ಬೆಂಗಳೂರು: ನಾಳೆ ದೇಶಾದ್ಯಂತ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಈ ವೇಳೆ ವಿದ್ಯಾರ್ಥಿಗಳನ್ನು ಸುರಕ್ಷತೆಯ ದೃಷ್ಠಿಯಿಂದ ಧ್ವಜಾರೋಹಣದ ವೇಳೆ ಧ್ವಜ ಕಂಬಕ್ಕೆ ಹತ್ತಿಸುವಂತಿಲ್ಲ ಎಂಬುದಾಗಿ ರಾಜ್ಯ ಸರ್ಕಾರವು ಮಾರ್ಗಸೂಚಿಯಲ್ಲಿ ಖಡಕ್ ಸೂಚನೆ ನೀಡಿದೆ.
ಈ ಕುರಿತಂತೆ ಹಿಂದೆ ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭ ಧ್ವಜಸ್ತಂಭದಲ್ಲಿ ಸಿಲುಕಿದ ಧ್ವಜ ಬಿಡಿಸಲು ಕಂಬವನ್ನೇರಿದಾಗ ಸಂಭವಿಸಿದಂತಹ ಅವಘಡಗಳ ತಡೆಯಲು ವಿದ್ಯಾರ್ಥಿಗಳಿಂದ ಕಂಭ ಹತ್ತಿಸುವುದಕ್ಕೆ ನಿರ್ಬಂಧ ಹೇರಿ ಶಿಕ್ಷಣ ಇಲಾಖೆಯು ಸುತ್ತೋಲೆಯಲ್ಲಿ ತಿಳಿಸಿದೆ.
ಹಿಂದೆ ಗಣರಾಜ್ಯೋತ್ಸವ ಧ್ವಜಾರೋಹಣ ಸಂದರ್ಭ ಧ್ವಜಸ್ತಂಭದಲ್ಲಿ ಸಿಲುಕಿದ ಧ್ವಜ ಬಿಡಿಸಲು ಕಂಬವನ್ನೇರಿದಾಗ ಸಂಭವಿಸಿದಂತಹ ಅವಘಡಗಳ ತಡೆಯಲು ವಿದ್ಯಾರ್ಥಿಗಳಿಂದ ಕಂಭ ಹತ್ತಿಸುವುದಕ್ಕೆ ನಿರ್ಬಂಧ ಹೇರಿ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ. pic.twitter.com/QZuGNgfKgZ
— DIPR Karnataka (@KarnatakaVarthe) January 24, 2026
ಶಾಲಾ ಕಾಲೇಜುಗಳಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಮಕ್ಕಳ ರಕ್ಷಣಾ ನೀತಿ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾರ್ಗಸೂಚಿಯನ್ವಯ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಸುರಕ್ಷತೆಗೆ ಬಗ್ಗೆ ಅಗತ್ಯ ಕ್ರಮವಹಿಸಲು ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಗೆ ಸೂಚನೆಗಳನ್ನು ನೀಡಲಾಗಿರುತ್ತದೆ ಎಂದಿದೆ.
ಮುಂದುವರೆದು ಶಾಲಾ ಕಾಲೇಜುಗಳಲ್ಲಿ ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ರಾಷ್ಟ್ರೀಯ ಹಬ್ಬಗಳು ಹಾಗೂ ಇತರ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭಗಳಲ್ಲಿ ಸಂಭವಿಸಬಹುದಾದ ಅನಿರೀಕ್ಷಿತ ಅವಘಡಗಳ ಸಾಧ್ಯತೆಗಳನ್ನು ಗಮನದಲ್ಲಿರಿಸಿಕೊಂಡು, ಯಾವುದೇ ರೀತಿಯ ಅವಘಡಗಳಾಗದಂತೆ ತಡೆಗಟ್ಟುವ, ನಿವಾರಿಸುವ ಜೊತೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಕೊಂಡಾಗೂ ಅಪಘಾತ ಸಂಭವಿಸಿದಲ್ಲಿ, ಅಂತಹ ಅಪಘಾತಗಳನ್ನು ತ್ವರಿತವಾಗಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನಿರ್ವಹಣೆ ಮಾಡುವ ಜೊತೆಗೆ ಪರಿಸ್ಥಿತಿಯನ್ನು ಶಾಂತಗೊಳಿಸಿ ಮಕ್ಕಳು ಸೇರಿದಂತೆ ಸಾರ್ವಜನಿಕರ ರಕ್ಷಣೆಗೆ ಎಲ್ಲಾ ಶಾಲಾ/ ಕಾಲೇಜುಗಳ ಆಡಳಿತ ಮಂಡಳಿಗಳನ್ನೊಳಗೊಂಡಂತೆ ಪ್ರಾಂಶುಪಾಲರು / ಮುಖ್ಯ ಶಿಕ್ಷಕರು | ಶಿಕ್ಷಕರು ಹಾಗೂ ವ್ಯವಸ್ಥಾಪನ ಸಮಿತಿಗಳು ಈ ಕೆಳಕಂಡ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
1. ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಧ್ವಜಾರೋಹಣ ಕಂಬದ ಬಳಿ ವಿದ್ಯುತ್ ತಂತಿಗಳು ಹಾದುಹೋಗದಂತೆ ಮತ್ತು ಕಂಬವು ವಿದ್ಯುತ್ ತಂತಿಗಳನ್ನು ಸಂಪರ್ಕಿಸದಂತೆ ಮುನ್ನೆಚ್ಚರಿಕೆ ವಹಿಸುವುದು.
