ಬೆಂಗಳೂರು : ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಚಿಸಿರುವ ಬಡವಾಣೆಗಳಲ್ಲಿನ ಬಿ-ಖಾತಾ ನಿವೇಶನ / ಕಟ್ಟಡ / ಅಪಾರ್ಟ್ಮೆಂಟ್ / ಫ್ಲಾಟ್ ಗಳಿಗೆ ಎ-ಖಾತಾ ನೀಡುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಅನ್ನು ಉಲ್ಲಂಘಿಸಿ, ಅನಧಿಕೃತವಾಗಿ ಬಡವಾಣೆಗಳನ್ನು ರಚಿಸಿ, ನಿವೇಶನಗಳನ್ನು ಮಾರಾಟ ಮಾಡಲಾಗಿರುತ್ತದೆ. ಅನಧಿಕೃತ ಬಡಾವಣೆಗಳ ರಚನೆಯಿಂದ ನಗರ ಪ್ರದೇಶಗಳಲ್ಲಿ ಭೂ ಪರಿವರ್ತಿಸಿದ / ಭೂ ಪರಿವರ್ತಿಸದ ಜಮೀನುಗಳಿಗೆ ವಿನ್ಯಾಸ ಅನುಮೋದನೆ ಪಡೆಯದೇ ಅನಧಿಕೃತ ಬಡಾವಣೆ / ರೆವೆನ್ಯೂ ಬಡಾವಣೆಗಳನ್ನು ನಿರ್ಮಾಣ ಮಾಡಿ, ನಿವೇಶನಗಳನ್ನು ನೋಂದಣಿ ಮಾಡಿಕೊಂಡು ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸುವುದರಿಂದಾಗುವ ಪ್ರತಿಕೂಲ ಪರಿಣಾಮಗಳನ್ನು ಗಮನಿಸಲಾಗಿ, ನಗರ ಪ್ರದೇಶಗಳಲ್ಲಿ ಉದ್ಯಾನವನ / ಬಯಲುಜಾಗೆಗಳ ಕೊರತೆ, ನಾಗರೀಕ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ವಿಫಲತೆ, ವ್ಯವಸ್ಥಿತವಾದ ರಸ್ತೆಯ ಪರಿಚಲನೆ, ಮೂಲಭೂತ ಸೌಕರ್ಯದ ಕೊರತೆ ಹಾಗೂ ಯೋಜಿತ ಬೆಳವಣಿಗೆಗಳಲ್ಲಿ ತೊಡಕುಗಳಿರುವುದು ಕಂಡು ಬರುತ್ತದೆ. ಈಗಾಗಲೇ ಅನಧಿಕೃತವಾಗಿ ರಚಿತವಾಗಿರುವ ಬಡಾವಣೆಗಳಲ್ಲಿರುವ ಸ್ವತ್ತುಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವ ಉದ್ದೇಶದಿಂದ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976ಕ್ಕೆ ತಿದ್ದುಪಡಿ ತಂದು ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ದಿನಾಂಕ 10-09-2024ರ ಪೂರ್ವದಲ್ಲಿ ರಚಿಸಲಾಗಿರುವ ಬಡಾವಣೆಗಳಲ್ಲಿನ ಸ್ವತ್ತುಗಳಿಗೆ ಬಿ-ಖಾತಾ (ಅನಧಿಕೃತ) ನೀಡಲು ಅವಕಾಶ ಕಲ್ಪಿಸಲಾಗಿದೆ.
