ಬೆಂಗಳೂರು : ರಾಜ್ಯ ಗ್ರಾಮೀಣ ಪ್ರದೇಶದ ಆಸ್ತಿಗಳಿಗೆ ಇ-ಖಾತಾ ಸಮಸ್ಯೆಯನ್ನು 15-20 ದಿನಗಳಲ್ಲಿ ಬಗೆಹರಿಸಿ ಇ-ಖಾತಾ ವಿತರಿಸುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.
ಬಿಜೆಪಿಯ ಕಿರಣ್ ಕುಮಾರ್ ಕೊಡ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಭಾಗದ ಆಸ್ತಿಗಳನ್ನು ಡಿಜಿಟಲೀಕರಣ ಮಾಡಿ ಸಾರ್ವಜನಿಕರಿಗೆ ಸುಲಭವಾಗಿ ಇ-ಖಾತಾ ಸೌಲಭ್ಯ ದೊರಕುವಂತೆ ಮಾಡಬೇಕು ಎಂಬ ಉದ್ದೇಶದಿಂದ ಇ-ಸ್ವತ್ತು ಅಭಿಯಾನದಡಿ ಇ-ಸ್ವತ್ತು ತಂತ್ರಾಂಶ 2.0 ಅನ್ನು ಆರಂಭಿಸಿದೆ.
ಈ ನೂತನ ಇ-ಸ್ವತ್ತು ತಂತ್ರಾಂಶ 2.0 ಅನ್ನು ಕಳೆದ ಡಿಸೆಂಬರ್ ನಲ್ಲಿ ಪ್ರಾರಂಭಿಸಲಾಗಿದೆ. ಕಳೆದ ಎರಡು ತಿಂಗಳುಗಳಲ್ಲಿ ಇ-ಸ್ವತ್ತು ತಂತ್ರಾಂಶ 1.0 & 2.0 ನಲ್ಲಿ 44,508 ಅರ್ಜಿಗಳ ಸ್ವೀಕೃತ ಮಾಡಲಾಗಿದೆ. ಅದರಲ್ಲಿ 7,978 ಅರ್ಜಿಗಳನ್ನು ಅನುಮೋದನೆ ಮಾಡಲಾಗಿದೆ. ಈ ತಂತ್ರಾಂಶದಲ್ಲಿ ಲೋಪಗಳನ್ನು ಬರುತ್ತಿದ್ದು, ಶೀಘ್ರದಲ್ಲಿಯೇ ಸರಿಪಡಿಸಲಾಗುವುದು.
ನಾವು ಯಾವುದೇ ತಂತ್ರಾಂಶವನ್ನು ಅನುಷ್ಠಾನಕ್ಕೆ ತರಬೇಕು ಎಂದರೆ ಅದಕ್ಕಾಗಿ ನಾವು ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ತಂಡಕ್ಕೆ ಮನವಿ ಮಾಡಬೇಕು. ಈ ತಂತ್ರಾಂಶದ ಲೋಪವನ್ನು ಸರಿಪಡಿಸಲು, ನಾವು ಅನುದಾನ ಬಿಡುಗಡೆ ಮಾಡಿದ್ದೇವೆ. ಹೆಚ್ಚಿನ ಮಾನವ ಸಂಪನ್ಮೂಲವನ್ನು ಒದಗಿಸಿದ್ದೇವೆ. ಆದರೆ ಕೇಂದ್ರದಿಂದ ಇದುವರೆಗೂ ಯಾವುದೇ ರೀತಿಯ ಸಕಾರಾತ್ಮಕ ಉತ್ತರ ಬಂದಿರುವುದಿಲ್ಲ. ಈ ಲೋಪಗಳನ್ನು ಪರಿಹರಿಸಬೇಕು ಎಂದು ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತೆರಿಗೆ, ದರಗಳು ಮತ್ತು ಶುಲ್ಕಗಳು) ನಿಯಮಗಳು, 2025 ಅಡಿಯಲ್ಲಿ, 97 ಲಕ್ಷಕ್ಕೂ ಹೆಚ್ಚು ಕೃಷಿಯೇತರ ಆಸ್ತಿಗಳಿಗೆ ಇ-ಖಾತಾ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶಕ್ಕೆ, ಇ-ಸ್ವತ್ತು 2.0 ನಲ್ಲಿ ಇರುವ ಲೋಪಗಳನ್ನು ಸರಿಪಡಿಸಲು ಇಲಾಖೆಗೆ ಸಮಯದ ಅಗತ್ಯವಿದೆ. ಶೀಘ್ರದಲ್ಲಿಯೇ ಬಾಕಿ ಇರುವ ಲೋಪಗಳನ್ನು ಸರಿ ಪಡಿಸಿ, ಗ್ರಾಮೀಣ ಜನರು ಗ್ರಾಮ ಪಂಚಾಯತಿ ಕಚೇರಿಗಳಿಗೆ ತೆರಳದೆ, ಮನೆಯಲ್ಲಿಯೇ ಕುಳಿತು ಆನ್ ಲೈನ್ ಮೂಲಕ ಇ-ಖಾತಾ ಪಡೆಯಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.