2. ಧ್ವಜಾರೋಹಣ ಕಂಬಕ್ಕೆ ಧ್ವಜವನ್ನು ಏರಿಸುವ ಅಥವಾ ಇಳಿಸುವ ಕಾರ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳಬಾರದು. ಧ್ವಜಾರೋಹಣಾ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಧ್ವಜ ಸಿಕ್ಕಿಕೊಂಡಲ್ಲಿ ಯಾವುದೇ ಕಾರಣಕ್ಕೂ ಮಕ್ಕಳನ್ನು ಧ್ವಜಕಂಬಕ್ಕೆ ಹತ್ತಿಸಬಾರದು.
3. ಮಕ್ಕಳ ಕವಾಯತು, ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ, ಮಕ್ಕಳು ಕುಳಿತುಕೊಳ್ಳುವ ಸ್ಥಳಗಳು ಸುರಕ್ಷಿತವಾಗಿರುವ ಬಗ್ಗೆ ಕಾರ್ಯಕ್ರಮದ ಮೊದಲು ಹಾಗೂ ಆಗಿಂದಾಗ್ಗೆ ಪರಿಶೀಲಿಸಿಕೊಳ್ಳತಕ್ಕದ್ದು.
4. ಮಕ್ಕಳನ್ನು ಕಾರ್ಯಕ್ರಮ/ಸ್ಪರ್ಧೆಗಳಿಗೆ ಕರೆದುಕೊಂಡು ಹೋಗುವ ಮತ್ತು ಹಿಂದಿರುಗಿ ಕರೆತರುವ – ವಾಹನಗಳು ಸಮರ್ಪಕವಾಗಿರುವ ಬಗ್ಗೆ ಪರಿಶೀಲಿಸಿಕೊಳ್ಳುವುದು. ವಾಹನ ಚಾಲಕರು ವೇಗಮಿತಿಯಲ್ಲಿ ಚಲಿಸುವಂತೆ ಸೂಚನೆ ನೀಡುವ ಜೊತೆಗೆ ಆಗಿಂದಾಗ್ಗೆ ಗಮನಹರಿಸುವುದು. ಪ್ರಮುಖವಾಗಿ ಚಾಲಕರು ಮಾಡಿರದ ಮದ್ಯಪಾನ ಖಚಿತಪಡಿಸಿಕೊಳ್ಳುವುದು. ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಕರೆದೊಯ್ಯಬಾರದು.
5. ಕಾರ್ಯಕ್ರಮ ನಡೆಸುವ ಎಲ್ಲಾ ಸ್ಥಳಗಳಲ್ಲಿ ಅಳವಡಿಸಿರುವ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸದಿರುವ ಬಗ್ಗೆ ಖಚಿತಪಡಿಸಿಕೊಳ್ಳುವ ಜೊತೆಗೆ ಮಕ್ಕಳು ಸೇರಿದಂತೆ ಸಾರ್ವಜನಿಕರ ಸಂಪರ್ಕಕ್ಕೆ ಬಾರದಂತೆ ವಿದ್ಯುತ್ ತಂತಿಗಳನ್ನು ಅಳವಡಿಸಲು ತಂತ್ರಜ್ಞರಿಗೆ ಸೂಚನೆ ನೀಡುವುದು.
6. ವಿದ್ಯುತ್ ತಂತಿಗಳು ಇರುವಲ್ಲಿ ಮಳೆ ನೀರು ಸೋರದಂತೆ ಮತ್ತು ಇತರ ಯಾವುದೇ ಮೂಲದಿಂದ ನೀರು ಹರಿಯದಿರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು.
