ಜಪಾನ್: ಜಪಾನಿನಲ್ಲಿರುವ ಅನಿವಾಸಿ ಕನ್ನಡಿಗರಾದ ಡಾ. ಶ್ರೀಹರಿ ಚಂದ್ರಘಾಟಗಿಯವರ ಮಾಲೀಕತ್ವದ ಇಕೋ ಸೈಕಲ್ ಕಾರ್ಪೊರೇಷನ್ ಸಂಸ್ಥೆಯು ಕಳೆದ ಮೂರು ತಿಂಗಳಿನಲ್ಲಿ ಎರಡನೇ ಬಾರಿಗೆ ಜಪಾನಿನ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಇಕೋ ಸೈಕಲ್ ಕಾರ್ಪೊರೇಷನ್ ಗೆ ಜಪಾನ್ ಸರ್ಕಾರದ ಸೂಪರ್ ಮ್ಯಾನುಫ್ಯಾಕ್ಚರ್ಸ್ ಪ್ರಶಸ್ತಿ ಬಂದಿದ್ದರೆ, ಈ ಬಾರಿ ಪ್ರತಿಷ್ಠಿತ ಗುಡ್ ಕಂಪನಿ ಪ್ರಶಸ್ತಿಗೆ ಇದು ಆಯ್ಕೆಯಾಗಿರುವುದು ವಿಶೇಷ.
ವಿಜ್ಞಾನ ತಂತ್ರಜ್ಞಾನದಲ್ಲಿ ಅತ್ಯಂತ ಮುಂದಿರುವ ಜಪಾನಿನಲ್ಲಿ ಉತ್ತರ ಕನ್ನಡದ ಸಿದ್ದಾಪುರ ತಾಲೂಕಿನ ಶ್ರೀಹರಿ ಚಂದ್ರಘಾಟಿಗಿಯವರು, ಇಕೋ ಸೈಕಲ್ ಕಾರ್ಪೊರೇಷನ್ ಸಂಸ್ಥೆಯನ್ನು ಹುಟ್ಟುಹಾಕಿ, ತನ್ಮೂಲಕ ಕೈಗಾರಿಕಾ ಮಾಲಿನ್ಯ ಮುಕ್ತಗೊಳಿಸುವ ವಿವಿಧ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ, ಹಲವು ಪ್ರತಿಷ್ಠಿತ ಕಂಪನಿಗಳಿಗೆ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ.
1967 ರಲ್ಲಿ ಸ್ಥಾಪಿತವಾದ ಜಪಾನಿನ ಗುಡ್ ಕಂಪನಿ ಪ್ರಶಸ್ತಿಯನ್ನು ಅಲ್ಲಿಯ ಸಣ್ಣ ಮತ್ತು ಮಧ್ಯಮ ಉದ್ಯಮಿಗಳ ಸಂಶೋಧನಾ ಸಂಸ್ಥೆಯ ವತಿಯಿಂದ ಪ್ರದಾನ ಮಾಡಲಿದ್ದು, ಸಮಾಜಮುಖಿ ಸೇವೆಗಳಲ್ಲಿ ಅಸಾಧಾರಣ ಸಾಧನೆ ತೋರಿದ
ಮತ್ತು ಆರ್ಥಿಕವಾಗಿಯೂ ಪ್ರಗತಿ ಸಾಧಿಸಿದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ನೀಡುತ್ತಿರುವ ರಾಷ್ಟ್ರ ಮಟ್ಟದ ಪ್ರಶಸ್ತಿ ಇದಾಗಿದೆ.
ಜಪಾನಿನ ಆರ್ಥಿಕ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯ, ಶಿಕ್ಷಣ ಸಚಿವಾಲಯ ಹಾಗೂ ಚಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅನುಮೋದನೆಯು ಕೂಡ ಇದಕ್ಕೆ ಅಗತ್ಯ. ಇವುಗಳೊಂದಿಗೆ ಪ್ರತಿ ವರ್ಷವೂ ಅತ್ಯಂತ ಕಠಿಣ ಪರಿಶೀಲನಾ ಆಯ್ಕೆ ಪ್ರಕ್ರಿಯೆ ನಡೆಸಿದ ನಂತರ, ಘೋಷಿಸಲಾಗುವ ಕೆಲವೇ ಕೆಲವು ಸಂಸ್ಥೆಗಳ ಪೈಕಿ ಈ ಪ್ರಶಸ್ತಿಯ ಗೌರವಕ್ಕೆ ಇಕೋ ಸೈಕಲ್ ಸಂಸ್ಥೆಯು ಪಾತ್ರವಾಗಿರುವುದು ವಿಶೇಷ. ಈ ಪ್ರಶಸ್ತಿಯನ್ನು ಬರುವ ಫೆಬ್ರುವರಿ 2ರಂದು ಟೋಕಿಯಾದ ಓಟಿಮಾಚಿಯಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಜಪಾನ್ ಕಂಪನಿಗಳು ವಿಶ್ವ ದರ್ಜೆಯ ಗುಣಮಟ್ಟಕ್ಕೆ ಹೆಸರುವಾಸಿ. ಇವುಗಳೊಂದಿಗೆ ಪೈಪೋಟಿಯಲ್ಲಿ ಗೆದ್ದು, ಅಲ್ಲಿಯ ವಾಣಿಜ್ಯ ವಲಯದಲ್ಲಿ ಒಂದು ವಿಶಿಷ್ಟ ಗಳಿಸಿಕೊಂಡು ಹೊಸ ಛಾಪು ಮೂಡಿಸಿಕೊಂಡಿರುವ ಇಕೋ ಸೈಕಲ್ ಸಾಧನೆ ನಿಜಕ್ಕೂ ಆಶ್ಚರ್ಯದಾಯಕ.
