ಬೆಂಗಳೂರು: ಕಮಿಷನ್, ಭ್ರಷ್ಟಾಚಾರ, ಲೂಟಿ, ದುಂಡಾವರ್ತಿ ಸರಕಾರವು ಇವತ್ತು ರಾಜ್ಯವನ್ನಾಳುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ವಿಧಾನಸೌಧದ ಮಹಾತ್ಮ ಗಾಂಧೀಜಿ ಪ್ರತಿಮೆ ಬಳಿ ಇಂದು ಪ್ರತಿಭಟನೆ ವೇಳೆ ಮಾತನಾಡಿದ ಅವರು, ಈ ಆರೋಪವನ್ನು ನಾವು ಹೇಳುತ್ತಿಲ್ಲ; ರಾಜ್ಯದ ಜನರು ಮಾತನಾಡುತ್ತಿದ್ದಾರೆ ಎಂದು ತಿಳಿಸಿದರು. ನಮಗೆ ಕೆಲವು ಸ್ನೇಹಿತರು ಕಾಂಗ್ರೆಸ್ಸಿನಲ್ಲಿದ್ದಾರೆ. ಅವರಿಗೂ ಈ ಸರಕಾರದ ವರ್ತನೆ ಬೇಸರ ತರಿಸಿದೆ. ಫೋನ್ ಮಾಡಿದರೆ, ‘ಬಿಡಬೇಡ್ರಿ ಈ ನನ್ಮಕ್ಕಳನ್ನು’ ಎನ್ನುತ್ತಾರೆ ಎಂದು ಹೇಳಿದರು.
ಈ ಸರಕಾರ ಮಾಡುವ ತಪ್ಪುಗಳನ್ನು ಜನರ ಗಮನಕ್ಕೆ ತರಲೇಬೇಕಾಗಿದೆ. ಅದನ್ನು ನಾವಿವತ್ತು ಪ್ರತಿಭಟನೆ ಮೂಲಕ ಮಾಡುತ್ತಿದ್ದೇವೆ ಎಂದು ವಿವರಿಸಿದರು. ಅಬಕಾರಿ ಸಚಿವರು 4 ಸಾವಿರ ಕೋಟಿ ಲೂಟಿ ಮಾಡಿದ್ದಾರೆಂದು ನಾವು ಹೇಳಿದ್ದೇವೆ. ನಾವು ಹೇಳಿದ್ದು ತಪ್ಪಾಗಿ ಹೋಯ್ತು. ಅದು 6 ಸಾವಿರ ಕೋಟಿ ಎಂದು ಅಬಕಾರಿ ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ನೇರಾನೇರವಾಗಿ ಹೇಳಿದ್ದಾರೆ ಎಂದು ಗಮನ ಸೆಳೆದರು.
ನಿನ್ನೆ ಮಾನ್ಯ ರಾಜ್ಯಪಾಲರಿಗೂ ಮನವಿ ನೀಡಿದ್ದಾರೆ. ಅಂದ ಮೇಲೆ 6 ಸಾವಿರ ಕೋಟಿಯಲ್ಲಿ ಸಿದ್ದರಾಮಯ್ಯನವರ, ಡಿ.ಕೆ.ಶಿವಕುಮಾರ್, ಸೋನಿಯಾ ಗಾಂಧಿ, ರಾಹುಲ್ ಅವರ ಪಾಲೆಷ್ಟು ಎಂದು ಕೇಳಿದರು. ಅಲ್ಲದೇ ಇದರಲ್ಲಿ ಖರ್ಗೆಯವರ ಪಾಲೆಷ್ಟು ಎಂಬುದನ್ನು ಕಾಂಗ್ರೆಸ್ಸಿನವರು ಹೇಳಬೇಕೆಂದು ಆಗ್ರಹಿಸಿದರು.
ತಲೆದಂಡ ಆಗಲೇಬೇಕೆಂಬುದು ನಮ್ಮೆಲ್ಲರ ಆಗ್ರಹ..
ಈಗಾಗಲೇ ಹೋರಾಟ ಪ್ರಾರಂಭವಾಗಿದೆ. ಸಚಿವ ತಿಮ್ಮಾಪುರ ಅವರನ್ನು ಕ್ಷಮಿಸುವ ಪ್ರಶ್ನೆ ನಮ್ಮ ಮುಂದಿಲ್ಲ. ಅವರು ರಾಜೀನಾಮೆ ಕೊಡದೇ ನಾವ್ಯಾರೂ ಸದನ ಬಿಟ್ಟು ಹೋಗುವುದಿಲ್ಲ ಎಂದು ಸವಾಲು ಹಾಕಿದರು. ತಲೆದಂಡ ಆಗಲೇಬೇಕೆಂಬುದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳು ಅಧಿಕಾರದ ಸ್ಥಾನದಲ್ಲಿದ್ದು ಕೆಲಸ ಮಾಡುವಂತಿಲ್ಲ ಎಂಬಂತಾಗಿದೆ. ಕಾಂಗ್ರೆಸ್ ನಾಯಕರು ಎಲ್ಲದಕ್ಕೂ ಧಮ್ಕಿ ಹಾಕುತ್ತಾರೆ. ಶಿಡ್ಲಘಟ್ಟದ ರಾಜೀವ್ ಗೌಡ 14 ದಿನ ಪೊಲೀಸರ ಕೈಗೆ ಸಿಕ್ಕಿಲ್ಲವೆಂದರೆ ಹೇಗೆ? ಅವರನ್ನು ಕಾಂಗ್ರೆಸ್ ನಾಯಕರು ತಮ್ಮ ಮನೆಯಲ್ಲಿ ಇಟ್ಕೊಂಡಿದ್ದರಲ್ಲವೇ? ಹೊರಗಡೆ ಹುಡುಕುವ ನಿಮಗೆ ಹೇಗೆ ಸಿಗಲು ಸಾಧ್ಯ ಎಂದು ಪ್ರಶ್ನಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಮತ್ತು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ, ಬಿಜೆಪಿ-ಜೆಡಿಎಸ್‍ನ ಶಾಸಕರು, ವಿಧಾನಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.