ಸದರಿ ಕಾಯ್ದೆ ತಿದ್ದುಪಡಿಯಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಸಕ್ಷಮ ಪ್ರಾಧಿಕಾರದ ಅನುಮೋದನೆ ಇರದ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಿ, ಅಂತಹ ಆಸ್ತಿಗಳನ್ನು ಪ್ರತ್ಯೇಕ ರಿಜಿಸ್ಮರ್ನಲ್ಲಿ ನಿರ್ವಹಿಸಲಾಗುತ್ತಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಂದಾಜು 10 ಲಕ್ಷ ಈ ರೀತಿಯ ಆಸ್ತಿಗಳಿರುತ್ತವೆ. ಸದರಿ ಆಸ್ತಿಗಳಿಗೆ ನಗರ ಸ್ಥಳೀಯ ಸಂಸ್ಥೆಗಳಿಂದ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವುದಿಲ್ಲ ಮತ್ತು ಈಗಾಗಲೇ ಕಟ್ಟಡ ಪರವಾನಿಗೆ ಪಡೆಯದೇ ನಿರ್ಮಾಣ ಮಾಡಿರುವ ಸ್ವತ್ತುಗಳಿಗೆ ಹೆಚ್ಚುವರಿ ನಿರ್ಮಾಣ ಅಥವಾ ಮರು ನಿರ್ಮಾಣ /ನೆಲಸಮಗೊಳಿಸಲು ಅನುಮತಿ ನೀಡುತ್ತಿರುವುದಿಲ್ಲ. ಈ ರೀತಿಯ ಸ್ವತ್ತುಗಳು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ವ್ಯಾಪ್ತಿಯಿಂದ ಹೊರಗುಳಿದಿರುತ್ತವೆ. ಅನುಮೋದನೆ ಪಡೆಯದ ಬಡಾವಣೆಗಳಲ್ಲಿ ಸ್ವತ್ತುಗಳಿಗೆ ರಸ್ತೆ, ಚರಂಡಿ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ವಾಸ್ತವವಾಗಿ ನೀಡಲಾಗುತ್ತಿದ್ದು, ಸದರಿ ಆಸ್ತಿಗಳನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 19610 ಅನುಬಂಧಗಳಿಗನುಸಾರವಾಗಿ ನಿಯಂತ್ರಣಕ್ಕೊಳಪಡಿಸುವ ಅವಶ್ಯಕತೆಯಿರುತ್ತದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ರಚಿತವಾಗಿರುವ ಅನಧಿಕೃತ ಬಡಾವಣೆಗಳಲ್ಲಿನ ಸ್ವತ್ತುಗಳನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಉಪಬಂಧಗಳ ವ್ಯಾಪ್ತಿಗೆ ತಂದು ನಿಯಂತ್ರಿಸುವ ಕುರಿತು ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ಇವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಬಿ-ಖಾತಾ ಹೊಂದಿರುವ ಸ್ವತ್ತುಗಳಿಗೆ ಎ-ಖಾತಾ ನೀಡಲು ಈ ಕೆಳಕಂಡ ಶಿಫಾರಸ್ಸುಗಳನ್ನು ಮಾಡಿರುತ್ತದೆ.
