ಬೆಂಗಳೂರು: ಬೆಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಾಯಿ ಹುಡುಕಲು ಹೋದ ಬಾಲಕ ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ತ್ಯಾಮಗೊಂಡ್ಲು ಹೋಬಳಿಯ ಮುದ್ದಲಿಂಗನಹಳ್ಳಿ ರೈಲ್ವೆ ಗೇಟ್ ಬಳಿ ನಾಯಿ ಹುಡುಕಲು ಹೋದ ಬಾಲಕ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ದಾಸೇಹಳ್ಳಿಯ ಶ್ರೀನಿವಾಸ್, ಚೆನ್ನಮ್ಮ ದಂಪತಿಯ ಪುತ್ರ ಯೋಗೇಂದ್ರ(14) ಮೃತಪಟ್ಟ ಬಾಲಕ.
ಮುದ್ದಲಿಂಗನಹಳ್ಳಿ ಗ್ರಾಮದಲ್ಲಿ ಕುಟುಂಬದವರು ವಾಸವಾಗಿದ್ದು, ಬಾಲಕ 8ನೇ ತರಗತಿ ಓದುತ್ತಿದ್ದ. 4 ದಿನಗಳ ಹಿಂದೆ ಯೋಗೇಂದ್ರ ಸಾಕಿದ ನಾಯಿ ನಾಪತ್ತೆಯಾಗಿತ್ತು ಹೀಗಾಗಿ ಯೋಗೇಂದ್ರ ನಾಯಿ ಹುಡುಕಲು ಹೋಗಿದ್ದಾನೆ. ಶುಕ್ರವಾರ ಮುದ್ದಲಿಂಗನಹಳ್ಳಿ ರೈಲ್ವೆ ಹಳಿಯಲ್ಲಿ ಹುಡುಕಾಡುತ್ತಿದ್ದಾಗ ವೇಗವಾಗಿ ಬಂದ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾನೆ. ಯಶವಂತಪುರ ರೈಲ್ವೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








