ಬೆಂಗಳೂರು: ನಿಮ್ಮ ಜಮೀನಿನಲ್ಲಿ ಇರುವಂತ ಯಾವುದೇ ರೀತಿಯ ಮರಗಳನ್ನು ಕಡಿಯೋದಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆಯೋದು ಕಡ್ಡಾಯ. ಒಂದು ವೇಳೆ ಅನುಮತಿ ಪಡೆಯದೇ ಕಡಿತಲೆ ಮಾಡಿದರೇ ನಿಮ್ಮ ವಿರುದ್ಧ ಅರಣ್ಯ ಕಾಯ್ದೆಯ ಅನುಸಾರ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಹಾಗಾದ್ರೇ ನಿಮ್ಮ ಜಮೀನಿನಲ್ಲಿ ಇರುವ ಮರಗಳನ್ನು ಕಡಿಯಲು ಅನುಮತಿ ಪಡೆಯೋದು ಹೇಗೆ? ನಿಯಮಗಳು ಏನು ಅಂತ ಮುಂದಿದೆ ಓದಿ.
ಮರಗಳನ್ನು ಕಡಿಯುವುದರ ಬಗ್ಗೆ ನಿರ್ಬಂಧ ಮತ್ತು ಮರಗಳ ಸಂರಕ್ಷಣೆಯ ಹೊಣೆಗಾರಿಕೆ
8. ಮರಗಳನ್ನು ಕಡಿಯುವುದರ ಮೇಲೆ ನಿರ್ಬಂಧ (1) ಗೊತ್ತುಪಡಿಸಿದ ದಿನದಂದು ಮತ್ತು ಆ ದಿನದಿಂದ, ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ರೂಢಿ, ಆಚರಣೆ, ಕರಾರು ಅಥವಾ ಕಾನೂನು ಏನೇ ಇದ್ದರೂ, ಯಾರೇ ವ್ಯಕ್ತಿಯು, ಮರಗಳ ಅಧಿಕಾರಿಯ ಪೂರ್ವ ಅನುಮತಿ ಪಡೆದ ಹೊರತು, ತನ್ನ ಮಾಲೀಕತ್ವದಲ್ಲಿ ಅಥವಾ ಅಧಿಭೋಗದಲ್ಲಿ ಅಥವಾ ಅನ್ಯಥಾ ಇರುವ ಯಾವುದೇ ಜಮೀನಿನಲ್ಲಿ ಯಾವುದೇ ಮರವನ್ನು ಕಡಿಯತಕ್ಕದ್ದಲ್ಲ ಅಥವಾ ಕಡಿಯುವಂತೆ ಮಾಡತಕ್ಕದ್ದಲ್ಲ:
[ಪರಂತು, ಮರ ಕಡಿಯುವುದರಲ್ಲಿ, ರಬ್ಬರ್ ಅಥವಾ ಚಹ ಸಾಗುವಳಿಗೆ ಅಥವಾ ಸಾಗುವಳಿಯ ವಿಸ್ತರಣೆಗೆ ಉದ್ದೇಶಿಸಲಾದ ಪ್ರದೇಶಗಳಲ್ಲಿರುವ ಎಲ್ಲ ಮರಗಳನ್ನು ಕಡಿಯುವುದು ಒಳಗೊಂಡಿದ್ದರೆ, ಮರಗಳನ್ನು ಕಡಿಯಲು ಈ ಪ್ರಕರಣದ ಮೇರೆಗೆ ಯಾವುದೇ ಅನುಮತಿಯನ್ನು ನೀಡತಕ್ಕದ್ದಲ್ಲ.’
