ರ ಧ್ವಜದ ಪ್ರದರ್ಶನ ಮತ್ತು ಬಳಕೆಯನ್ನು ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ- 1971 ಮತ್ತು ಭಾರತದ ಧ್ವಜ ಸಂಹಿತೆ- 2002 ರ ಮೂಲಕ ನಿಯಂತ್ರಿಸಲಾಗುತ್ತದೆ. ಸಾರ್ವಜನಿಕರ ಮಾಹಿತಿಗಾಗಿ ಈ ಸಂಹಿತೆಯ ಕೆಲವು ಪ್ರಮುಖ ನಿಯಮಗಳನ್ನು ಪ್ರಕಟಿಸಲಾಗಿದೆ.
ಧ್ವಜ ತಯಾರಿಕೆ ಮತ್ತು ವಸ್ತು ಬಳಕೆ:
ಡಿಸೆಂಬರ್ 30, 2021 ರ ತಿದ್ದುಪಡಿಯ ಪ್ರಕಾರ, ಕೈಯಿಂದ ನೂಲಿದ ಮತ್ತು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ತಯಾರಿಸಿದ ಹತ್ತಿ, ಪಾಲಿಯೆಸ್ಟರ್, ಉಣ್ಣೆ ಅಥವಾ ರೇμÉ್ಮ ಖಾದಿ ಬಂಟಿಂಗ್‍ಗಳನ್ನು ಧ್ವಜ ತಯಾರಿಕೆಗೆ ಬಳಸಬಹುದು.
ಪ್ರದರ್ಶನ ಮತ್ತು ಸಮಯ:
ಸಾರ್ವಜನಿಕರು, ಖಾಸಗಿ ಸಂಸ್ಥೆಗಳು ಅಥವಾ ಶಿಕ್ಷಣ ಸಂಸ್ಥೆಗಳು ರಾಷ್ಟ್ರಧ್ವಜದ ಘನತೆ ಮತ್ತು ಗೌರವಕ್ಕೆ ಧಕ್ಕೆ ಬಾರದಂತೆ ಎಲ್ಲಾ ದಿನಗಳಲ್ಲಿ ಯಾವುದೇ ಸಂದರ್ಭಗಳಲ್ಲಿ ಧ್ವಜವನ್ನು ಹಾರಿಸಬಹುದು.
ಜುಲೈ 19, 2022 ರ ತಿದ್ದುಪಡಿಯಂತೆ, ಸಾರ್ವಜನಿಕರ ಮನೆಯ ಮೇಲೆ ಅಥವಾ ತೆರೆದ ಸ್ಥಳದಲ್ಲಿ ಪ್ರದರ್ಶಿಸಲಾದ ಧ್ವಜವನ್ನು ಹಗಲು ಮತ್ತು ರಾತ್ರಿ ವೇಳೆ ಹಾರಿಸಲು ಅವಕಾಶವಿದೆ.
ಗಾತ್ರ ಮತ್ತು ವಿನ್ಯಾಸ:
ರಾಷ್ಟ್ರ ಧ್ವಜವು ಆಯತಾಕಾರದಲ್ಲಿರಬೇಕು. ಧ್ವಜವು ಯಾವುದೇ ಗಾತ್ರದ್ದಾಗಿರಬಹುದು, ಆದರೆ ಅದರ ಉದ್ದ ಮತ್ತು ಅಗಲದ ಅನುಪಾತವು 3:2 ರಷ್ಟು ಇರಬೇಕು.
ಗೌರವಯುತ ಪ್ರದರ್ಶನ:
ರಾಷ್ಟ್ರಧ್ವಜವನ್ನು ಯಾವಾಗಲೂ ಗೌರವಯುತ ಮತ್ತು ವಿಶಿಷ್ಟ ಸ್ಥಾನದಲ್ಲಿ ಪ್ರದರ್ಶಿಸಬೇಕು. ಹಾನಿಗೊಳಗಾದ ಅಥವಾ ಅಸ್ತವ್ಯಸ್ತವಾಗಿರುವ ಧ್ವಜವನ್ನು ಪ್ರದರ್ಶಿಸಬಾರದು.
ಯಾವುದೇ ಇತರ ಧ್ವಜ ಅಥವಾ ಬಂಟಿಂಗ್‍ಗಳನ್ನು ರಾಷ್ಟ್ರ ಧ್ವಜಕ್ಕಿಂತ ಎತ್ತರದಲ್ಲಿ ಅಥವಾ ಅದರ ಪಕ್ಕದಲ್ಲಿ ಇರಿಸಬಾರದು. ಒಂದೇ ಧ್ವಜ ಸ್ತಂಭದಲ್ಲಿ ಇತರ ಧ್ವಜಗಳೊಂದಿಗೆ ರಾಷ್ಟ್ರ ಧ್ವಜವನ್ನು ಹಾರಿಸಬಾರದು.
ವಾಹನಗಳ ಮೇಲೆ ಬಳಕೆ:
ರಾಷ್ಟ್ರಪತಿಗಳು, ಉಪರಾಷ್ಟ್ರಪತಿಗಳು, ಪ್ರಧಾನ ಮಂತ್ರಿಗಳು ಮತ್ತು ರಾಜ್ಯಪಾಲರಂತಹ ಸಂಹಿತೆಯಲ್ಲಿ ಉಲ್ಲೇಖಿಸಲಾದ ಗಣ್ಯ ವ್ಯಕ್ತಿಗಳ ವಾಹನಗಳನ್ನು ಹೊರತುಪಡಿಸಿ, ಇತರ ಯಾವುದೇ ವಾಹನಗಳ ಮೇಲೆ ಧ್ವಜವನ್ನು ಹಾರಿಸುವಂತಿಲ್ಲ.
ಹೆಚ್ಚಿನ ಮಾಹಿತಿಗಾಗಿ, ಸಾರ್ವಜನಿಕರು ಗೃಹ ಸಚಿವಾಲಯದ ಅಧಿಕೃತ ವೆಬ್‍ಸೈಟ್ www.mha.gov.in ಗೆ ಭೇಟಿ ನೀಡಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.








