ಬೆಂಗಳೂರು: ನಾನು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯ ನೋಟಿಸ್ ಕೊಟ್ಟಿದ್ದೇನೆ. ಅವರು ಸಮರ್ಪಕ ಉತ್ತರ ಕೊಡದೇ ಇದ್ದಲ್ಲಿ 5 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಅವರು ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪದೇಪದೇ ಅವರು ಸಿಗಂದೂರು ದೇವಸ್ಥಾನದ ವಿಷಯ ಪ್ರಸ್ತಾಪ ಮಾಡುತ್ತಾರೆ. ಹಾಲಪ್ಪ ಅವರು ಶಾಸಕರಾಗಿದ್ದಾಗ ಸಿಗಂದೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವ ಪ್ರಯತ್ನ ಮಾಡಿದ್ದರೆಂದು ಸುಳ್ಳು ಹೇಳುತ್ತಿದ್ದಾರೆ. ನಾನು ಯಾವತ್ತೂ ಸಿಗಂದೂರು ದೇವಸ್ಥಾನವನ್ನು ಮುಜರಾಯಿಗೆ ಸೇರಿಸುವುದಾಗಲೀ, ಸರಕಾರದ ವಶಕ್ಕೆ ಪಡೆಯುವ ಕುರಿತು ಕನಸು ಮನಸಲ್ಲೂ ಎಣಿಸಿಲ್ಲ. ಆ ರೀತಿ ಯಾವ ಪ್ರಯತ್ನವನ್ನೂ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ತಂದೆ, ತಾಯಿ, ಅಜ್ಜ ಅಜ್ಜಿ ಕಾಲದಿಂದಲೂ ಸಿಗಂದೂರು ದೇವಸ್ಥಾನದ ಭಕ್ತರು. ನಾನೂ ಅದರ ಭಕ್ತ. ಸಮಯ ಬಂದಾಗಲೆಲ್ಲ ದೇವಸ್ಥಾನದ ಪರವಾಗಿ ನಿಂತಿದ್ದೇವೆ. ಅದು ದೇವಸ್ಥಾನದ ಆಡಳಿತ ಮಂಡಳಿ ಪರವಾಗಿಯೂ ಅಲ್ಲ; ಭಟ್ಟರ ಪರವಾಗಿಯೂ ಅಲ್ಲ. ಎಲ್ಲರ ಪರವಾಗಿ ದೇವಸ್ಥಾನ ಉಳಿಯಬೇಕು, ಬೆಳೆಯಬೇಕೆಂಬ ಪ್ರಯತ್ನ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಸರಕಾರ ವಹಿಸಿಕೊಳ್ಳಲಿ, ಮುಜರಾಯಿ ವಹಿಸಿಕೊಳ್ಳಲೆಂದು ಯಾವತ್ತೂ ಹೇಳಿಲ್ಲ ಎಂದು ವಿವರಿಸಿದರು.
ನಾನು ಅಲ್ಲಗಳೆದ ಬಳಿಕವೂ ಗೋಪಾಲಕೃಷ್ಣ ಅವರು ಪದೇಪದೇ ಹೇಳಿದ್ದಾರೆ. ಹಾಲಪ್ಪನವರು ಇದನ್ನು ಮುಜರಾಯಿಗೆ ವಹಿಸಬೇಕೆಂಬ ಪ್ರಯತ್ನ ಮಾಡಿದ್ದಾಗಿ ವಿವಿಧ ಪತ್ರಿಕೆಗಳಲ್ಲಿ ಬಂದಿದೆ ಎಂದು ದೈನಿಕವನ್ನು ಪ್ರದರ್ಶಿಸಿದರು. ಅವರು ಆಟಾಟೋಪದ ಮಾತನ್ನಾಡುತ್ತಾರೆ. ಆದರೆ, ನಾವು ಅಂಥ ಪ್ರಯತ್ನವನ್ನು ಯಾವತ್ತೂ ಮಾಡಿಲ್ಲ ಎಂದು ತಿಳಿಸಿದರು.
ಸಿಗಂದೂರು ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರಿದ್ದಾರೆ. ಅವರಲ್ಲಿ, ದೇವಸ್ಥಾನದ ಅರ್ಚಕರಲ್ಲಿ, ಆಡಳಿತ ಮಂಡಳಿ, ಧರ್ಮದರ್ಶಿಗಳಲ್ಲಿ ತಪ್ಪು ಭಾವನೆ ತರತಕ್ಕಂಥ ಕೆಲಸ ಮಾಡಿ ನನ್ನ ಮಾನ ಹರಾಜು ಹಾಕಬೇಕೆಂದು ಹಾಗೂ ನನಗೆ ಕೆಟ್ಟ ಹೆಸರು ತರಬೇಕೆಂದು ಸತತ ಪ್ರಯತ್ನ ಮಾಡುತ್ತಿದ್ದಾರೆ. ನಾನು ಅಂಥದ್ದೇನೂ ಮಾಡಿಲ್ಲ ಎಂದು ಅನೇಕ ಸಲ ಹೇಳಿದ್ದೇನೆ. ಆದರೂ ಪದೇಪದೇ ಹೇಳಿ ನನ್ನ ತೇಜೋವಧೆ ಮಾಡುವ, ಭಕ್ತರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು. ಈ ಸಂಬಂಧ ಅವರಿಗೆ ಕಾನೂನಿನಡಿ ನೋಟಿಸ್ ಕೊಟ್ಟಿದ್ದಾಗಿ ಹೇಳಿದರು.
5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಲಿದ್ದೇನೆ. ಇಲ್ಲವೇ ಬೇಷರತ್ ಕ್ಷಮೆ ಕೇಳಬೇಕು ಅಥವಾ ನಿಮ್ಮ ಬಳಿ ಸಾಕ್ಷ್ಯಾಧಾರ ಇದ್ದರೆ ಒದಗಿಸಬೇಕು ಎಂದು ತಿಳಿಸಿರುವುದಾಗಿ ಹೇಳಿದರು. ಅವರು, ಅವರ ಕುಟುಂಬದವರು ಈ ದೇವಸ್ಥಾನವನ್ನು ಮುಜರಾಯಿಗೆ ವಹಿಸಿ ಕೊಡಬೇಕೆಂದು ಹೇಳಿದ್ದಿದೆ ಎಂದು ಆರೋಪಿಸಿದರು.
ರಾಜಕೀಯದಲ್ಲಿ ಸುಳ್ಳು ಹೇಳುತ್ತಾರೆ; ಅಭಿವೃದ್ಧಿಯ ವಿಷಯದಲ್ಲೂ ಸುಳ್ಳು ಹೇಳುತ್ತಾರೆ. ಆದರೆ, ದೇವರ ವಿಷಯದಲ್ಲಿ ಸುಳ್ಳು ಹೇಳುವ ಇವರಿಗೆ ಕಾನೂನು ಕ್ರಮವೇ ಸರಿಯಾದುದೆಂದು ನೋಟಿಸ್ ಕೊಟ್ಟಿದ್ದೇನೆ ಎಂದು ತಿಳಿಸಿದರು.
ನಿಮ್ಮ ಮನಿ ಲೋನ್ ಋಣ ತೀರಿಸಲು, ಈ ಗುಪ್ತ ರಹಸ್ಯ ತಂತ್ರ ಪ್ರಯೋಗ ಮಾಡಿ ಸಾಕು
ನಾವು ಅನುದಾನದ ವಿಚಾರದಲ್ಲಿ ದಾಖಲೆ ಸಹಿತ ಮಾತು: ಸಾಗರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್