1. 1998ರ ಅಧಿನಿಯಮ 12ರ ಮೂಲಕ 11.5.1998ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
(2) ಮರವನ್ನು ಕಡಿಯಲು ಇಚ್ಛಿಸುವ ಯಾರೇ ವ್ಯಕ್ತಿಯು, ಆ ಸಂಬಂಧದಲ್ಲಿ ಅನುಮತಿಗಾಗಿ ಸಂಬಂಧಪಟ್ಟ ಮರಗಳ ಅಧಿಕಾರಿಗೆ ಲಿಖಿತದಲ್ಲಿ ಅರ್ಜಿ ಸಲ್ಲಿಸತಕ್ಕದ್ದು. ಅರ್ಜಿಯ ಜೊತೆ ನಿವೇಶನ ಅಥವಾ ಸರ್ವೆ ನಂಬರುಗಳು, ಕಡಿಯಲು ಕೋರಲಾದ ಮರಗಳ ಸಂಖ್ಯೆ, ತರಹೆ ಮತ್ತು ಸುತ್ತಳತೆ ಇವುಗಳನ್ನು ಸ್ಪಷ್ಟವಾಗಿ ನಿರ್ದಿಷ್ಟಪಡಿಸಿ ನಿವೇಶನ ನಕ್ಷೆ ಅಥವಾ ಮೋಜಣಿ ನಕ್ಷೆಯನ್ನು ಲಗತ್ತಿಸಿ ಮಾಲೀಕ ಅಥವಾ ಅಧಿಭೋಗದಾರನ ಸಹಮತಿ ಪಡೆದು ಮರ ಕಡಿಯಲು ಕಾರಣಗಳನ್ನು ತಿಳಿಸತಕ್ಕದ್ದು.
(3) ಅರ್ಜಿಯನ್ನು ಸ್ವೀಕರಿಸಿದ ಮೇಲೆ, ಮರಗಳ ಅಧಿಕಾರಿಯು, ಮರವನ್ನು ಪರಿಶೀಲಿಸಿದ ನಂತರ ಮತ್ತು ತಾನು ಅವಶ್ಯವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ತರುವಾಯ, ಅನುಮತಿಯನ್ನು ಪೂರ್ಣವಾಗಿ ಅಥವಾ ಭಾಗಶಃ ಮಂಜೂರು ಮಾಡಬಹುದು ಅಥವಾ ಅನುಮತಿಯನ್ನು ನಿರಾಕರಿಸಬಹುದು:
ಪರಂತು, ಆ ಮರವು,-
(i) ಸತ್ತಿದ್ದರೆ, ರೋಗ ಪೀಡಿತವಾಗಿದ್ದರೆ ಅಥವಾ ಗಾಳಿಗೆ ಬಿದ್ದಿದ್ದರೆ; ಅಥವಾ
(ii) ಅರಣ್ಯ ವಿಜ್ಞಾನದನುಸಾರ ಪೂರ್ಣ ಬೆಳವಣಿಗೆಯಾಗಿದ್ದರೆ; ಅಥವಾ
(iii) ಜೀವಕ್ಕೆ ಅಥವಾ ಸ್ವತ್ತಿಗೆ ಅಪಾಯ ಉಂಟು ಮಾಡುವಂತಿದ್ದರೆ; ಅಥವಾ
(iv) ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದರೆ; ಅಥವಾ
(v) ಬೆಂಕಿ, ಸಿಡಿಲು, ಮಳೆ ಅಥವಾ ಇತರ ನೈಸರ್ಗಿಕ ಕಾರಣಗಳಿಂದ ಸಾಕಷ್ಟು ಹಾನಿಗೊಳಗಾಗಿದ್ದರೆ; ಅಥವಾ [(vi) ||ನೇ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿದ ಪ್ರದೇಶಗಳಲ್ಲಿ ಸಾಗುವಳಿಗೆ, ಸಾಗುವಳಿಯ ವಿಸ್ತರಣೆಗೆ ಅಥವಾ ಬೆಳೆ ಸಾಗುವಳಿಯಲ್ಲಿನ ಬದಲಾವಣೆಗಾಗಿ ಅದನ್ನು ತೆಗೆಯಬೇಕಾಗಿದ್ದರೆ (ಹಾಗೆ ತೆಗೆಯುವುದು- ಸಾಗುವಳಿ, ಸಾಗುವಳಿಯ ವಿಸ್ತರಣೆ ಅಥವಾ ಬೆಳೆ ಸಾಗುವಳಿಯ ಬದಲಾವಣೆಗೆ ಉದ್ದೇಶಿಸಲಾದ ಪ್ರದೇಶಗಳಲ್ಲಿ ಎಲ್ಲ ಮರಗಳನ್ನು ಕಡಿಯುವುದನ್ನು ಒಳಗೊಂಡಿಲ್ಲದಿದ್ದ ಹೊರತು) ಅಥವಾ ಅರ್ಜಿದಾರನ ಸದ್ಭಾವಿಕ ಬಳಕೆಗಾಗಿ ಅಗತ್ಯವಿದ್ದರೆ]’
– ಅನುಮತಿಯನ್ನು ನಿರಾಕರಿಸತಕ್ಕದ್ದಲ್ಲ.