1. ನಗರ ಸ್ಥಳೀಯ ಸಂಸ್ಥೆಗಳಿಂದ ಈಗಾಗಲೇ ಬಿ-ಖಾತಾ ನೀಡಿ, ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿರುವ ಖಾಲಿ ನಿವೇಶನಗಳು:
ಬಿ-ಖಾತಾ ಹೊಂದಿರುವ ನಿವೇಶನಗಳಲ್ಲಿ ಅನಧಿಕೃತ ನಿರ್ಮಾಣಗಳನ್ನು ನಿಯಂತ್ರಿಸುವ ತುರ್ತು ಅವಶ್ಯಕತೆಯಿದೆ. ಪ್ರಸ್ತುತ ಅಂತಹ ಬಿ-ಖಾತಾಗಳಲ್ಲಿನ ನಿರ್ಮಾಣಗಳಿಗೆ ಯಾವುದೇ ಕಟ್ಟಡ ನಕ್ಷೆ ಅನುಮೋದನೆಯನ್ನು ನೀಡಲಾಗುವುದಿಲ್ಲ. ಇದು ಅನಿಯಂತ್ರಿತ ನಿರ್ಮಾಣಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ಅಂತಹ ಸಂದರ್ಭಗಳಲ್ಲಿ ಈ ಕೆಳಗಿನ ಅನ್ವಯಿಸಬಹುದು. ಕ್ರಮಗಳನ್ನು
i. ಖಾಲಿ ನಿವೇಶನಕ್ಕೆ ಸಂಪರ್ಕಿಸುವ ಸಾರ್ವಜನಿಕ ರಸ್ತೆ ಇದೆ ಎಂದು ಖಚಿತಪಡಿಸಿಕೊಳ್ಳಬೇಕು. ಅಂತಹ ಖಾಲಿ ನಿವೇಶನ ಅಥವಾ ಭೂಮಿಗೆ ಸಂಪರ್ಕಿಸುವ ಖಾಸಗಿ ರಸ್ತೆ ಇದ್ದರೆ, ಅದನ್ನು ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 177 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ರ 284 ರ ನಿಬಂಧನೆಗಳ ಪ್ರಕಾರ “ಸಾರ್ವಜನಿಕ ರಸ್ತೆ” ಎಂದು ಘೋಷಿಸಬೇಕಾಗುತ್ತದೆ.
ii. ಸದರಿ ನಿವೇಶನವು ಭೂ ಪರಿವರ್ತನೆಯಾಗದ ಜಮೀನು ಇದ್ದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 95 ರಡಿಯಲ್ಲಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಪರಿವರ್ತಿಸಬೇಕು ಅಥವಾ ಕಲಂ 95 ರ ತಿದ್ದುಪಡಿಯಂತೆ ಅನುಮೋದಿತ ಮಾಸ್ಟರ್ ಪ್ಲಾನ್ ವ್ಯಾಪ್ತಿಗೆ ಭೂಮಿ ಬಂದರೆ, ಅನುಮೋದಿತ ಮಾಸ್ಟರ್ ಪ್ಲಾನ್ ನಲ್ಲಿ ಸೂಚಿಸಲಾದ ಕೃಷಿಯೇತರ ಉದ್ದೇಶಕ್ಕಾಗಿ ಭೂಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ. ಕಲಂ 95(7) ಕರ್ನಾಟಕ ಭೂಕಂದಾಯ ಕಾಯ್ದೆ ಅಡಿಯಲ್ಲಿ ನಿಗಧಿಪಡಿಸಿದ ಶುಲ್ಕವನ್ನು ಕೆಟಿಸಿಪಿ ಕಾಯ್ದೆ 1961 ರ ಕಲಂ 17 ರಡಿಯಲ್ಲಿ ಅನುಮೋದನೆ ಪಡೆಯುವಾಗ ಪ್ರಾಧಿಕಾರಕ್ಕೆ ಪಾವತಿಸಬೇಕಾಗುತ್ತದೆ.
ಭೂಪರಿವರ್ತನೆ ನಂತರದಲ್ಲಿ ಅಂತಹ ಖಾಲಿ ನಿವೇಶನಕ್ಕೆ ಕೆಟಿಸಿಪಿ ಕಾಯ್ದೆ 1961 ರ ಕಲಂ 17 ರಡಿಯಲ್ಲಿ “ಏಕ ನಿವೇಶನ ಅಥವಾ ಬಹು ನಿವೇಶನ ವಿನ್ಯಾಸ” ಆಗಿ ಸಂಬಂಧಿತ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.
iv. ವಿನ್ಯಾಸ ಅನುಮೋದನೆ ಪಡೆದ ನಂತರ ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ ಕಲಂ 106 ಮತ್ತು ಕರ್ನಾಟಕ ಪೌರನಿಗಮಗಳ ಕಾಯ್ದೆ 1976 ರಕಲಂ 112 ರ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕೃತ (ಎ-ಖಾತಾ) ಖಾತಾ ನೀಡಬಹುದು.









