ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ ರಾಜ್ಯದಲ್ಲಿ ಇನ್ವೆಸ್ಟ್ ಕರ್ನಾಟಕ 2025ರ ಸಮಾವೇಶದಲ್ಲಿ 98 ಕಂಪನಿಗಳೊಂದಿಗೆ 6,23,970 ಕೋಟಿ ರೂ. ಹೂಡಿಕೆ ಒಪ್ಪಂದಗಳಿಗೆ ಸಹಿ ಮಾಡಲಾಗಿದ್ದು, ಇದರಿಂದ 2.20 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷಿಸಲಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ನ ಉಮಾಶ್ರೀ ಅವರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ. ಹಿಂದಿನ ಇನ್ವೆಸ್ಟ್ ಕರ್ನಾಟಕ-2022 ಸಮಾವೇಶಕ್ಕಾಗಿ ಒಟ್ಟು 74.99 ಕೋಟಿ ರೂ. ವೆಚ್ಚವಾಗಿದೆ. ಇನ್ವೆಸ್ಟ್ ಕರ್ನಾಟಕ-2025ರ ಸಮಾವೇಶದಲ್ಲಿ ಸರಕಾರವು 98 ಕಂಪೆನಿಗಳೊಂದಿಗೆ ಒಟ್ಟು 6,23,970 ಕೋಟಿ ರೂ.ಬಂಡವಾಳ ಹೂಡಲು ಒಡಂಬಡಿಕೆಗಳಿಗೆ ಸಹಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಬಂಡವಾಳ ಹೂಡುವ ಕಂಪೆನಿಗಳಿಗೆ ಕೈಗಾರಿಕಾ ನೀತಿ 2025-30, ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-27 ಹಾಗೂ ಕರ್ನಾಟಕ ಕ್ಲೀನ್ ಮೊಬಿಲಿಟಿ ಪಾಲಿಸಿ 2025-30 ರನ್ವಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ರಾಜ್ಯದಲ್ಲಿ ಹೂಡಿಕೆಗಳನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಡಿಜಿಟಲ್ ಪ್ರಥಮ ವಿಧಾನ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ 100.69 ಕೋಟಿ ರೂಪಾಯಿ ವೆಚ್ಚವಾಗಿದೆ. 2022ರ ಸಮಾವೇಶದಲ್ಲಿ 57 ಕಂಪನಿಗಳೊಂದಿಗೆ 5,41,369 ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.








