ಬೆಂಗಳೂರು : ರಾಜ್ಯದಲ್ಲಿ ದ್ವೇಷ ಭಾಷಣ ಕಾಯ್ದೆ ಜಾರಿಗೂ ಮುನ್ನವೇ ಬಿಜೆಪಿ ಮುಖಂಡ ವಿಕಾಸ್ ಪುತ್ತೂರ್ ಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪೊಲೀಸ್ ಠಾಣೆಯಿಂದ ಬಿಜೆಪಿ ಮುಖಂಡ ವಿಕಾಸ್ ಪುತ್ತೂರ್ ಗೆ ನೋಟಿಸ್ ಜಾರಿ ಮಾಡಲಾಗಿದೆ.
ಕಾಂಗ್ರೆಸ್ ಸರ್ಕಾರದ ತುಘಲಕ್ ದರ್ಬಾರ್ ಅಡಿಯಲ್ಲಿ ಪೊಲೀಸ್ ಇಲಾಖೆ ಕೂಡ ಮನಬಂದಂತೆ ನಡೆದುಕೊಳ್ಳುತ್ತಿದೆಯೇ? ಅಥವಾ ಕಾಂಗ್ರೆಸ್ ನಾಯಕರ ಕೈಗೊಂಬೆಯಂತೆ ವರ್ತಿಸುತ್ತಿದೆಯೇ? ಪಕ್ಷದ ಕಾರ್ಯಕರ್ತ ಶ್ರೀ ವಿಕಾಸ್ ಪುತ್ತೂರು ಅವರಿಗೆ ಪೊಲೀಸರು, ಹಿಂದೂ ಸಮಾಜೋತ್ಸವ ಶೋಭಾಯಾತ್ರೆಗೆ ಸಂಬಂಧಿಸಿದಂತೆ, ಇನ್ನೂ ಜಾರಿಯಾಗದ ದ್ವೇಷ ಭಾಷಣ ಮಸೂದೆ 2025 ರ ಉಲ್ಲಂಘನೆ ಮಾಡದಂತೆ ನೋಟಿಸ್ ನೀಡಿರುವುದು ಕಾಂಗ್ರೆಸ್ ಸರ್ಕಾರದ ಬೌದ್ಧಿಕ ದಿವಾಳಿತನಕ್ಕೂ ಕನ್ನಡಿ ಹಿಡಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಪೊಲೀಸರು ನೀಡಿದ ನೋಟಿಸ್ ನಲ್ಲಿ ಏನಿದೆ?
ಈ ಮೂಲಕ ನಿಮಗೆ ತಿಳಿಯಪಡಿಸುವುದೇನೆಂದರೆ, ದಿನಾಂಕ:-24-01-2026 ರಂದು ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಹಾಗೂ ಸಾರ್ವಜನಿಕ ಸಮಾರಂಭವನ್ನು ಬಯಲು ರಂಗಮಂದಿರ ತರೀಕೆರೆಯಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮಕ್ಕೆ ದಿಕ್ಕೂಚಿ ಭಾಷಣಕಾರರಾಗಿ ನೀವು ಆಗಮಿಸಿದ್ದು, ನೀವು ಹಿಂದೂ ಭಾಂದವರನ್ನು ಉದೇಶೀಸಿ ಭಾಷಣ ಮಾಡಲಿದ್ದು, ತಾವುಗಳು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಕಾರ್ಯಕ್ರದಲ್ಲಿ ಭಾಷಣವನನು ಮಾಡಲು ಈ ಮೂಲಕ ನಿಮಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿರುತ್ತದೆ.
1. ನೀವುಗಳು ಸಭೆಯನ್ನು ಉದ್ದೇಶಿಸಿ ಭಾಷಣ ಮಾಡುವ ಸಮಯದಲ್ಲಿ ಅನ್ಯ ಕೋಮಿನ ಸಮುದಾಯದವರ ಭಾವನೆಗಳಿಗೆ ದಕ್ಕೆ ಉಂಟಾಗದಂತೆ ನೋಡಿಕೊಳ್ಳುವುದು.
2. ತಾವು ಮಾಡುವ ಭಾಷಣವು ಯಾವುದೇ ಗುಂಪಿನ ವಿರುದ್ಧ ದ್ವೇಷ, ಹಿಂಸೆ ಪ್ರಚೋದನೆಗೆ ಒಳಪಡಬಾರದು.
3. ಶೋಭಾಯಾತ್ರೆಯ ಸಮಯದಲ್ಲಿ ತಾವುಗಳು ತರೀಕೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕಾರ್ಯಕ್ರಮಮ ಹಮ್ಮಿಕೊಂಡಿದ್ದು ಶಾಂತ ರೀತಿಯಲ್ಲಿ ಸಾರ್ವಜನಿಕರಿಗೆ ಮತ್ತು ಸುಗುಮ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದು.
4. ಘನ ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ದ್ವೇಷ ಭಾಷಣ ಮಸೂದೆ-2025 ಅನ್ವಯ ಸದರಿ ಕಾಯ್ದೆ ಉಲ್ಲಂಘನೆಯಾಗದ ರೀತಿಯಲ್ಲಿ ಕಾರ್ಯಕ್ರಮವನ್ನು ನೆಡೆಸಿಕೊಂಡು ಹೋಗುವುದು. ತಪ್ಪಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.









