ಇತಿಹಾಸದುದ್ದಕ್ಕೂ, ಜನರು ಅವಕಾಶ, ಸುರಕ್ಷತೆ ಮತ್ತು ಸುಧಾರಿತ ಜೀವನ ಮಟ್ಟವನ್ನು ಹುಡುಕುತ್ತಾ ವಲಸೆ ಹೋಗಿದ್ದಾರೆ.
ಇಂದು, ವಲಸೆಯು ಹಿಂದೆಂದೂ ಕಾಣದ ಮಟ್ಟವನ್ನು ತಲುಪಿದೆ. ಜಗತ್ತಿನಾದ್ಯಂತ ದಾಖಲೆ ಸಂಖ್ಯೆಯ ಜನರು ತಮ್ಮ ಜನ್ಮ ದೇಶದ ಹೊರಗೆ ವಾಸಿಸುತ್ತಿದ್ದಾರೆ ಮತ್ತು ಭಾರತವೂ ಇದಕ್ಕೆ ಹೊರತಾಗಿಲ್ಲ.
ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ (UNFPA) 2023ರ ಅಂದಾಜಿನ ಪ್ರಕಾರ, ಪ್ರಸ್ತುತ 142.86 ಕೋಟಿ ಜನಸಂಖ್ಯೆಯೊಂದಿಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಭಾರತವು, ವಿದೇಶಕ್ಕೆ ವಲಸೆ ಹೋಗುವವರ ಸಂಖ್ಯೆಯಲ್ಲೂ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.
ಭಾರತವು ವಿಶ್ವದ ಅತಿದೊಡ್ಡ ಅನಿವಾಸಿ ಸಮೂಹವನ್ನು (Diaspora) ಹೊಂದಿದ್ದು, ಸುಮಾರು 3.54 ಕೋಟಿ (35.4 ಮಿಲಿಯನ್) ಭಾರತೀಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪವಿತ್ರಾ ಮಾರ್ಗರಿಟಾ ಅವರು ಸಂಸತ್ತಿನಲ್ಲಿ ಮಂಡಿಸಿದ ಅಂಕಿಅಂಶಗಳ ಪ್ರಕಾರ, ಜಾಗತಿಕ ಭಾರತೀಯ ಅನಿವಾಸಿಗಳಲ್ಲಿ ಈ ಹಿಂದೆ ಸುಮಾರು 1.59 ಕೋಟಿ ಅನಿವಾಸಿ ಭಾರತೀಯರು (NRIs) ಮತ್ತು 1.95 ಕೋಟಿ ಭಾರತೀಯ ಮೂಲದ ವ್ಯಕ್ತಿಗಳು (PIOs) ಇದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಹಂಚಿಕೊಂಡ ಇತ್ತೀಚಿನ ಮಾಹಿತಿಯು ಈ ಸಂಖ್ಯೆಗಳಲ್ಲಿನ ಬದಲಾವಣೆಯನ್ನು ಸೂಚಿಸುತ್ತದೆ.
ಜನವರಿ 2025ರ ಅಂಕಿಅಂಶಗಳ ಪ್ರಕಾರ, ವಿಶ್ವಾದ್ಯಂತ ಸುಮಾರು 1.717 ಕೋಟಿ ಅನಿವಾಸಿ ಭಾರತೀಯರು (NRIs) ಮತ್ತು 1.718 ಕೋಟಿ ಭಾರತೀಯ ಮೂಲದ ವ್ಯಕ್ತಿಗಳು (PIOs) ನೆಲೆಸಿದ್ದಾರೆ.
ಭಾರತೀಯರು ವಿದೇಶದಲ್ಲಿ ಎಲ್ಲಿ ವಾಸಿಸುತ್ತಿದ್ದಾರೆ?
