ಬೆಂಗಳೂರು : ಬೆಂಗಳೂರಿನಲ್ಲಿ ನಟ ಮಯೂರ್ ಪಟೇಲ್ ನಿಂದ ಸರಣಿ ಅಪಘಾತ ನಡೆದಿದ್ದು, ಕುಡಿದ ಮತ್ತಿನಲ್ಲಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟನ ವಿರುದ್ಧ ಎಫ್ ಐಅರ್ ದಾಖಲಾಗಿದೆ.
ನಟ ಮಯೂರ್ ಪಟೇಲ್ ಗೆ ಡ್ರಂಕ್ ಅಂಡ್ ಡ್ರೈವ್ ಪರೀಕ್ಷೆ ನಡೆಸಲಾಗಿದ್ದು, ಮಯೂರ್ ಪಟೇಲ್ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಘಟನೆ ಹಿನ್ನೆಲೆ
ನಟ ಮಯೂರ್ ಪಟೇಲ್ ಕುಡಿದ ಮತ್ತಿನಲ್ಲಿ ರಾತ್ರಿ ತನ್ನ ಫಾರ್ಚೂನರ್ ಕಾರು ಚಲಾಯಿಸಿದ್ದು, ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಬೆಂಗಳೂರಿನ ದಮ್ಮಲೂರಿನ ಸಿಗ್ನಲ್ ಬಳಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಮೂರು ಕಾರುಗಳು ಜಖಂ ಆಗಿದ್ದು, ಈ ವೇಳೆ ಕಂಟ್ರೋಲ್ ರೂಮ್ ಗೆ ಚಾಲಕರು ಕರೆ ಮಾಡಿದ್ದಾರೆ. ಬಳಿಕ ಪೊಲೀಸರು ನಟ ಮಯೂರ್ ಪಟೇಲ್ ರನ್ನು ಠಾಣೆಗೆ ಕರೆದೊಯ್ದಿದ್ದಾರೆ. ಕಾರು ಮಾಲೀಕ ಶ್ರೀನಿವಾಸ್ ಈ ಬಗ್ಗೆ ದೂರು ನೀಡಿದ್ದು, ನಟ ಮಯೂರ್ ಪಟೇಲ್ ವಿರುದ್ಧ ಹಲಸೂರು ಸಂಚಾರಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡೋ ಆಸ್ಪತ್ರೆಯ ಸಿಗ್ನಲ್ ಬಳಿ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸಿಗ್ನಲ್ ನಲ್ಲಿ ನಿಂತಿದ್ದ ಕಾರ್ ಗಳಿಗೆ ಹಿಂಬದಿಯಿಂದ ನಟ ಮಯೂರ್ ಪಟೇಲ್ ಚಾಲನೆ ಮಾಡುತ್ತಿದ್ದ ಫಾರ್ಚೂನರ್ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಒಂದಕ್ಕೊಂದು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಎರಡು ಸ್ವಿಫ್ಟ್ ಡಿಸೈರ್ ಕಾರುಗಳು, ಒಂದು ಸರ್ಕಾರಿ ವಾಹನ ಜಖಂಗೊಂಡಿವೆ.