1. 1998ರ ಅಧಿನಿಯಮ 12ರ ಮೂಲಕ 11.05.1998ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
[(4) ಮರಗಳ ಅಧಿಕಾರಿಯು, ಈ ಪ್ರಕರಣದ ಅಡಿಯಲ್ಲಿ ಸ್ವೀಕರಿಸಲಾದ ಅರ್ಜಿಯನ್ನು, ಅದನ್ನು ಸ್ವೀಕರಿಸಿದ ದಿನಾಂಕದಿಂದ ಮೂರು ತಿಂಗಳ ಅವಧಿಯೊಳಗೆ ವಿಲೆ ಮಾಡಲು ಸಾಧ್ಯವಿರುವ ಎಲ್ಲ ಪ್ರಯತ್ನವನ್ನು ಮಾಡತಕ್ಕದ್ದು: ಪರಂತು, ಈ ಉಪ ಪ್ರಕರಣದ ಅಡಿಯಲ್ಲಿ ಮೂರು ತಿಂಗಳ ಅವಧಿಯನ್ನು ಲೆಕ್ಕ ಹಾಕುವಾಗ,- (ಎ) ರೆವೆನ್ಯೂ ಪ್ರಾಧಿಕಾರಿಗಳ ಅಭಿಪ್ರಾಯವನ್ನು;
(ಬಿ) ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಂದ ವರದಿಯನ್ನು
(ಸಿ) ಕಡಿಯಲು ಉದ್ದೇಶಿಸಿದ ಮರಗಳ ಅಳತೆಗಳ ಪಟ್ಟಿಯನ್ನು ಅಥವಾ
(ಡಿ) ನಿಯಮಿಸಬಹುದಾದ ಯಾವುದೇ ಇತರ ಸೂಕ್ತ ಮಾಹಿತಿಯನ್ನು
– ಪಡೆಯಲು ಅಗತ್ಯವಿರುವಷ್ಟು ಕಾಲವನ್ನು ಹೊರತುಪಡಿಸತಕ್ಕದ್ದು.]
1. 1998ರ ಅಧಿನಿಯಮ 12ರ ಮೂಲಕ 11.5.1998ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
(5) ಮರ ಕಡಿಯಲು ಅನುಮತಿ ನೀಡಲಾಗಿರುವಲ್ಲಿ, ಮರಗಳ ಅಧಿಕಾರಿಯು, ಮರವನ್ನು ಕಡಿಯುವ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಅಥವಾ ಮರಗಳ ಅಧಿಕಾರಿಯು ಅನುಮತಿಸಬಹುದಾದಂಥ ವಿಸ್ತ್ರತ ಅವಧಿಯೊಳಗೆ, ಅರ್ಜಿದಾರನು. ಅದೇ ಸ್ಥಳದಲ್ಲಿ ಅಥವಾ ಇತರ ಸೂಕ್ತ ಸ್ಥಳದಲ್ಲಿ ಇನ್ನೊಂದು ಮರವನ್ನು ಅಥವಾ ಅದೇ ಜಾತಿಯ ಅಥವಾ ಇತರ ಯಾವುದೇ ಸೂಕ್ತ ತಳಿಯ ಮರಗಳನ್ನು ನೆಡುವ ಷರತ್ತಿಗೊಳಪಟ್ಟು ಆ ಅನುಮತಿಯನ್ನು ನೀಡಬಹುದು.