ಅಮೆರಿಕ (USA): ವಿದೇಶಗಳಲ್ಲಿ ಅತಿ ಹೆಚ್ಚು ಭಾರತೀಯ ಜನಸಂಖ್ಯೆಯನ್ನು ಹೊಂದಿರುವ ದೇಶ ಅಮೆರಿಕ. ಇಲ್ಲಿ 56.9 ಲಕ್ಷ ಭಾರತೀಯರಿದ್ದಾರೆ. ಇದರಲ್ಲಿ 37.8 ಲಕ್ಷ PIOಗಳು (ಹಿಂದಿನ ವಲಸಿಗರ ವಂಶಸ್ಥರು) ಮತ್ತು 19.2 ಲಕ್ಷ NRIಗಳು (ಅಲ್ಲಿ ನೆಲೆಸಿರುವ ಭಾರತೀಯ ನಾಗರಿಕರು) ಸೇರಿದ್ದಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (UAE): ಅಮೆರಿಕದ ನಂತರ ಯುಎಇ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಅಂದಾಜು 39 ಲಕ್ಷ ಭಾರತೀಯರಿದ್ದು, ಅದರಲ್ಲಿ 38.9 ಲಕ್ಷದಷ್ಟು NRIಗಳೇ ಇದ್ದಾರೆ. ಭಾರತದ ಹೊರಗೆ ಅತಿ ಹೆಚ್ಚು ಭಾರತೀಯ ನಾಗರಿಕರು ಇರುವ ದೇಶ ಇದಾಗಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳು: ಸೌದಿ ಅರೇಬಿಯಾ, ಕುವೈತ್, ಬಹ್ರೇನ್ ಮತ್ತು ಕತಾರ್ ದೇಶಗಳು ಸಹ ಹೆಚ್ಚಿನ ಸಂಖ್ಯೆಯ ಭಾರತೀಯ ವಲಸೆ ಕಾರ್ಮಿಕರನ್ನು ಆಕರ್ಷಿಸುತ್ತವೆ.
ಏಷ್ಯಾ ಪೆಸಿಫಿಕ್: ಮಲೇಷ್ಯಾದಲ್ಲಿ 27.5 ಲಕ್ಷ PIOಗಳಿದ್ದಾರೆ (ಐತಿಹಾಸಿಕ ವಲಸಿಗರ ಅತಿ ದೊಡ್ಡ ಸಮೂಹ). ಇನ್ನು ಆಸ್ಟ್ರೇಲಿಯಾ ಮತ್ತು ಸಿಂಗಾಪುರದಲ್ಲೂ ಗಣನೀಯ ಸಂಖ್ಯೆಯ ಭಾರತೀಯ ಸಮುದಾಯಗಳಿವೆ.
ಜನವರಿ 2025 ರ ವೇಳೆಗೆ ಅತಿ ಹೆಚ್ಚು ಭಾರತೀಯರಿರುವ ಟಾಪ್ 10 ದೇಶಗಳು
1 .ಅಮೆರಿಕ | 56.9 ಲಕ್ಷ | 37.8 ಲಕ್ಷ (66%) | 19.2 ಲಕ್ಷ (34%)
2.ಯುಎಇ (UAE) | 39.0 ಲಕ್ಷ | 6,614 (0.2%) | 38.9 ಲಕ್ಷ (99.8%)
3. ಕೆನಡಾ | 36.1 ಲಕ್ಷ | 18.6 ಲಕ್ಷ (51%) | 17.5 ಲಕ್ಷ (49%)
4 . ಮಲೇಷ್ಯಾ | 29.4 ಲಕ್ಷ | 27.5 ಲಕ್ಷ (94%) | 1.85 ಲಕ್ಷ (6%)
5. ಸೌದಿ ಅರೇಬಿಯಾ | 27.5 ಲಕ್ಷ | 0 (0%) | 27.5 ಲಕ್ಷ (100%)
6 .ಶ್ರೀಲಂಕಾ | 16.1 ಲಕ್ಷ | 16.0 ಲಕ್ಷ (99.5%) | 7,500 (0.5%) |
7 . ದಕ್ಷಿಣ ಆಫ್ರಿಕಾ | 13.9 ಲಕ್ಷ | 13.2 ಲಕ್ಷ (95%) | 74,057 (5%) |
8 .ಯುನೈಟೆಡ್ ಕಿಂಗ್‌ಡಮ್ | 13.4 ಲಕ್ಷ | 9.71 ಲಕ್ಷ (72%) | 3.69 ಲಕ್ಷ (28%) |
9. ಕುವೈತ್ | 10.1 ಲಕ್ಷ | 2,356 (0.2%) | 10.1 ಲಕ್ಷ (99.8%)
10 .ಆಸ್ಟ್ರೇಲಿಯಾ | 9.76 ಲಕ್ಷ | 6.26 ಲಕ್ಷ (64%) | 3.50 ಲಕ್ಷ (36%)