7. ಮಕ್ಕಳಿಗೆ ನೀಡುವ ನೀರು, ಪಾನೀಯ, ಆಹಾರ ಪದಾರ್ಥಗಳ ಶುಚಿತ್ವದ ಬಗ್ಗೆ ಪರಿಶೀಲಿಸುವುದು. ಮಕ್ಕಳಿಗೆ ವಿತರಿಸುವ ಪೂರ್ವದಲ್ಲಿ ಕಾರ್ಯಕ್ರಮ ಸಂಯೋಜಕರು ಪರಿಶೀಲಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಂಡ ನಂತರದಲ್ಲಿ ಮಕ್ಕಳಿಗೆ ವಿತರಿಸುವುದು.
8. ಆಹಾರ ತಯಾರಿಸುವ ಸ್ಥಳಗಳಿಗೆ ಮಕ್ಕಳ ಪ್ರವೇಶವನ್ನು ನಿರ್ಬಂಧಿಸುವ ಜೊತೆಗೆ ಯಾವುದೇ ರೀತಿಯ ಬೆಂಕಿ ಸಿಲಿಂಡರ್ ಅವಘಡವಾಗದಂತೆ ಗ್ಯಾಸ್ ಸೇರಿದಂತೆ ಒಲೆಗಳು ಸಮರ್ಪಕವಾಗಿರುವ ಬಗ್ಗೆ ಆಗಿಂದಾಗ್ಗೆ ಪರಿಶೀಲಿಸಿ ನಿಗಾ ವಹಿಸುವುದು.
9. ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಸಮರ್ಪಕವಾಗಿ ವಾಹನ ನಿಲುಗಡೆ ಮಾಡಲು ಸೂಚನಾ ಫಲಕಗಳನ್ನು ಅಳವಡಿಸಿ, ವ್ಯವಸ್ಥಿತವಾಗಿ ವಾಹನ ನಿಲುಗಡೆ ಮಾಡುವಂತೆ ನಿರ್ದೇಶನ ನೀಡಿ, ಕಾರ್ಯಕ್ರಮದ ಸ್ಥಳದಿಂದ ಕನಿಷ್ಟ 100 ಮೀಟರ್ ದೂರದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವುದು.
10. ಅನಿರೀಕ್ಷಿತವಾಗಿ ಸಂಭವಿಸಬಹುದಾದ ಸನ್ನಿವೇಶಗಳನ್ನು ಎದುರಿಸುವ ಕುರಿತು ಮಕ್ಕಳಿಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು. ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡುವುದು. 11.ಎಲ್ಲಾ ಶಾಲೆಗಳ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ
ಸಮಿತಿಯ ಸದಸ್ಯರು ಕಾರ್ಯಕ್ರಮದ ಆಯೋಜನೆಯಲ್ಲಿ ತೊಡಗಿಸಿಕೊಳ್ಳುವಂತೆ ನಿರ್ದೇಶನ ನೀಡುವುದು;
12. ಸ್ಥಳೀಯ ಆಡಳಿತಗಳು ಮಕ್ಕಳ ಸುರಕ್ಷತೆ ಕುರಿತು ಗಮನ ಹರಿಸುವುದು.
13.ಎಲ್ಲಾ ಕಾರ್ಯಕ್ರಮಗಳ ಆಯೋಜಕರು, ಸ್ಥಳೀಯ ಪೊಲೀಸ್, ವೈದ್ಯಕೀಯ ವ್ಯವಸ್ಥೆ, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಆಡಳಿತಕ್ಕೆ ಮಕ್ಕಳ ಕಾರ್ಯಕ್ರಮದ ಕುರಿತು ಕಡ್ಡಾಯವಾಗಿ ಮಾಹಿತಿ ಒದಗಿಸಿ, ಯಾವುದೇ ತುರ್ತು ಸಂದರ್ಭದಲ್ಲಿ ಪ್ರತಿಕ್ರಿಯಿಸಲು ಸದಾ ಸನ್ನದ್ದ ಸ್ಥಿತಿಯಲ್ಲಿರುವಂತೆ ತಿಳಿಸತಕ್ಕದ್ದು ಎಂದಿದ್ದಾರೆ.


ಕರ್ನಾಟಕದಲ್ಲಿ ಎರಡೂವರೆ ವರ್ಷದಿಂದ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಮಾಡಿಲ್ಲ: ಬಿವೈ ವಿಜಯೇಂದ್ರ
ಸ್ವಿಮ್ಮಿಂಗ್ ಪೂಲ್ ನಲ್ಲಿ ಮಹಿಳೆ ಶವವಾಗಿ ಪತ್ತೆ: ಪತಿಯಿಂದಲೇ ಕೊಲೆ ಶಂಕೆ








