ಬೆಂಗಳೂರು: ರಾಜ್ಯ ಸರ್ಕಾರವು ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಹಸ್ತಾಂತರ ಮತ್ತು ಸ್ಥಳಾಂತರಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ದಿನಾಂಕ: 10.06.2005ರ ಸರ್ಕಾರದ ಸುತ್ತೋಲೆಯನ್ವಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹಸ್ತಾಂತರ ಮತ್ತು ಸ್ಥಳಾಂತರಕ್ಕೆ ಅನುಮತಿ ನೀಡುವ ಅಧಿಕಾರವನ್ನು ಅವರವರ ಕಾರ್ಯವ್ಯಾಪ್ತಿಗೆ ಅನುಗುಣವಾಗಿ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಗುಲ್ಬರ್ಗಾ ಮತ್ತು ಅವರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡರವರಿಗೆ ಪ್ರತ್ಯಾಯೋಜಿಸಲಾಗಿತ್ತು. ತದನಂತರ, ಖಾಸಗಿ ಪೂರ್ವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಸ್ಥಳಾಂತರಿಸಲು/ಹಸ್ತಾಂತರಿಸಲು ಅನುಮತಿ ನೀಡುವ ಅಧಿಕಾರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯಾಯ ಆಯುಕ್ತರುಗಳಿಗೆ ಪ್ರತ್ಯಾಯೋಜಿಸಿ ಉಲ್ಲೇಖ(3)ರ ದಿನಾಂಕ:03.12.2007ರ ಅಧಿಸೂಚನೆಯನ್ನು ಹೊರಡಿಸಲಾಗಿತ್ತು ಎಂದಿದ್ದಾರೆ.
ದಿನಾಂಕ:20.10.2010ರ ಸರ್ಕಾರದ ಸುತ್ತೋಲೆಯಲ್ಲಿ ವಿನಾಕಾರಣ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹಾಗೂ ಜಿಲ್ಲೆಯಿಂದ ಜಿಲ್ಲೆಗೆ ಸ್ಥಳಾಂತರ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು-ಬಂದಿರುವ ಕಾರಣ, ಇನ್ನು ಮುಂದೆ ಈ ರೀತಿಯ ಸ್ಥಳಾಂತರಕ್ಕೆ ಅನುಮತಿ ನೀಡುವ ಅಧಿಕಾರವನ್ನು ಸರ್ಕಾರದ ಹಂತದಲ್ಲಿ ಕೈಗೊಳ್ಳಲು ನಿರ್ಣಯಿಸಿರುವ ಹಿನ್ನೆಲೆಯಲ್ಲಿ, ಉಲ್ಲೇಖ (2) ಮತ್ತು (3) ರನ್ವಯ, ಖಾಸಗಿ ಪೂರ್ವ ಪ್ರಾಥಮಿಕ, ಪಾಥಮಿಕ ಮತ್ತು ಪ್ರೌಢಶಾಲೆಗಳ ಹಸ್ತಾಂತರ ಮತ್ತು ಸ್ಥಳಾಂತರಕ್ಕೆ ಅನುಮತಿ ನೀಡಲು ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು, ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಗುಲ್ಬರ್ಗಾ ಮತ್ತು ಅವರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡರವರಿಗೆ ಪ್ರತ್ಯಾಯೋಜಿಸಲಾಗಿರುವ ಅಧಿಕಾರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ದಿನಾಂಕ 20.10.20100 ಸರ್ಕಾರದ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಹಿಂಪಡೆಯಲಾಗಿದ್ದು, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹಸ್ತಾಂತರ ಮತ್ತು ಸ್ಥಳಾಂತರಕ್ಕೆ ಅನುಮತಿ ನೀಡುವ ಅಧಿಕಾರವನ್ನು ಅವರವರ ಕಾರ್ಯವ್ಯಾಪ್ತಿಗೆ ಅನುಗುಣವಾಗಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ ಮತ್ತು ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡರವರಿಗೆ ಉಲ್ಲೇಖ-3ರ ದಿನಾಂಕ: 03.12.2007ರ ಸರ್ಕಾರದ ಅಧಿಸೂಚನೆಯಂತೆ ಪ್ರತ್ಯಾಯೋಜಿಸಲಾಗಿದೆ. ಅಂತರ್ ವಿಭಾಗೀಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಹಸ್ತಾಂತರ ಮತ್ತು ಸ್ಥಳಾಂತರಕ್ಕೆ ಸಂಬಂಧಪಟ್ಟಂತೆ ಉಲ್ಲೇಖ-3ರ ದಿನಾಂಕ:03.12.2007 ರ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಆಡಳಿತ ಮಂಡಳಿಯ ಹೆಚ್ಚು ಶಾಲೆಗಳು ಯಾವ ವಿಭಾಗದ ವ್ಯಾಪ್ತಿಗೆ ಒಳಪಡುತ್ತವೆಯೋ ಆ ವಿಭಾಗದ ಆಯುಕ್ತರು/ಅಪರ ಆಯುಕ್ತರಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ ಎಂದು ಹೇಳಿದ್ದಾರೆ.










