ಉತ್ತರ ಕನ್ನಡ: ಪ್ರಸಿದ್ಧ ಇಡಗುಂಜಿ ದೇವಸ್ಥಾನದಲ್ಲಿ ತಟ್ಟೆ ಕಾಸಿಗಾಗಿ ಭಕ್ತರ ಮುಂದೆಯೇ ಅರ್ಚಕರು ಕಿತ್ತಾಟ ಮಾಡಿಕೊಂಡ ಘಟನೆ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಇಡಗುಂಜಿ ಕ್ಷೇತ್ರದಲ್ಲಿ ತಟ್ಟೆ ಕಾಸಿಗಾಗಿ ಅರ್ಚಕರು ಭಕ್ತರ ಮುಂದೆಯೇ ಕಿತ್ತಾಡಿಕೊಂಡಿರೋದಾಗಿ ತಿಳಿದು ಬಂದಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ನಡೆದಿದ್ದ ಗಲಾಟೆ ವೀಡಿಯೋ ಈಗ ವೈರಲ್ ಆಗಿದೆ.
ಐತಿಹಾಸಿಕ ಇಡಗುಂಜಿ ಗಣಪತಿ ದೇವಸ್ಥಾನದಲ್ಲೇ ತಟ್ಟೆಕಾಸಿಗಾಗಿ ಭಕ್ತರ ಮುಂದೆ ಅರ್ಚಕರಾದಂತ ನರಸಿಂಹ ಭಟ್ ಹಾಗೂ ರಮಾನಂದ ಭಟ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ದೇಗುಲದ ಹಕ್ಕಿಗಾಗಿ ಅರ್ಚಕರ ಕುಟುಂಬದಲ್ಲಿ ಒಳಜಗಳ ಉಂಟಾಗುತ್ತಿರುವುದು ವೀಡಿಯೋದಲ್ಲಿ ಬಟಾ ಬಯಲಾಗಿದೆ.
ದೇವಸ್ಥಾನದ ಹಕ್ಕಿಗಾಗಿ ಕೋರ್ಟ್ ನಲ್ಲಿ ದಾವೆಯನ್ನು ಅರ್ಚಕರ ಕುಟುಂಬಗಳು ಹೂಡಿವೆ. ದೇಗುಲದಲ್ಲಿ ಪೂಜೆ ವಿಚಾರವಾಗಿಯೂ 2 ಕುಟುಂಬಗಳ ನಡುವೆ ಕಲಹ ಉಂಟಾಗಿದೆ. ತಟ್ಟೆಕಾಸಿಗಾಗಿ ಭಕ್ತರ ಮುಂದೆ ಹೊಡೆದಾಡಿಕೊಂಡ ವೀಡಿಯೋ ವೈರಲ್ ಆಗುತ್ತಿದ್ದಂತೆ, ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.