(6) (1)ರಿಂದ (5)ರ ವರೆಗಿನ ಉಪ ಪ್ರಕರಣಗಳಲ್ಲಿ ಏನೇ ಒಳಗೊಂಡಿದ್ದರೂ, ಆದರೆ, ನಿಯಮಿಸಬಹುದಾದಂಥ ಷರತ್ತುಗಳು ಮತ್ತು ನಿರ್ಬಂಧಗಳಿಗೊಳಪಟ್ಟು, ಒಂದು ಕುಟುಂಬದ ಸದ್ಭಾವಿಕ ಗೃಹ ಬಳಕೆಗಾಗಿ, ಅಂಥ ಕುಟುಂಬದ ಒಬ್ಬ ಸದಸ್ಯನು ಅಥವಾ ಹೆಚ್ಚು ಸದಸ್ಯರು, ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 12.8 ಘನ ಮೀಟರುಗಳಿಗಿಂತ ಹೆಚ್ಚಿಲ್ಲದ ಚೌಬೀನೆ, [ಐವತ್ತು ಕಂಬಗಳು ಮತ್ತು ಬಿದಿರು ಮತ್ತು ಐದು ಟನ್‌ಗಳಷ್ಟು ಸೌದೆ ಸಿಗುವಷ್ಟು ಸಂಖ್ಯೆಯ ಮರಗಳನ್ನು ಕಡಿಯಲು ಅನ್ಯಥಾ ಹಕ್ಕುಳ್ಳವರಾಗಿದ್ದರೆ ಅವರು ಹಾಗೆ ಕಡಿಯಬಹುದು.
1. 1977ರ ಅಧಿನಿಯಮ 21ರ ಮೂಲಕ 29,07,1977ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 1998ರ ಅಧಿನಿಯಮ 12ರ ಮೂಲಕ 11.05.1998ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
[(7) ಈ ಪ್ರಕರಣದಲ್ಲಿರುವುದು ಯಾವುದೂ, [ಕ್ಯಾಸರೀನ, ತೆಂಗು, ಈರಿತಿನ, ನೀಲಗಿರಿ, ಗೈರೆಸಿಡಿಯ, ಹೊಪಿಯಾ ವೈಟಿನಾ, ಪ್ರಾಸಿಪಿಸ್, ರಬ್ಬರ್, ಸೆಸ್ಟನಿಯ, ಸಿಲ್ವರ್ ಓಕ್ ಮತ್ತು ಸುಬಾಬುಲ್ ಮರಗಳನ್ನು ಕಡಿಯುವುದಕ್ಕೆ ಅನ್ವಯವಾಗತಕ್ಕದ್ದಲ್ಲ.]
1. 1977ರ ಅಧಿನಿಯಮ 21ರ ಮೂಲಕ 29.07.1977ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 1987ರ ಅಧಿನಿಯಮ 30ರ ಮೂಲಕ 112.1987ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
[8ಎ. 8ನೇ ಪ್ರಕರಣದ ಅಡಿ ಮಂಜೂರಾದ ಅನುಮತಿಯನ್ನು ರದ್ದುಗೊಳಿಸುವುದು ಅಥವಾ ಅಮಾನತುಗೊಳಿಸುವುದು.- ಮರಗಳ ಅಧಿಕಾರಿಯು, ಈ ಮುಂದೆ ನಿರ್ದಿಷ್ಟಪಡಿಸಿದ ಯಾವುದೇ ಕಾರಣಗಳಿಗಾಗಿ 8ನೇ ಪ್ರಕರಣದ ಅಡಿಯಲ್ಲಿ ಮಂಜೂರಾದ ಅನುಮತಿಯನ್ನು ರದ್ದುಗೊಳಿಸುವುದಕ್ಕೆ ಅಥವಾ ಅಮಾನತುಗೊಳಿಸುವುದಕ್ಕೆ ಮೊದಲು ಮ೦ಜೂರಾತಿ ಪಡೆದವನಿಗೆ ಅಹವಾಲು ಹೇಳಿಕೊಳ್ಳಲು ಅವಕಾಶವನ್ನು ಕೊಟ್ಟು ಮತ್ತು ಅದರ ಕಾರಣಗಳನ್ನು ದಾಖಲು ಮಾಡಿಕೊಂಡು ಹಾಗೆ ರದ್ದುಗೊಳಿಸಬಹುದು ಅಥವಾ ಅಮಾನತುಗೊಳಿಸಬಹುದು, ಎಂದರೆ:-