ವಿಷಕಾರಿ ತ್ಯಾಜ್ಯಗಳಿಂದಾಗಿ ಕೆಲವು ಕೈಗಾರಿಕೋದ್ಯಮಗಳು ಅಂತರ್ಜಲವನ್ನೇ ಕಲುಷಿತಗೊಳಿಸುತ್ತಿವೆ. ಇವುಗಳ ಶುದ್ಧೀಕರಣವೆಂಬುದು ತುಂಬಾ ವೆಚ್ಚದಾಯಕ ಮತ್ತು ಶ್ರಮದಾಯಕ ಆದರೆ ಇಕೋ ಸೈಕಲ್ ಈ ಜ್ವಲಂತ ಪರಿಸರ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಸೂಕ್ತ ತಂತ್ರಜ್ಞಾನವನ್ನು ಒದಗಿಸುತ್ತಿದೆ. ಈಗ ಗುಡ್ ಕಂಪನಿ ಪ್ರಶಸ್ತಿಯು ಒಲಿದು ಬಂದಿರುವುದು ಇಕೋ ಸೈಕಲ್ ಸಂಸ್ಥೆಯ ಅರ್ಥಪೂರ್ಣ ಕೆಲಸಕ್ಕೆ ಸಂದಿರುವ ಉತ್ಕೃಷ್ಟ ಗೌರವವಾಗಿದೆ.
ಡಾ. ಶ್ರೀಹರಿ ಚಂದ್ರಘಾಟಗಿಯವರು ಕಳೆದ ಎರಡುವರೆ ದಶಕಗಳಿಂದ ಟೋಕಿಯೋದಲ್ಲಿಯೇ ನೆಲೆಸಿ, ಇಕೋ ಸೈಕಲ್ ಕಾರ್ಪೊರೇಷನ್ ಸಂಸ್ಥೆ ಸ್ಥಾಪಿಸಿ,ಇದರ ಅಧ್ಯಕ್ಷರಾಗಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೇ ಶ್ರೀಹರಿಯವರು ಮೈಕ್ರೋ ಬಯೋಲಜಿಸ್ಟ್ ಆಗಿ ಕೃಷಿ, ಜಲ ಸಂಪನ್ಮೂಲಗಳ ರಕ್ಷಣಾ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿದ್ದಲ್ಲದೇ ಕೈಗಾರಿಕಾ ಮಾಲಿನ್ಯಗಳನ್ನು ತಡೆಗಟ್ಟುವ ಸಂಶೋಧನೆ ನಡೆಸಿದ್ದಾರೆ.
ಡಾ. ಶ್ರೀಹರಿಯವರು ಮಣ್ಣಿನ ಸೂಕ್ಷ್ಮ ಜೀವಶಾಸ್ತ್ರದಲ್ಲಿ ಅಪಾರ ಸಂಶೋಧನೆ ನಡೆದಿದ್ದಲ್ಲದೇ, ತಾವು ಪಿಎಚ್. ಡಿ. ಅಧ್ಯಯನ ನಡೆಸುವಾಗ ಕೃಷಿ ಇಳುವರಿ ಹೆಚ್ಚಿಸುವಲ್ಲಿ ಗಿಡಗಳ ಬೇರಿನ ಮೇಲೆ ಸೂಕ್ಷ್ಮ ಜೀವಿಗಳ ಪ್ರಭಾವದ ಕುರಿತಾಗಿಯೂ ಹೆಚ್ಚಿನ ಬೆಳಕು ಚೆಲ್ಲಿದ್ದರು.
ತಮ್ಮ ಇಕೊ ಸೈಕಲ್ ಸಂಸ್ಥೆಯ ಮೂಲಕ 2006 ರಿಂದಲೂ ಪರಿಸರ ಸಂರಕ್ಷಣೆ ಮತ್ತು ಅಂತರ್ಜಲದ ಮಟ್ಟ ಹೆಚ್ಚಿಸುವ ಜೊತೆಗೆ ಅಂತರ್ಜಲದ ಮಾಲಿನ್ಯ ತಡೆಗಟ್ಟಲು ಹಲವು ನೂತನ ತಂತ್ರಜ್ಞಾನಗಳನ್ನು ಇವರು ಸಂಶೋಧಿಸಿದ್ದಾರೆ.
ಮಾಲಿನ್ಯಯುಕ್ತ ನೀರಿನಲ್ಲಿ ಮಾರಕ ಸೂಕ್ಷ್ಮ ಜೀವಿಗಳನ್ನು ನಿಗ್ರಹಿಸಲು ಪರ್ಯಾಯ ಸೂಕ್ಷ್ಮ ಜೀವಿಗಳನ್ನು ಬಳಸುವ ತಂತ್ರಜ್ಞಾನದ ರೂವಾರಿಯಾಗಿರುವ ಶ್ರೀಹರಿಯವರ ಅಪೂರ್ವ ಸೇವೆಯನ್ನು ಜಪಾನಿನ ಮತ್ತು ವಿಶ್ವದ ಅನೇಕ ಪ್ರಮುಖ ಕಂಪನಿಗಳೂ ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವುದು ವಿಶೇಷ.








