ಬೆಂಗಳೂರು : ರಾಜ್ಯ ಸರ್ಕಾರದ ಅನುದಾನಕ್ಕೆ ಒಳಪಟ್ಟ ಶಾಲಾ ಶಿಕ್ಷಕರಿಗೆ ಹೈಕೋರ್ಟ್ ಸಿಹಿಸುದ್ದಿ ನೀಡಿದ್ದು, ಅನುದಾನಿತ ಶಾಲೆಯು ಸರ್ಕಾರದ ಅನುದಾನಕ್ಕೆ ಒಳಪಟ್ಟ ದಿನದಿಂದಲೇ ಪೂರ್ವಾನ್ವಯವಾಗುವಂತೆ ಶಿಕ್ಷಕರಿಗೆ ವೇತನ ಸೌಲಭ್ಯ ನೀಡಬೇಕು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರಾಜ್ಯ ಸರ್ಕಾರ 2011ರಲ್ಲಿ ಹೊರಡಿಸಿದ್ದ ಆದೇಶದ ಅನ್ವಯ ಅರ್ಜಿದಾರ ಶಿಕ್ಷಕರು ಶಾಲೆಯು ಅನುದಾನಕ್ಕೆ ಒಳಪಟ್ಟ ದಿನದಿಂದಲೇ ವೇತನಕ್ಕೆ ಅರ್ಹರಿದ್ದಾರೆ ಎಂದು ತೀರ್ಪು ನೀಡಿದೆ.
ಪ್ರಕರಣದ ಹಿನ್ನೆಲೆ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೆಂಪವಾಡ ಗಜಾನನ ಎಜುಕೇಶನಲ್ ಸೊಸೈಟಿ ನ್ಯೂ ಹೈಸ್ಕೂಲ್‌ನ ಕನ್ನಡ ಶಿಕ್ಷಕರಾಗಿ ರಾಜೇಶ್ ಎಂ. ಕೋಷ್ಟಿ ಎಂಬುವರು 2007ರಲ್ಲಿ ನೇಮಕಗೊಂಡಿದ್ದರು. ಆ ಶಾಲೆಯು 2009ರಲ್ಲಿ ಸರ್ಕಾರದ ಅನುದಾನ ವ್ಯಾಪ್ತಿಗೆ ಸೇರಿತು. ಆದರೆ, ಅರ್ಜಿದಾರ ಶಿಕ್ಷಕರಿಗೆ ಪೂರ್ವಾನ್ವಯವಾಗುವಂತೆ ವೇತನ ಸೌಲಭ್ಯ ನೀಡಲು ಸರ್ಕಾರ ನಿರಾಕರಿಸಿತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ರಾಜೇಶ್ ಅರ್ಜಿ ಸಲ್ಲಿಸಿದ್ದರು.
ಅರ್ಜಿಯನ್ನು ಹೈಕೋರ್ಟ್‌ನ ಧಾರವಾಡ ಪೀಠದಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್. ಹೇಮಲತಾ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸರ್ಕಾರದ ಆದೇಶ ಪ್ರಕಾರ 2008ರ ಸೆ.4ಕ್ಕಿಂತ ಮೊದಲು ನೇಮಕಗೊಂಡ ಶಿಕ್ಷಕರು ವೇತನ ಅನುದಾನಕ್ಕೆ ಅರ್ಹರಾಗಿರುತ್ತಾರೆ. ಅವರ ನೇಮಕಾತಿ ಅನುಮೋದನೆಗೊಂಡ ದಿನಾಂಕ ಅಥವಾ ಶಾಲೆಯು ಸರ್ಕಾರದ ಅನುದಾನಕ್ಕೆ ಒಳಪಟ್ಟ ದಿನಾಂಕಗಳಲ್ಲಿ ಯಾವುದು ನಂತರವೋ ಆ ದಿನಾಂಕದಿಂದ ವೇತನ ಪಾವತಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.