(ಎ) ಅನುಮತಿ ಪಡೆಯುವುದಕ್ಕಾಗಿ ಸುಳ್ಳು ಅಥವಾ ತಪ್ಪು ಮಾಹಿತಿಯನ್ನು ಒದಗಿಸಿರುವುದು;
(ಬಿ) ಹಕ್ಕಿನ ಸಂಬಂಧದಲ್ಲಿ ದೋಷಗಳು ಪತ್ತೆಯಾಗುವುದು;
(ಸಿ) ಮರ ಕಡಿಯಲು ನೀಡಿರುವ ಅನುಮತಿಯ ದುರ್ಬಳಕೆ;
(ಡಿ) ಮರ ಕಡಿಯಲು ನೀಡಿರುವ ಅನುಮತಿಯ ಷರತ್ತುಗಳನ್ನು ಪೂರೈಸದಿರುವುದು;
(ಇ) ಈ ಅಧಿನಿಯಮದ ಉಪಬಂಧಗಳು ಅಥವಾ ಅದರ ಮೇರೆಗೆ ಮಾಡಲಾದ ನಿಯಮಗಳು ಅಥವಾ ಆದೇಶಗಳ ಯಾವುದೇ ಉಲ್ಲಂಘನೆ;
(ಎಫ್) ಅನುಮತಿ ನೀಡಿಲ್ಲದ ಮರಗಳನ್ನು ಕಡಿಯುವುದು;
(ಜಿ) ಅನುಮತಿ ಪಡೆದವನು ಮತ್ತು ಇತರರ ನಡುವೆ ವಿವಾದ ಇರುವುದು.]
1. 1998ರ ಅಧಿನಿಯಮ 12ರ ಮೂಲಕ 11.5.1998ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
9. ಸಾಕಷ್ಟು ಸಂಖ್ಯೆಯ ಮರಗಳನ್ನು ನೆಡುವುದು. (1) ಭೂಮಿಯ ಪ್ರತಿಯೊಬ್ಬ ಮಾಲೀಕನು ಅಥವಾ ಅಧಿಭೋಗದಾರನು. ಗೊತ್ತುಪಡಿಸಲಾದ ದಿನದಿಂದ ಐದು ವರ್ಷಗಳ ಅವಧಿಯೊಳಗೆ ಅಥವಾ ಮರಗಳ ಅಧಿಕಾರಿಯು ನಿರ್ದಿಷ್ಟಪಡಿಸಬಹುದಾದಂಥ ವಿಸ್ತ್ರತ ಅವಧಿಯೊಳಗೆ 7ನೇ ಪ್ರಕರಣದ (ಸಿ) ಖಂಡದ ಅಡಿಯಲ್ಲಿ ಸದರಿ ಮರಗಳ ಪ್ರಾಧಿಕಾರವು ನಿಯಮಿಸಿದ ಗುಣಮಟ್ಟಗಳಿಗನುಸಾರವಾಗಿರುವಂತೆ ಮರಗಳನ್ನು ನೆಡತಕ್ಕದ್ದು.
(2) ಯಾವುದೇ ಜಮೀನಿನಲ್ಲಿರುವ ಮರಗಳ ಸಂಖ್ಯೆಯು, (1)ನೇ ಉಪ ಪ್ರಕರಣದಲ್ಲಿ ಉಲ್ಲೇಖಿಸಲಾದ ಗುಣಮಟ್ಟಗಳಿಗನುಸಾರವಾಗಿ ಸಾಕಷ್ಟಿಲ್ಲವೆಂದು ಮರಗಳ ಅಧಿಕಾರಿಯು ಅಭಿಪ್ರಾಯಪಟ್ಟರೆ, ಮರಗಳ ಅಧಿಕಾರಿಯು, ಆದೇಶದ ಮೂಲಕ, ಜಮೀನಿನ ಮಾಲೀಕ ಅಥವಾ ಅಧಿಭೋಗದಾರನಿಗೆ ಮನವಿ ಸಲ್ಲಿಸಲು ಸೂಕ್ತ ಅವಕಾಶ ನೀಡಿ, ಆದೇಶದ ಮೂಲಕ ನಿರ್ದಿಷ್ಟಪಡಿಸಬಹುದಾದಷ್ಟು ಮರಗಳನ್ನು ಅಥವಾ ಸಂದರ್ಭಾನುಸಾರ ಹೆಚ್ಚುವರಿ ಮರಗಳನ್ನು ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ಸ್ಥಳಗಳಲ್ಲಿ ನೆಡುವಂತೆ ಅಗತ್ಯಪಡಿಸಬಹುದು.
(3) ಜಮೀನಿನ ಮಾಲೀಕನು ಅಥವಾ ಅಧಿಭೋಗದಾರನು, ಅಂಥ ಆದೇಶವನ್ನು ಸ್ವೀಕರಿಸಿದಂದಿನಿಂದ, ಮೂವತ್ತು ದಿನಗಳೊಳಗಾಗಿ ಅಥವಾ ಈ ಸಂಬಂಧದಲ್ಲಿ ಮರಗಳ ಅಧಿಕಾರಿಯು ಅನುಮತಿಸಬಹುದಾದಂಥ ವಿಸ್ತರಿಸಿದ ಸಮಯದೊಳಗೆ ಅಂಥ ಆದೇಶಗಳನ್ನು ಪಾಲಿಸತಕ್ಕದ್ದು.
10. ಬಿದ್ದ ಅಥವಾ ನಾಶವಾದ ಮರಗಳ ಬದಲಿಗೆ ಮರಗಳನ್ನು ನೆಡುವುದು. (1) ಯಾವುದೇ ಮರವು ಬಿದ್ದಿದ್ದಲ್ಲಿ ಅಥವಾ ಗಾಳಿ, ಬೆಂಕಿ, ಸಿಡಿಲು, ಧಾರಾಕಾರ ಮಳೆ ಅಥವಾ ಅಂಥ ಇತರ ನೈಸರ್ಗಿಕ ಕಾರಣಗಳಿಂದ ನಾಶವಾಗಿದ್ದರೆ, ಮರಗಳ ಅಧಿಕಾರಿಯು, ತಾನಾಗಿಯೇ ಅಥವಾ ಅವನಿಗೆ ಮಾಹಿತಿ ತಿಳಿದ ಮೇಲೆ, ಅವನು ಸೂಕ್ತವೆಂದು ಭಾವಿಸುವಂಥ ವಿಚಾರಣೆಯನ್ನು ನಡೆಸಿದ ತರುವಾಯ, ಆದೇಶದ ಮೂಲಕ, ಹಾಗೆ ಬಿದ್ದ ಅಥವಾ ನಾಶಹೊಂದಿದ ಮರದ ಬದಲಿಗೆ ಅದೇ ತಳಿಯ ಅಥವಾ ಇತರ ತಳಿಯ ಮರ ಅಥವಾ ಮರಗಳನ್ನು ಅದೇ ಸ್ಥಳದಲ್ಲಿ ಅಥವಾ ಆದೇಶದಲ್ಲಿ ನಿರ್ದಿಷ್ಟಪಡಿಸಬಹುದಾದ ಇತರ ಸೂಕ್ತ ಸ್ಥಳದಲ್ಲಿ ನೆಡುವಂತೆ ಅಂಥ ಮಾಲೀಕನನ್ನು ಅಥವಾ ಅಧಿಭೋಗದಾರನನ್ನು ಅಗತ್ಯಪಡಿಸಬಹುದು.
(2) ಜಮೀನಿನ ಮಾಲೀಕನು ಅಥವಾ ಅಧಿಭೋಗದಾರನು, ಅಂಥ ಆದೇಶಗಳನ್ನು ಸ್ವೀಕರಿಸಿದಂದಿನಿಂದ ಮೂವತ್ತು ದಿನಗಳೊಳಗಾಗಿ ಅಥವಾ ಮರಗಳ ಅಧಿಕಾರಿಯು ಅನುಮತಿಸಬಹುದಾದಂಥ ವಿಸ್ತರಿಸಿದ ಸಮಯದೊಳಗೆ ಅದನ್ನು ಪಾಲಿಸತಕ್ಕದ್ದು.









